ದಾವಣಗೆರೆ/ ಸಾಗರ, ನ.೪: ಅತ್ತ ಬಿಜೆಪಿ ಸಚಿವರು, ಶಾಸಕರು ನಾಯಕತ್ವ ಬಿಕ್ಕಟ್ಟು ಶಮನದಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಇದರಿಂದ ಬೇಸತ್ತ ಜನತೆ ವಿನೂತನ ಹೋರಾಟಗಳಿಗೆ ಇಳಿದಿದ್ದಾರೆ.
ಭೀಕರ ಪ್ರವಾಹದಿಂದ ನಲುಗಿದ ಉತ್ತರ ಕರ್ನಾಟಕದಲ್ಲಿ ಪರಿಹಾರ, ನೆರವು ಕಾರ್ಯ ಕೈಗೊಳ್ಳುವುದು ಬಿಟ್ಟು ರಾಜಕೀಯ ಹಿತಾಸಕ್ತಿಗಳ ಬಗ್ಗೆಯೇ ಸರ್ಕಾರದ ಪ್ರತಿನಿಧಿಗಳು ಚಿಂತಿಸುತ್ತಿರುವ ಬಗ್ಗೆ ಕೋಪೋದ್ರಿಕ್ತರಾಗಿರುವ ಜನತೆ ಬೀದಿಗೆ ಇಳಿದಿದ್ದಾರೆ.
‘ಸಂತ್ರಸ್ತ ಶಾಸಕರಿಗೆ’ ನೀಡುವ ಸಲುವಾಗಿ ದಾವಣಗೆರೆಯಲ್ಲಿ ಹಳೆ ಚಪ್ಪಲಿ, ಮದ್ಯ, ಬಳೆ, ಮಾಂಸ, ಇಡೀ ಕೋಳಿಗಳು ಮುಂತಾದ ವಸ್ತುಗಳನ್ನು ದೇಣಿಗೆಯಾಗಿ ಸಂಗ್ರಹಿಸಲಾಗಿದ್ದರೆ, ಅತ್ತ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜಾಗೃತ ನಾಗರಿಕರು ತಮ್ಮ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿ ಹಲವಾರು ಶಾಸಕರು ಅಪಹರಣಗೊಂಡಿದ್ದಾರೆಂದು ಪೊಲೀಸರಿಗೇ ದೂರು ನೀಡಿದ್ದಾರೆ!
ಗುಂಡು-ತುಂಡು ಸಂಗ್ರಹ: ಅಧಿಕಾರ ಲಾಲಸೆ, ಸ್ವಾರ್ಥ ರಾಜಕಾರಣಕ್ಕಾಗಿ ಭಿನ್ನಮತದಿಂದ ತತ್ತರಿಸಿರುವ ಬಿಜೆಪಿಯ ‘ರೆಸಾರ್ಟ್ ಸಂತ್ರಸ್ತ’ ಸಚಿವರು, ಶಾಸಕರ ಸಹಾಯಾರ್ಥ ಜಿಲ್ಲಾ ಯುವ ಕಾಂಗ್ರೆಸ್ ದಾವಣಗೆರೆಯಲ್ಲಿ ಬುಧವಾರ ಪಾದಯಾತ್ರೆ ನಡೆಸುವ ಮೂಲಕ ದೇಣಿಗೆ ಸಂಗ್ರಹಿಸಿ ವಿನೂತನವಾಗಿ ಪ್ರತಿಭಟಿಸಿತು.
ಭಿನ್ನಮತ, ಆಂತರಿಕ ಕಚ್ಚಾಟದಿಂದ ತತ್ತರಿಸಿರುವ ಬಿಜೆಪಿ ಸರ್ಕಾರದ ‘ಅಧಿಕಾರ ಸಂತ್ರಸ್ತ’ ಸಚಿವರು, ಶಾಸಕರಿಗೆ ಹಳೆ ಚಪ್ಪಲಿ, ಬಿಯರ್, ಬ್ರಾಂಡಿ ಬಾಟಲಿ, ಕೋಳಿ, ಮಾಂಸ, ಹೊಸ ಬಳೆ, ೫೦ ಪೈಸೆ, ೧ ರುಪಾಯಿ ನಾಣ್ಯ... ಹೀಗೆ ಹೇಳುವುದಕ್ಕೂ ಮುಜುಗರವಾಗುವಂತಹ ವಸ್ತುಗಳನ್ನು ಬಿಜೆಪಿಯ ‘ಅಧಿಕಾರ ಸಂತ್ರಸ್ತ’ ಸಚಿವರು, ಶಾಸಕರಿಗಾಗಿ ಜನತೆ ನೀಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಶೆಟ್ಟಿ, ಉತ್ತರ ಕರ್ನಾಟಕದಲ್ಲಿ ಲಕ್ಷಾಂತರ ಜನತೆ ಸಂತ್ರಸ್ತರಾಗಿದ್ದಾರೆ. ನಿತ್ಯ ನರಕದ ಬದುಕನ್ನು ಆ ಜನ ಬಾಳುತ್ತಿದ್ದಾರೆ. ಇದ್ದ ಸೂರು ಸಹ ಅತಿವೃಷ್ಟಿ, ನೆರೆ ಹಾವಳಿಯಿಂದ ಕೊಚ್ಚಿ ಹೋಗಿದ್ದು, ಆ ಜನರ ಬದುಕು ಮೂರಾಬಟ್ಟೆಯಾಗಿದೆ ಎಂದರು.
ದೇಣಿಗೆ ಸಂಗ್ರಹಿಸಿದ ಎಲ್ಲಾ ವಸ್ತುಗಳನ್ನೂ ‘ರೆಸಾರ್ಟ್ ಸಂತ್ರಸ್ತ’ ಬಿಜೆಪಿ ಶಾಸಕರು, ಸಚಿವರಿಗೆ ಕಳುಹಿಸಲಾಗುವುದು ಎಂದು ದಿನೇಶ್ ತಿಳಿಸಿದರು.
ಶಾಸಕರು ಕಿಡ್ನಾಪ್ ಆಗಿದ್ದಾರೆ: ಸ್ಥಳೀಯ ಶಾಸಕ ಗೋಪಾಲಕೃಷ್ಣ ಬೇಳೂರು ಸೇರಿ ರಾಜ್ಯದ ಕೆಲವು ಶಾಸಕರು, ಮಂತ್ರಿಗಳನ್ನು ಅಪಹರಣ ಮಾಡಲಾಗಿದ್ದು, ಅವರನ್ನು ಹುಡುಕಿಕೊಡಬೇಕೆಂದು ಜಾಗೃತ ಮತದಾರರು ಶಿವಮೊಗ್ಗ ಜಿಲ್ಲೆ ಸಾಗರದ ಪೇಟೆ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ. ಕಾಡುಗಳ್ಳ ವೀರಪ್ಪನ್ ತನ್ನ ಬೇಡಿಕೆ ಈಡೇರಿಸಿಕೊಳ್ಳಲು ಗಣ್ಯರನ್ನು ಅಪಹರಿಸಿದಂತೆ ಇಲ್ಲಿಯೂ ಕೂಡ ಅಪಹರಣಕಾರರು ಸ್ವಹಿತಾಸಕ್ತಿಗಾಗಿ ಶಾಸಕರು, ಮಂತ್ರಿಗಳನ್ನು ಅಪಹರಿಸಿದ್ದಾರೆ. ಪರಿಣಾಮವಾಗಿ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳ ಜನರು ಅನಾಥರಾಗಿದ್ದಾರೆ. ಜನತೆಯ ಹಿತದೃಷ್ಟಿಯಿಂದ ಇವರನ್ನು ಬಿಡಿಸಿ ತರಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.
ಸೌಜನ್ಯ: ಕನ್ನಡಪ್ರಭ.