ಚಿಕ್ಕಬಳ್ಳಾಪುರ ಡಿಸೆಂಬರ್ 8: ಕೊಳಚೆ ಹಾಗೂ ನಗರ ಪ್ರದೇಶಗಳು ಅಭಿವೃದ್ಧಿ ಕಾಣಬೇಕಾದರೆ ಅಧಿಕಾರಿಗಳು ಶ್ರದ್ದೆಯಿಂದ ಕೆಲಸ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ದಿ ಕೆಲಸಗಳು ಚುರುಕಾಗಿ ನಡೆಯುತ್ತಿವೆ. ಆದರೆ ನಗರ ಪ್ರದೇಶಗಳಲ್ಲಿ ಕೆಲಸಗಳು ಕುಂಟಿತವಾಗುತ್ತಿವೆ. ನಗರವನ್ನು ಸ್ವಚ್ಚವಾಗಿ ಇಟ್ಟಿಕೊಳುವುದರ ಬಗ್ಗೆ ನಗರ ಸಭೆ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಗಮನ ಅರಿಸಬೇಕು ಎಂದು ಜಿಲ್ಲಾಧಿಕಾರಿ ಅನ್ವರ್ ಪಾಷ ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯ ಏರ್ಪಡಿಸಿದ್ದ ಕೊಳಚೆ ಪ್ರದೇಶಗಳ ನಕ್ಷೆ ರಚನೆ ಮತ್ತು ಕೊಳಚೆ ಪ್ರದೇಶದ ಕುಟುಂಬಗಳ/ಜೀವನೋಪಾಯ ಸಮೀಕ್ಷೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತಿದ್ದರು.
ಬಾಗೇಪಲ್ಲಿ ಶಾಸಕ ಎನ್.ಸಂಪಂಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ಕಾರದಿಂದ ಬಂದ ಹಣವನ್ನು ಅಧ್ಯತೆ ಮೇರಿಗೆ ವೆಚ್ಚ ಮಾಡಿ ಅಧಿಕಾರಿಗಳು ಕೆಲಸ ಮಾಡಿದಾಗ ಮಾತ್ರ ನಗರ ಹಾಗೂ ಕೊಳಚೆ ಪ್ರದೇಶಗಳು ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ನಗರ ಪ್ರದೇಶಗಳ ಅಭಿವೃದ್ಧಿಗಾಗಿ ಸರ್ಕಾರ ಹಣ ಬಿಡುಗಡೆ ಮಾಡುತ್ತಿದೆ. ಹಣ ಇದ್ದು ಅಭಿವೃದ್ಧಿ ಕಾರ್ಯಗಳನ್ನು ತ್ವರಿತವಾಗಿ ಮಾಡಬೇಕೆಂದರು. ಜನಪ್ರತಿನಿಧಿಯಾಗಿ ನಮ್ಮ ಕ್ಷೇತ್ರಗಳಲ್ಲಿ ಸರಿಯಾಗಿ ಕೆಲಸ ನಡೆಯುತ್ತಿಲ್ಲವೆಂದರೆ ಅದಕ್ಕೆ ಒಣೆಗಾರರು ನಾವಾಗುತ್ತೇವೆ. ಸರಿಯಾದ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಸುವ ಕೆಲಸದ ಜವಾಬ್ದಾರಿ ನಮ್ಮದು ಎಂದು ಹೇಳಿದರು.
ಕೊಳಚೆ ಪ್ರದೇಶದ ಜನರಿಗೆ ಮೂಲ ಭೂತ ಸೌರ್ಕಯಗಳನ್ನು ಒದಗಿಸಬೇಕಾದರೆ ಮೊದಲು ನಕ್ಷೆಯನ್ನು ತಯಾರಿಸಿ. ಆ ಪ್ರದೇಶಗಳಿಗೆ ಬೇಕಾಗುವ ಕುಡಿಯುವ ನೀರು, ರಸ್ತೆ, ಮನೆಗಳ ನಿರ್ಮಾಣ, ಸಮುದಾಯ ಭವನ ಇದರ ಬಗ್ಗೆ ಸರಿಯಾದ ಸಮೀಕ್ಷೆಯನ್ನು ನಡೆಸಬೇಕು ಎಂದರು.
ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ ಕೊಳಚೆ ಪ್ರದೇಶದ ಜನರಿಗೆ ಮೂಲ ಭೂತ ಸೌರ್ಕಯಗಳ ಕೊರತೆ ಇದೆ. ಹೊಸ ಕೊಳಚೆ ಪ್ರದೇಶಗಳು ತಲೆ ಎತ್ತದಂತೆ ನೋಡಿಕೊಳ್ಳಬೇಕು. ಹೊಸ ಬಡವಣೆಗಳನ್ನು ಗುರುತಿಸಿ ಅದರ ಬಗ್ಗೆ ಸಮೀಕ್ಷೆಯನ್ನು ನಡೆಸಿ ಕೊಳಚೆ ಪ್ರದೇಶದ ಜನರಿಗೆ ವಸತಿ, ಕುಡಿಯುವ ನೀರು ಮತ್ತು ಇತರೆ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದರು.
ಸಮಾರಂಭದಲ್ಲಿ ಜಿ.ಪಂ.ಉಪಾಧ್ಯಕ್ಷ ಚೆಂಡೂರು ವೆಂಕಟೇಶ್, ನಗರಸಭೆ ಅಧ್ಯಕ್ಷ ಎಂ.ಪ್ರಕಾಶ್, ನಗರಸಭೆಯ ಪೌರಾಯುಕ್ತರಾದ ಉಮಾಕಾಂತ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಕ್ರಂ ಪಾಷ ಉಪಸ್ಥಿತರಿದ್ದರು.