ಚಿಕ್ಕಬಳ್ಳಾಪುರ, ನವಂಬರ್ ೧೨ : ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಾಗೂ ಶೇ.೧೮ರ ಹಣದ ಬಳಕೆಯಲ್ಲಿ ಅವ್ಯವಹಾರ ಮತ್ತುಸಮಾಜ ಕಲ್ಯಾಣ ಇಲಾಖೆಯಲ್ಲಿ ಹೊರಗುತ್ತಿಗೆ ವ್ಯವಸ್ಥೆ ಖಂಡಿಸಿ ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಕಛೇರಿ ಮುಂದೆ ಡಿಎಸ್ಎಸ್ ವತಿಯಿಂದ ಧರಣಿಯನ್ನು ಹಮ್ಮಿಕೊಳ್ಳಲಾಯಿತು.
ಇಂದು ತಾಲೂಕು ಡಿಎಸ್ಎಸ್ ವತಿಯಿಂದ ಹಮ್ಮಿಕೊಂಡಿದ್ದ ಧರಣಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದಳ್ಳಾಳಿಗಳ ಕಾಟ ತಪ್ಪಿಸಿ ದುಡಿಯುವ ಕೈಗಳಿಗೆ ಕೆಲಸ ನೀಡಿ ಅವರ ಖಾತೆಗೆ ಹಣ ಜಮಾ ಮಾಡಬೇಕು, ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಂಗಾಮಿ ನೌಕರರಿಗೆ ಮಾರಕವಾಗುತ್ತಿರುವ ಹೊರ ಗುತ್ತಿಗೆಯನ್ನು ರದ್ದು ಪಡಿಸಿ, ಗ್ರಾಮ ಪಂಚಾಯ್ತಿಗಳಲ್ಲಿ ಬಿಲ್ಕಲೆಕ್ಟರ್ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದವರನ್ನು ಖಾಯಂಗೊಳಿಸಿದ ರೀತಿಯಲ್ಲಿ ಇವರನ್ನು ಸಹ ಖಾಯಂ ಮಾಡಬೇಕು, ಶೇ.೧೮ ಅನುದಾನದಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ನಿಲ್ಲಿಸಿ, ಸದರಿ ಅನುದಾನವನ್ನು ಅಭಿವೃದ್ದಿಗೆ ಒತ್ತು ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಧರಣಿಯ ನೇತೃತ್ವವನ್ನು ತಾಲೂಕು ಸಂಚಾಲಕರಾದ ಬಿ.ವಿ.ಆನಂದ್, ಸಂಘಟನಾ ಕಾರ್ಯದರ್ಶಿ ಎ.ಕೃಷ್ನಪ್ಪ, ಸಂಘಟನಾ ಸಂಚಾಲಕರಾದ ಬಿ.ಎಂ.ವೆಂಕಟೇಶ್, ತ್ಯಾಗರಾಜು, ಕೊತ್ತೂರು ವೆಂಕಟೇಶ್, ಕೆ.ಕರಗಪ್ಪ ಮತ್ತು ಅಂದಾರ್ಲ ಹಳ್ಳಿ ವೆಂಕಟೇಶ್ ಮುಂತಾದವರು ವಹಿಸಿದ್ದರು.