ಬೆಂಗಳೂರು, ಫೆಬ್ರವರಿ ೨೨:ರಾಜ್ಯ ಬಿಜೆಪಿ ಸರಕಾರ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿರುವ `ಗೋಹತ್ಯಾ ನಿಷೇಧ ತಿದ್ದುಪಡಿ ಮಸೂದೆ 2010' ಸಂಘ ಪರಿವಾದ ಗುಪ್ತ ಕಾರ್ಯಸೂಚಿ ಜಾರಿಗೊಳಿಸುವಿಕೆಯ ಭಾಗವಾಗಿದೆ ಎಂಬ ಅಭಿಪ್ರಾಯ ಫೆಬ್ರವರಿ 17 ರಂದು ಬೆಂಗಳೂರಿನಲ್ಲಿ ನಡೆದ `ದುಂಡು ಮೇಜಿನ ಸಭೆಯಲ್ಲಿ' ವ್ಯಕ್ತವಾಗಿದೆ.
ಎಡಪಕ್ಷಗಳು, ಎಐಡಿಎಂಕೆ, ದಲಿತ-ಅಲ್ಪಸಂಖ್ಯಾತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ಸಂಯುಕ್ತ ವೇದಿಕೆಯಾಗಿರುವ `ನಾಗರಿಕ ರಂಗ' ಶಾಸಕರ ಭವನದ ಸಮ್ಮೇಳನ ಸಭಾಂಗಣದಲ್ಲಿ `ಗೋಹತ್ಯೆ ನಿಷೇಧ ಕಾಯ್ದೆ ಆಹಾರ ಸಂಸ್ಕೃತಿ ರಕ್ಷಣೆ' ಎಂಬ ವಿಷಯದಲ್ಲಿ ದುಂಡು ಮೇಜಿನ ಸಭೆ ಏರ್ಪಡಿಸಿತ್ತು. ಹಲವಾರು ಪ್ರಗತಿಪರ ಚಳುವಳಿಯ ಮುಖಂಡರು, ರಾಜಕೀಯ, ಸಾಮಾಜಿಕ ಸಂಘಟನೆಗಳ ಪ್ರಮುಖರು ಈ ಸಭೆಯಲ್ಲಿ ಮಾತನಾಡಿದರು.
ರಾಜ್ಯಾಂಗದ ನಿರ್ದೇಶಕ ತತ್ವಗಳು, 1964 ರ ಗೋಹತ್ಯೆ ನಿಷೇಧ ಕಾಯ್ದೆ, ರಾಜ್ಯ ಸರಕಾರದ ಉದ್ದೇಶಿತ ತಿದ್ದುಪಡಿಗಳು, ಈ ಕಾಯ್ದೆ ಜಾರಿಯಿಂದ ಆರ್ಥಿಕ, ಆಹಾರದ ಹಕ್ಕಿನ ಹಾಗೂ ಬಹು ಸಂಸ್ಕೃತಿಯ ಮೇಲಾಗುವ ಪರಿಣಾಮಗಳು. ಈ ಕಾಯ್ದೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಸಮತೋಲನದ ಮತ್ತು ಭಾವನಾತ್ಮಕ ಚರ್ಚೆಗಳು ಹಾಗೂ ಒಟ್ಟು ಸಾಧಕ, ಬಾಧಕಗಳ ಸಮಗ್ರ ಪರಾಮರ್ಶೆ, ಮುಂದಿನ ಹೋರಾಟದ ಆಯಾಮಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸಲಾಯಿತು.ಫೆಬ್ರವರಿ
25 ರಂದು ಪ್ರತಿಭಟನೆ
ರೈತರ ಹಿತಾಸಕ್ತಿಗೆ ವೈವಿಧ್ಯ ಆಹಾರ ಪದ್ಧತಿಯ ರಕ್ಷಣೆಗಾಗಿ, ಕೋಮುವಾದೀ ದುರುದ್ದೇಶ ವಿರೋಧಿಸಿ ಗೋಹತ್ಯೆ ನಿಷೇದದ ಕಾಯ್ದೆಗೆ ಪ್ರತಿಗಾಮಿ ತಿದ್ದುಪಡಿ ಪ್ರತಿಭಟಿಸಿ ರಾಜ್ಯದಾದ್ಯಂತ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಫೆಬ್ರವರಿ 25 ರಂದು ಚಳುವಳಿ ನಡೆಸಲು ಸಿಪಿಐ(ಎಂ) ಕರೆ ನೀಡಿದೆ.
ಸೌಜನ್ಯ: ಜನಶಕ್ತಿ