ಬೆಂಗಳೂರು,ಫೆ,೩-ಮಹತ್ವದ ಬೆಳವಣಿಗೆಯಲ್ಲಿ ನಟ ಜಗ್ಗೇಶ್ ಹಾಗೂ ಪಿ.ವಿ.ಕೃಷ್ಣಭಟ್ ಅವರ ಹೆಸರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡುವ ಸರ್ಕಾರದ ಶಿಫಾರಸ್ಸಿಗೆ ಅಂಗೀಕಾರದ ಮುದ್ರೆ ಒತ್ತಿರುವ ರಾಜ್ಯಪಾಲ ಹಂಸರಾಜ ಭಾರಧ್ವಾಜ್, ಅದೇ ಕಾಲಕ್ಕೆ ಮಾಜೀ ಸಚಿವ ಸೋಮಣ್ಣ ಅವರನ್ನು ನಾಮಕರಣ ಮಾಡುವ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
೨೦೦೮ ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದ ಸೋಮಣ್ಣ,ಇತ್ತೀಚಿನ ಉಪಚುನಾವಣೆಯಲ್ಲಿ ಸೋತಿದ್ದರು. ಹೀಗೆ ಜನರಿಂದ ತಿರಸ್ಕೃತರಾದವರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡುವುದು ಸರಿಯಲ್ಲ ಎಂದು ರಾಜ್ಯಪಾಲರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೀಗೆ ಮಾಜೀ ಸಚಿವ ವಿ.ಸೋಮಣ್ಣ ಅವರ ಹೆಸರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡಲು ರಾಜ್ಯಪಾಲರು ನಿರಾಕರಿಸುವುದರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತೀವ್ರ ಮುಖಭಂಗವಾದಂತಾಗಿದೆ.
ಅಂದ ಹಾಗೆ ಉಪಚುನಾವಣೆಯಲ್ಲಿ ಸೋತು ಮಂತ್ರಿ ಪದವಿಗೆ ಸೋಮಣ್ಣ ನೀಡಿದ ರಾಜೀನಾಮೆಯನ್ನು ನಾನೇ ಅಂಗೀಕರಿಸಿದ್ದೆ. ಹೀಗೆ ಪಕ್ಷಾಂತರಿಗಳನ್ನು ನಾಮಕರಣ ಮಾಡುವ ಸಂಪ್ರದಾಯ ಸರಿಯಲ್ಲ. ಅವರ ಹೆಸರಿನ ಬದಲು ಬೇರೆ ಅರ್ಹರ ಹೆಸರನ್ನು ಸೂಚಿಸಿ ಎಂದೂ ರಾಜ್ಯಪಾಲರು ಸ್ಪಷ್ಟವಾಗಿ ಹೇಳಿದ್ದಾರೆನ್ನಲಾಗಿದೆ.
ರಾಜ್ಯಪಾಲರ ಈ ತೀರ್ಮಾನದ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜಭವನಕ್ಕೆ ತೆರಳಿ ಸರ್ಕಾರ ವಿಧಾನಪರಿಷತ್ತಿನ ಮೂರು ಸ್ಥಾನಗಳಿಗೆ ನಾಮಕರಣ ಮಾಡಲು ಶಿಫಾರಸ್ಸು ಮಾಡಿರುವ ಹೆಸರುಗಳಿಗೆ ಗ್ರೀನ್ ಸಿಗ್ನಲ್ ನೀಡುವಂತೆ ಮನವಿ ಮಾಡಿಕೊಂಡರೆನ್ನಲಾಗಿದೆ.
ಆದರೆ ಈ ಪ್ರಸ್ತಾಪವನ್ನು ರಾಜ್ಯಪಾಲರು ಒಪ್ಪಿಲ್ಲ ಎಂದು ಹೇಳಲಾಗಿದ್ದು ಆ ಮೂಲಕ ಸೋಮಣ್ಣ ರಾಜಕೀಯ ಭವಿಷ್ಯ ತೂಗುಯ್ಯಾಲೆಯಲ್ಲಿ ಸಿಲುಕಿದಂತಾಗಿದೆ.
ಈ ಮುನ್ನವೇ ವಿಧಾನಪರಿಷತ್ತಿನ ಮೂರು ಸ್ಥಾನಗಳಿಗೆ ಸೋಮಣ್ಣ ಸೇರಿದಂತೆ ಮೂವರು ಸದಸ್ಯರನ್ನು ನಾಮಕರಣ ಮಾಡಲು ಸರ್ಕಾರ ಮುಂದಾಗಿತ್ತಾದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಯನ್ನು ಮುಂದೂಡಲು ತೀರ್ಮಾನ ಮಾಡಲಾಗಿತ್ತು.
ಆದರೆ ವಾರ್ಡ್‌ವಾರು ಮೀಸಲಾತಿಯ ಗೊಂದಲಕ್ಕೆ ಸಿಲುಕಿದ ಬಿಬಿಎಂಪಿ ಚುನಾವಣೆ ಸಧ್ಯಕ್ಕೆ ಮುಂದೆ ಹೋಗಿದ್ದು ಇದರ ಬೆನ್ನಲ್ಲೇ ವಿಧಾನಪರಿಷತ್ತಿನ ಮೂರು ಸ್ಥಾನಗಳಿಗೆ ಸೋಮಣ್ಣ,ಕೃಷ್ಣಭಟ್ ಹಾಗೂ ನಟ ಜಗ್ಗೇಶ್ ಅವರ ಹೆಸರುಗಳನ್ನು ಶಿಫಾರಸು ಮಾಡಿ ಇಂದು ಸಂಜೆ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು.
ಆದರೆ ಇದೀಗ ರಾಜ್ಯಪಾಲರು ಸೋಮಣ್ಣ ಅವರ ಹೆಸರನ್ನು ತಿರಸ್ಕೃತಗೊಳಿಸುವುದರೊಂದಿಗೆ ರಾಜಕೀಯ ವಲಯಗಳಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದೆ.