ಬೆಂಗಳೂರು, ಜನವರಿ 4:ಅಗ್ನಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬುದ್ಧಿ ಕಲಿಸಲು ರಾಮಾಯಣದಲ್ಲಿ ಸೀತೆಯನ್ನೇ ಕಾಡಿಗೆ ಅಟ್ಟಿದಂತಹ ಪ್ರಜೆ ಹುಟ್ಟಿ ಬರಬೇಕಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ತಿಳಿಸಿದ್ದಾರೆ.
ನಗರದಲ್ಲಿಂದು ಕೊಳಗೇರಿ ನಿವಾಸಿ ನಾಯಕರ ಸಮಾವೇಶದಲ್ಲಿ ಮಾತನಾಡಿದ ಅವರು, ಕನ್ನಡ ನಾಡಿನ ಭುವನೇಶ್ವರಿ ಬಂಜೆಯಲ್ಲ. ನಾಯಕತ್ವ ವಹಿಸಿಕೊಳ್ಳಲು ಹೋರಾಟದ ಕೆಚ್ಚಿರುವ ನೂರಾರು ಮಂದಿಗೆ ಜನ್ಮ ನೀಡಿದ್ದಾಳೆ. ಎಂದು ಮಾರ್ಮಿಕವಾಗಿ ನುಡಿದರು.
ಅಗ್ನಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಯಡಿಯೂರಪ್ಪ ಮುಂದೇನು ಮಾಡುತ್ತಾರೆ ಕಾದು ನೋಡೋಣ. ನಾವೇನಾದರೂ ಮಾತನಾಡಿದರೆ ಯಡಿಯೂರಪ್ಪ ಅವರಿಗೆ ಕಿವಿಯೇ ಕೇಳುವುದಿಲ್ಲ. ಅದರ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದರೆ ನಾವು ಮೂರ್ಖರಾಗುತ್ತೇವೆ.
ಅಕ್ರಮ-ಸಕ್ರಮಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆ ಎದುರು ನೋಡುತ್ತಿದ್ದು, ಅದು ಪ್ರಕಟಗೊಂಡ ನಂತರ ಹೋರಾಟ ಆರಂಭಿಸಲಾಗುವುದು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ೩೬ ಸಾವಿರ ಕೋಟಿ ರುಪಾಯಿ ಬೆಲೆ ಬಾಳುವ ಸರ್ಕಾರಿ ಆಸ್ತಿ ಒತ್ತುವರಿ ಪತ್ತೆಹಚ್ಚಿ, ಆ ಪೈಕಿ ಬಡವರಿಗೆ ಉಚಿತವಾಗಿ ನಿವೇಶನ ಹಂಚಲು ೮೦೦ ಎಕರೆ ನೀಡಲಾಗಿತ್ತು. ಎಂ.ಎಲ್.ಎ.ಗಳಿಗೆ ನಿವೇಶನ ಹಂಚಲು ಅಲ್ಲ.
ಗಣಿ ಹಾಗೂ ನೈಸ್ ಹಣದ ನಡುವೆ ನಾವು ಜಗಳವಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂಥ ಪರಿಸ್ಥಿತಿಯಲ್ಲಿ ಚುನಾವಣೆ ಎದುರಿಸಬೇಕು. ಚುನಾoಣೆ ಸಂದರ್ಭದಲ್ಲಿ ಮೇಲ್ವರ್ಗದವರೂ ಹಣ ಹಾಗೂ ಉಡುಗೊರೆಗಳನ್ನು ಅಪೇಕ್ಷೆ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಲುಷಿತ ಸಮಾಜ ಸರಿಪಡಿಸಲು ಪ್ರಧಾನಿ ಗಮನ ಹರಿಸಬೇಕು. ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ಬಡವರ ಕೈಗೆ ಅಧಿಕಾರ ಬರಲಿದೆ. ನಾನು ಬದುಕಿರುವವರೆವಿಗೂ ಬಡವರ ಪರವಾಗಿ ಹೋರಾಟ ನಡೆಸುತ್ತೇನೆ ಎಂದರು.
ಶೈಕ್ಷಣಿಕವಾಗಿ ತಳಪಾಯ ಹಾಕುವ ಶಿಕ್ಷಕರಿಗೆ ಕಡಿಮೆ ವೇತನ, ಉನ್ನತ ಶಿಕ್ಷಣಕ್ಕೆ ಯುಜಿಸಿ ದುಬಾರಿ ವೇತನ ನೀಡುತ್ತಿರುವುದರಲ್ಲಿ ಅರ್ಥವಿದೆಯೇ ಎಂದು ಪ್ರಶ್ನಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೈಸ್ ಸಂಸ್ಥೆಗೆ ಹೆಚ್ಚುವರಿ ಜಮೀನು ನೀಡಲು ಮೂಲ ಒಪ್ಪಂದಕ್ಕೆ ವಿರುದ್ಧವಾಗಿ ಅಡ್ವೋಕೇಟ್ ಜನರಲ್ ಸುಪ್ರೀಂ ಕೋರ್ಟಿಗೆ ಹೇಳಿಕೆ ನೀಡಿದ್ದಾರೆ. ರಾಜ್ಯದ ಹಿತಾಸಕ್ತಿ ಕಡೆಗಣಿಸಿ ನೈಸ್ ಸಂಸ್ಥೆಗೆ ಸರ್ಕಾರ ಮತ್ತು ಅಡ್ವೋಕೇಟ್ ಜನರಲ್ ಅವರು ಮಾಡಿಕೊಟ್ಟಿರುವ ಅನುಕೂಲ ಹಾಗೂ ಬಡ ರೈತರನ್ನು ಇದಕ್ಕಾಗಿ ಒಕ್ಕಲೆಬ್ಬಿಸುವುದರ ಬಗ್ಗೆ ಬಹಿರಂಗ ಪತ್ರ ಬರೆದಿದ್ದೇನೆ.
ಬಡವರ ಪರವಾಗಿ ಹೋರಾಡಲು ಹುಟ್ಟಿದ್ದೇನೆ. ಬದುಕಿರುವವರೆಗೂ ಹೋರಾಟ ಮಾಡುತ್ತೇನೆ ಎಂದರು.ಬಿಜೆಪಿಯವರು ಹೋಟೆಲ್, ರೆಸಾರ್ಟ್ಸ್ ಸೇರಿದಂತೆ ಎಲ್ಲಾದರೂ ಶಾಸಕಾಂಗ ಪಕ್ಷದ ಸಭೆ ನಡೆಸಲಿ. ರಾಜ್ಯದ ಜನರ ಹಿತ ಕಾಪಾಡಿದರೆ ಸಾಕು ಎಂದರು.