ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ:ವಿಧಾನಪರಿಷತ್ ಚುನಾವಣೆಗೆ ಕ್ಷಣಗಣನೆ: ರೆಡ್ಡಿ ಬೆಂಬಲಿಗರ ಸಖತ್ ಟೂರ್

ಭಟ್ಕಳ:ವಿಧಾನಪರಿಷತ್ ಚುನಾವಣೆಗೆ ಕ್ಷಣಗಣನೆ: ರೆಡ್ಡಿ ಬೆಂಬಲಿಗರ ಸಖತ್ ಟೂರ್

Fri, 18 Dec 2009 03:48:00  Office Staff   S.O. News Service
ಭಟ್ಕಳ, ಡಿಸೆಂಬರ್ 17: ಡಿಸೆಂಬರ್ 18 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಜಿಲ್ಲೆಯ ರಾಜಕೀಯ ಕಣ ರಂಗೇರಿದ್ದು, ಪ್ರಚಾರ ಕಾರ್ಯದಲ್ಲಿ ಕಾಂಗ್ರೆಸ್ ಎಲ್ಲರಿಗಿಂತ ಮುಂದಿದೆ. ವಿಶೇಷವೆಂದರೆ ಈ ಬಾರಿ ಪಕ್ಷೇತರ ಅಭ್ಯರ್ಥಿ ಅನಿಲ್ ನಾಯ್ಕ ಪ್ರಚಾರದ ಓಟವನ್ನು ಮುಂದುವರೆಸಿದ್ದು, ಕಾಂಗ್ರೆಸ್‌ಗೆ ಸ್ಪರ್ಧೆಯೊಡ್ಡಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ಸಿಗೆ ಹೋಲಿಸಿದರೆ ಬಿಜೆಪಿ ಪ್ರಚಾರದಲ್ಲಿ ಮಂಕಾಗಿದೆ. ಜಿಲ್ಲೆ ಎರಡು ಸಚಿವರನ್ನು ಹೊಂದಿದ್ದರೂ, ಬಿಜೆಪಿ ಸಾರಥ್ಯ ಅಷ್ಟರ ಮಟ್ಟಿಗೆ ಕುಸಿದು ಕುಳಿತಿದೆ. ಈ ಎಲ್ಲ ರಾಜಕೀಯ ಬೆಳವಣಿಗೆಯ ನಡುವೆಯೇ ದೂರದ ಬಳ್ಳಾರಿ ಜಿಲ್ಲೆಯಿಂದ ರೆಡ್ಡಿ ಬೆಂಬಲಿಗರು ಗ್ರಾಮಪಂಚಾಯತ ಸದಸ್ಯರು, ಪಟ್ಟಣ ಪಂಚಾಯತ ಸದಸ್ಯರು ಸೇರಿದಂತೆ ೨೫೦ಕ್ಕೂ ಹೆಚ್ಚು ಮತದಾರರನ್ನು ಜಿಲ್ಲೆಗೆ ಕರೆದುಕೊಂಡು ಬಂದು ಗೌಪ್ಯ ಆಶ್ರಯ ನೀಡಿದ್ದಾರೆ.
16vd2.jpg 

ಮಂಗಳವಾರದ ಗೋಕರ್ಣ ದರ್ಶನದ ನಂತರ ರಾತ್ರಿಯೇ ರೆಡ್ಡಿ ತ್ರಿಮೂರ್ತಿಗಳ ಕಟ್ಟಾ ಬೆಂಬಲಿಗ ಅನಿಲ್ ಜೋಶಿ ನೇತೃತ್ವದಲ್ಲಿ ಮುರುಡೇಶ್ವರಕ್ಕೆ ಆಗಮಿಸಿದ ಮತದಾರರ ದಂಡು ಇಲ್ಲಿಯ ಕಾಮತ್ ಲಾಡ್ಜ ಹಾಗೂ ಆರೆನ್ನೆಸ್ ಗೆಸ್ಟ ಹೌಸಿನಲ್ಲಿ ತಂಗಿದೆ. ಮಾಧ್ಯಮದ ಮುಂದೆ ಪ್ರವಾಸಿಗರಂತೆ ನಟಿಸುತ್ತಿರುವ ಇವರು ಪ್ರತ್ಯೇಕ ಗುಂಪು ರಚಿಸಿಕೊಂಡು ಓಡಾಡುತ್ತಿರುವುದು ಕಂಡು ಬಂದಿದೆ. ಬಳ್ಳಾರಿ ಹೊಸಪೇಟೆಯ ಸಿದ್ಧಗಂಗಾ ನಾಮಫಲಕವನ್ನು ಹೊಂದಿರುವ ಐದು ಐಶಾರಾಮಿ ಬಸ್ಸುಗಳನ್ನು ಮತದಾರರ ಯಾತ್ರೆಗೆ ಬಳಸಲಾಗಿದೆ. ಸಮುದ್ರ ತೀರದಲ್ಲಿ ಅಡ್ಡಾಡಿ, ಮೋಜು ಮಜಾ ಉಡಾಯಿಸಿರುವ ಇವರಿಗೆ ಭೂರಿ ಭೋಜನ ಏರ್ಪಡಿಸಲಾಗಿರುವ ಮಾಹಿತಿಯೂ ಲಭಿಸಿದೆ. ಬುಧವಾರ ಬೆಳಿಗ್ಗೆ ವಿವಿಧ ಉಡುಪುಗಳ ಖರೀದಿಗೆ ಮುಂದಾದ ಇವರು ಮಾಧ್ಯಮದವರ ಸುಳಿವು ಲಭಿಸುತ್ತಿದ್ದಂತೆಯೇ ಕಾಲುಕೀಳಲು ಆರಂಭಿಸಿದ್ದಾರೆ. ಕೆಲವರು ತಾವು ಬಳ್ಳಾರಿಯವರೆಂದು ಹೇಳಿ ತಮ್ಮ ಮತದಾನದ ಹಕ್ಕನ್ನು ಬಾಯಿಬಿಟ್ಟರೆ, ಇನ್ನು ಕೆಲವರು ಗೋವಾ, ಬೆಂಗಳೂರು ಹೆಸರು ಹೇಳಿ ನೈಜ್ಯತೆಯನ್ನು ಮರೆಮಾಚಲು ಯತ್ನಿಸಿದ್ದಾರೆ. ದುರ್ದೈವವೆಂದರೆ ಇನ್ನೂ ಕೆಲವು ಮತದಾರರಿಗೆ ವಿಧಾನಪರಿಷತ್ ಚುನಾವಣೆಯ ಅರಿವೇ ಇಲ್ಲ. ಯಾತ್ರೆ ಮುಗಿಸಿ ನಾಡಿದ್ದು ಊರಲ್ಲಿ ಒಂದು ಓಟನ್ನು ಹಾಕಬೇಕಾಗಿದೆ ಎಂದಷ್ಟೇ ಹೇಳಿ ಮುಂದೆ ಸಾಗಿದ್ದಾರೆ. ಬುಧವಾರ ದಿನವಿಡೀ ಮುರುಡೇಶ್ವರದಲ್ಲಿಯೇ ಕಾಲ ಕಳೆಯುವ ಲೆಕ್ಕಾಚಾರ ಅವರದಾಗಿತ್ತಾದರೂ, ಅಧಿಕಾರಿಗಳ ಮಧ್ಯೆ ಪ್ರವೇಶದೊಂದಿಗೆ ಮುರುಡೇಶ್ವರವನ್ನು ಬುಧವಾರ ಬೆಳಿಗ್ಗೆಯೇ ಬಿಟ್ಟು ತೆರಳಿದ್ದಾರೆ.
 
 16vd3.jpg
16vd4.jpg 
 
ತಹಸೀಲ್ದಾರ ಭೇಟಿ: ರೆಡ್ಡಿ ಬೆಂಬಲಿಗ ನೂರಾರು ಮತದಾರರು ಜಿಲ್ಲೆಯನ್ನು ಪ್ರವೇಶಿಸಿರುವ ವಿಷಯ ಬಹಿರಂಗಗೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಅವರನ್ನು ಇಲ್ಲಿ ತಂಗಲು ಅವಕಾಶ ನೀಡದೇ ಜಿಲ್ಲೆಯಿಂದ ಹೊರಕ್ಕೆ ತೆರಳುವಂತೆ ಸೂಚಿಸಿದೆ. ಭಟ್ಕಳ ತಹಸೀಲ್ದಾರ ಎಸ್.ಎಮ್.ನಾಯ್ಕ ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಮುರುಡೇಶ್ವರಕ್ಕೆ ಆಗಮಿಸಿ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಈ ಸಂಬಂಧ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವ ಅವರು ಬುಧವಾರ ಬೆಳಿಗ್ಗೆ ಅವರನ್ನು ಇಲ್ಲಿಂದ ಓಡಿಸಲು ಯಶಸ್ವಿಯಾಗಿದ್ದಾರೆ.  
 
ನೀವು ಮಾತ್ರ ನೋಡೋದಾ... ನಾವ್ ನೋಡಾಕಿಲ್ವಾ...? 
ಗೋಕರ್ಣ ಘಟನೆಯ ನಂತರ ರೆಡ್ಡಿ ಬೆಂಬಲಿಗ ಮುಖಂಡರು ಯಾರೊಂದಿಗೂ ವಿಷಯ ಮಾತನಾಡದಂತೆ ತಾಕೀತು ಮಾಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಜನರ ಗುಂಪಿನ ಹಿಂದೆಯೇ ಸಾಗುತ್ತಿದ್ದ ಮುಖಂಡರು ಎಲ್ಲವನ್ನೂ ಗಮನಿಸುತ್ತಿದ್ದು, ಪ್ರತಿ ಕ್ಷಣದ ಬೆಳವಣಿಗೆಯನ್ನು ಸೆಲ್ ಪೋನ್ ಬಳಸಿ ದೂರದ ಮುಖಂಡರುಗಳಿಗೆ ರವಾನಿಸುತ್ತಿರುವುದು ಕಂಡುಬಂದಿತು. ಬಳ್ಳಾರಿ ಪಂಚಾಯತ ಸದಸ್ಯೆಯರೀರ್ವರನ್ನು ಮಾತನಾಡಿಸಲು ಮುಂದಾಗುತ್ತಿದ್ದಂತೆಯೇ ರೇಗಿದ ಅವರು, ಹೌದ್ರಿ... ನೀವು ಮಾತ್ರ ಎಲ್ಲವನ್ನೂ ನೋಡೋದಾ... ನಾವ್ ನೋಡಾಕಿಲ್ವಾ? ಎಂದು ಮರುಪ್ರಶ್ನೆ ಹಾಕಿರುವುದು ಅವರ ಮೇಲೆ ಹಾಕಿರುವ ಒತ್ತಡವನ್ನು ವಿವರಿಸುತ್ತಿತ್ತು. ಅಂದ ಹಾಗೆ ಚುನಾವಣೆಯ ದೆಸೆಯಿಂದಲಾದರೂ ಎಲ್ಲರಿಗೂ ಸಿಕ್ಕಿತು ಮಣೆ ಅನ್ನಬಹುದೇನೋ!

Share: