ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ತುಮಕೂರು:ಕೂಲಿ ಹಣ ಬಿಡುಗಡೆಗೆ ಒತ್ತಾಯಿಸಿ ರೈತರಿಂದ ಮುತ್ತಿಗೆ

ತುಮಕೂರು:ಕೂಲಿ ಹಣ ಬಿಡುಗಡೆಗೆ ಒತ್ತಾಯಿಸಿ ರೈತರಿಂದ ಮುತ್ತಿಗೆ

Tue, 20 Apr 2010 02:50:00  Office Staff   S.O. News Service

ತುಮಕೂರು, ಎ.19: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮೇವು ಬೆಳೆದ ರೈತರಿಗೆ ಜಿಲ್ಲಾ ಪಂಚಾಯತ್ ವತಿಯಿಂದ 4 ತಿಂಗಳಾದರೂ ಹಣ ಪಾವತಿ ಮಾಡದ ಜಿಲ್ಲಾ ಪಂಚಾಯತ್ ಸಿಇಒ ವಿರುದ್ಧ ಮಧುಗಿರಿ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತರು ಜಿಲ್ಲಾ ಪಂಚಾಯತ್‌ಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.

ಮಧುಗಿರಿ ತಾಲೂಕು ಮಿಡಿಗೇಶಿ ಮತ್ತು ಐಡಿಹಳ್ಳಿ ಹೋಬಳಿಯ ರೆಡ್ಡಿಹಳ್ಳಿ, ಹೊಸಕೆರೆ, ಗರಣಿ ಮತ್ತು ಬ್ರಹ್ಮಸಂದ್ರ ಗ್ರಾಮ ಪಂಚಾಯತ್‌ಗಳ ನೂರಾರು ರೈತರು ಸೋಮವಾರ ಬೆಳಗ್ಗೆ 10.30ಕ್ಕೆ ಜಿಲ್ಲಾ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ರೈತರು, ಮಧುಗಿರಿ ತಾಲೂಕು ಪಂಚಾಯತ್ ಇಒ ಅವರ ಮಾರ್ಗದರ್ಶದಂತೆ ರೆಡ್ಡಿ ಹಳ್ಳಿ ಗ್ರಾ.ಪಂ.ನ 330, ಗರಣಿಯ 350, ಬ್ರಹ್ಮಸಂದ್ರದ 600 ಮತ್ತು ಹೊಸಕೆರೆಯ 250 ರೈತರು ತಮ್ಮ ಬೀಳು ಬಿದ್ದ ಹೊಲಗಳನ್ನು ಹಸನುಗೊಳಿಸಿ ಮೇವು ಬೆಳೆಯಾದ ಮೆಕ್ಕೆ ಜೋಳ ಬೆಳೆದು ಕಟಾವು ಮಾಡಿದಾರೆ

ಭೂಮಿಯನ್ನು ಉಳುವುದು, ಮೇವು ಬೆಳೆ ಬಿತ್ತನೆ ಮತ್ತು ಮೇವು ಬೆಳೆದಿರುವುದು ಸೇರಿದಂತೆ ಎಂಎನ್‌ಆರ್‌ಇಜಿಎ ನಿಯಮಗಳ ಪ್ರಕಾರ ಮೂರು ಹಂತದ ಫೋಟೋ ಗಳನ್ನು ತೆಗೆಸಲಾಗಿದೆ. ಮೇವು ಬೆಳೆ ಬೆಳೆದು ನಾಲ್ಕು ತಿಂಗಳು ಕಳೆದರೂ ಗ್ರಾಮ ಪಂಚಾ ಯತ್ ವತಿಯಿಂದ ಹಣ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಈ ಹಿಂದೆ ಹೊಸಕೆರೆಯಲ್ಲಿ ರೈತರು ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಧುಗಿರಿ ಇಒ ಮೇವು ಬೆಳೆಯ ಪ್ರಮಾಣ ಮತ್ತಿತರ ಮಾಹಿತಿಗಳನ್ನು ಪಡೆದು ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ.

ಈ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಒರನ್ನು ವಿಚಾರಿಸಿದರೆ ಈ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಆದ್ದರಿಂದ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲವೆಂದು ಹೇಳುತ್ತಿದ್ದಾರೆ.

ಕೆಲವು ರೈತರು ಸಾಲ ಮಾಡಿ ಮೇವಿನ ಬೀಜ, ಗೊಬ್ಬರ ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಂಡು ಭೂಮಿಗೆ ಹಾಕಿದ್ದಾರೆ. ನಾಲ್ಕು ತಿಂಗಳು ಕಳೆದರೂ ಹಣ ಬಿಡುಗಡೆಯಾಗದೆ ಸಾಲಗಾರರಿಗೆ ಮುಖ ತೋರಿಸದಂತಾಗಿದೆ. ಇವರಿಗೆ ನಾವು ಮಾಡಿ ರುವ ಕೆಲಸಗಳ ಬಗ್ಗೆ ನಂಬಿಕೆಯಿಲ್ಲದಿದ್ದರೆ ಬಂದು ಸ್ಥಳಪರಿಶೀಲನೆ ನಡೆಸಲಿ, ಅದನ್ನು ಬಿಟ್ಟು ಈ ರೀತಿ ತೊಂದರೆ ನೀಡುವುದು ಸರಿಯಲ್ಲ. ಹಣ ಬಿಡುಗಡೆ ಮಾಡದೆ ಇಲ್ಲಿಂದ ತೆರಳುವುದಿಲ್ಲವೆಂದು ಹೇಳಿದರು.

ತಾಲೂಕು ಪಂಚಾಯತ್ ಸದಸ್ಯೆ ಲಕ್ಷ್ಮಮ್ಮ್ಮ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದ ನೂರಾರು ರೈತರು ಜಿಲ್ಲಾ ಪಂಚಾಯತ್ ಸಿಇಒ ತುಳಸಿ ಮದಿ ನೇನಿ, ಮಧುಗಿರಿ ತಾಲೂಕು ಪಂಚಾಯತ್ ಇಒ ಹಾಗೂ ರೆಡ್ಡಿಹಳ್ಳಿ, ಬ್ರಹ್ಮಸಂದ್ರ, ಹೊಸಕೆರೆ ಹಾಗೂ ಗರಣಿ ಗ್ರಾಮಪಂಚಾಯತ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.



Share: