ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಶಾಲಾ ಮಕ್ಕಳಿಗೆ ಬಿಸಿಯೂಟದ ಜತೆ ಕೆನೆಭರಿತ ಹಾಲು!

ಬೆಂಗಳೂರು: ಶಾಲಾ ಮಕ್ಕಳಿಗೆ ಬಿಸಿಯೂಟದ ಜತೆ ಕೆನೆಭರಿತ ಹಾಲು!

Sun, 03 Jan 2010 15:22:00  Office Staff   S.O. News Service
ಬೆಂಗಳೂರು, ಜನವರಿ 2:ಅಂದುಕೊಂಡಂತೆ ನಡೆದರೆ ಶಾಲಾ ಮಕ್ಕಳು ಇನ್ನು ಬಿಸಿಯೂಟದ ಜತೆಗೆ ಕೆನೆಭರಿತ ಹಾಲು  ಕುಡಿಯಲಿದ್ದಾರೆ.

ಹೌದು, ಲಕ್ಷಾಂತರ ಮಕ್ಕಳಿಗೆ ಹಾಲು ಪೂರೈಕೆ ಮಾಡಲು ಕೆ‌ಎಂಎಫ್ ಮುಂದೆ ಬಂದಿದೆ. ಇದಕ್ಕಾಗಿ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದೆ. ಹಾಲು ಪೂರೈಸುವಂತೆ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕಾಯುತ್ತಿದೆ. 

ಯೋಜನೆ ಕಾರ್ಯಗತವಾದರೆ ರಾಜ್ಯದ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳ ಸುಮಾರು ೪೫ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಾಲು ದೊರೆಯಲಿದೆ. ಪೌಷ್ಠಿಕ ಆಹಾರದ ಕೊರತೆ ಇರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಪೌಷ್ಠಿಕ ಅಂಶಗಳಿರುವ ಬೇಳೆ ಕಾಳುಗಳ ಊಟ ನೀಡಬೇಕು. ಇದರ ಜತೆಗೆ ಬಾಳೆಹಣ್ಣು ಅಥವಾ ಹಾಲನ್ನು ನೀಡಬೇಕೆಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ಸಭೆ ನಡೆಸಿರುವ ಶಿಕ್ಷಣ ಇಲಾಖೆ ಉನ್ನತಾಧಿಕಾರಿಗಳು ಬಾಳೆಹಣ್ಣು ಅಥವಾ ಹಾಲಿನ ಪೈಕಿ ಯಾವ ಪದಾರ್ಥವನ್ನು ನೀಡಿದರೆ ಒಳಿತು ಎಂಬುದರ ಬಗ್ಗೆ ಚರ್ಚಿಸಿದ್ದಾರೆ. ಆದರೆ, ಬಾಳೆಹಣ್ಣು ಹೆಚ್ಚು ದಿನ ಇಡಲಾಗದು. ಅಲ್ಲದೇ ಅದು ಪೂರೈಕೆ ಮಾಡುವ ಹಂತದಲ್ಲೇ ಕೆಟ್ಟು ಹೋಗುವ ಸಾಧ್ಯತೆಗಳು ಹೆಚ್ಚು. ಈ ಕಾರಣದಿಂದ ಮಕ್ಕಳಿಗೆ ಹಾಲನ್ನೇ ಕೊಡುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. 
 
ಪ್ರಸ್ತಾವಕ್ಕೆ ಕಾಯುತ್ತಿದೆ ಕೆ‌ಎಂಎಫ್: ಈ ನಿರ್ಧಾರ ತೆಗೆದುಕೊಂಡಿದ್ದರೂ ಶಿಕ್ಷಣ ಇಲಾಖೆ ಹಾಲು ಪೂರೈಕೆ ಮಾಡುವಂತೆ ಇನ್ನೂ ಯಾವುದೇ ಸಂಸ್ಥೆಗೆ ಪ್ರಸ್ತಾವ ಸಲ್ಲಿಸಿಲ್ಲ.        ಏಕೆಂದರೆ, ಹಣಕಾಸು ಇತಿಮಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಬಗ್ಗೆ ಇನ್ನೂ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. 

ಮತ್ತೊಂದೆಡೆ, ದೇಶದ ಎರಡನೇ ಅತಿದೊಡ್ಡ ಹಾಲು ಉತ್ಪಾದಕ ಸಹಕಾರಿ ಸಂಸ್ಥೆಯಾಗಿರುವ ಕೆ‌ಎಂಎಫ್, ಶಾಲಾ ಮಕ್ಕಳಿಗೆ ಹಾಲು ಪೂರೈಸಲು ತುದಿಗಾಲಲ್ಲಿ ನಿಂತಿದೆ. ಸರ್ಕಾರದಿಂದ ಬರುವ ಪ್ರಸ್ತಾವಕ್ಕಾಗಿ ಕಾಯುತ್ತಾ ಕುಳಿತಿದೆ.ಕೆ‌ಎಂಎಫ್ ಉನ್ನತ ಮೂಲಗಳ ಪ್ರಕಾರ, ಪ್ರಸ್ತುತ ಕೆ‌ಎಂಎಫ್ ಬೇಡಿಕೆಗಿಂತ ಅಧಿಕ ಹಾಲನ್ನು ಸಂಗ್ರಹಿಸುತ್ತಿದ್ದು, ಮಕ್ಕಳಿಗೆ ಹಾಲು ಪೂರೈಕೆ ಮಾಡಲು ಯಾವುದೇ ಅಡ್ಡಿ ಇಲ್ಲ. 

ಕೆ‌ಎಂಎಫ್ ಅಂಕಿ-ಅಂಶಗಳು ಹೇಳುವಂತೆ ಪ್ರಸ್ತುತ ಪ್ರತಿದಿನ ರಾಜ್ಯಾದ್ಯಂತ ೩೭ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ ಸಂಸ್ಕರಿಸಿ ಮಾರಾಟ ಮಾಡುವುದು ಮತ್ತು ಮೊಸರು, ತುಪ್ಪ ಸೇರಿದಂತೆ ಮತ್ತಿತರೆ ಉಪ‌ಉತ್ಪನ್ನಗಳ ತಯಾರಿಕೆಗೆ ಸುಮಾರು ೩೪ ಲಕ್ಷ ಲೀಟರ್ ಹಾಲನ್ನು ಬಳಸಲಾಗುತ್ತದೆ. ಇನ್ನೂ ೪ ಲಕ್ಷ ಲೀಟರ್ ಹಾಲು ಉಳಿತಾಯ ಆಗುತ್ತದೆ. ಈ ಕಾರಣದಿಂದ ಶಾಲಾ ಮಕ್ಕಳಿಗೆ ಹಾಲು ಪೂರೈಕೆಗೆ ಯಾವುದೇ ತೊಂದರೆ ಆಗುವುದಿಲ್ಲ. 
ಹಾಲು ಪೂರೈಕೆ ಹೇಗೆ?:ಕೆ‌ಎಂಎಫ್ ಈಗಾಗಲೇ ೯೦ ದಿನಗಳ ಕಾಲ ಕೆಟ್ಟು ಹೋಗದ ರೀತಿಯ ‘ಗುಡ್‌ಲೈಫ್’ ಹಾಲನ್ನು ಟೆಟ್ರಾ ಪ್ಯಾಕ್‌ನಲ್ಲಿ ಸಂಸ್ಕರಿಸಿ ಮಾರಾಟ ಮಾಡುತ್ತಿದೆ. ಈ ಹಾಲನ್ನು ಬಿಸಿ ಮಾಡಿ ಅಥವಾ ಶೀಥಲೀಕರಣಗೊಳಿಸಿ ಬಳಸುವ ಗೋಜಿಲ್ಲ. ಕೆಡದೇ ಇರಲು ಯಾವುದೇ ರಾಸಾಯನಿಕಗಳನ್ನೂ ಬಳಸದೇ ಇದನ್ನು ಸಂಸ್ಕರಿಸಲಾಗಿರುತ್ತದೆ. ಖರೀದಿಸಿದ ತಕ್ಷಣ ಬಳಸುವ ಹಾಲಿದು ಎನ್ನುತ್ತದೆ ಕೆ‌ಎಂಎಫ್. 

ಇದೇ ಹಾಲನ್ನು ಮಕ್ಕಳಿಗೆ ಪೂರೈಕೆ ಮಾಡಲು ಕೆ‌ಎಂಎಫ್ ಸಿದ್ಧವಿದೆ. ಸಾಮಾನ್ಯವಾಗಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ೨೦೦ ಮಿಲಿ ಲೀಟರ್ ಹಾಲು ಸಾಕಾಗುತ್ತದೆ. ಆದರೆ, ಈ ಪ್ರಮಾಣದ ಹಾಲನ್ನು ಪ್ಯಾಕ್ ಮಾಡುವ ವ್ಯವಸ್ಥೆ ಸದ್ಯಕ್ಕಿಲ್ಲ. ಒಂದು ವೇಳೆ ಸರ್ಕಾರದಿಂದ ಪ್ರಸ್ತಾವ ಬಂದರೆ, ಪ್ಯಾಕಿಂಗ್ ಯೂನಿಟ್ ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಲು ಸಂಸ್ಥೆ ಸಿದ್ಧವಿದೆ ಎಂದೂ ಮೂಲಗಳು ಹೇಳಿವೆ. ರಾಜ್ಯದ ಪ್ರತಿ ಶಾಲೆಗೂ ತಿಂಗಳಿಗೆ ಸಾಕಾಗುವಷ್ಟು ಅಥವಾ ತಿಂಗಳಿಗೆ ಎರಡು ಬಾರಿ ಈ ಟೆಟ್ರಾ ಪ್ಯಾಕ್ ಹಾಲನ್ನು ಪೂರೈಕೆ ಮಾಡುವ ವ್ಯವಸ್ಥೆಯನ್ನೂ ಕೆ‌ಎಂಎಫ್ ಮಾಡಿಕೊಳ್ಳಲು ಸಿದ್ಧವಿದೆ. 

 ಹಾಲಿನ ವೈಶಿಷ್ಟ್ಯವೇನು? 

-120 ಡಿಗ್ರಿ ಉಷ್ಣಾಂಶದಲ್ಲಿ ಕಾಯಿಸುವುದರಿಂದ ಹಾಲಿನಲ್ಲಿನ ಬ್ಯಾಕ್ಟೀರಿ ಯಾಗಳು ನಾಶವಾಗುತ್ತವೆ. 
- ಐದು ಲೇಯರ್‌ಗಳಲ್ಲಿ ತಯಾರಿಸುವ ಟೆಟ್ರಾ ಪ್ಯಾಕ್‌ನಲ್ಲಿ ಇರುವುದ ರಿಂದ ಗಾಳಿ ಅಥವಾ ಬೆಳಕು ಪ್ಯಾಕ್ ಒಳ ಪ್ರವೇಶಿಸುವುದಿಲ್ಲ. 
- ಹೀಗಾಗಿ 90 ದಿನಗಳವರೆಗೆ ಹಾಳಾಗುವುದಿಲ್ಲ. 
- ಬಿಸಿ ಮಾಡುವ ಅಥವಾ ಫ್ರಿಡ್ಜ್‌ನಲ್ಲಿ ಇಡುವ ಅಗತ್ಯವಿಲ್ಲ. 
- 200 ಮಿಲಿ ಲೀಟರ್ ಹಾಲನ್ನು ಟೆಟ್ರಾ ಪ್ಯಾಕ್‌ನಲ್ಲಿ ಪೂರೈಕೆ ಮಾಡಲು  
-ತಗಲುವ ವೆಚ್ಚ 5.90 ರುಪಾಯಿಯಿಂದ 6.00 ರುಪಾಯಿ. 

ಸೌಜನ್ಯ: -ರವಿ ಮಾಳೇನಹಳ್ಳಿ ; ಕನ್ನಡಪ್ರಭ


Share: