ಕಾರವಾರ, ಮಾ. ೧೪: ಮುರಿದ ಖುರ್ಚಿ ಟೇಬಲ್‌ಗಳು. ಈಗಲೋ ಆಗಲೋ ಬೀಳಲಿದೆ ಎನ್ನುವ ಕಟ್ಟಡ. ಧೂಳು ಹಿಡಿಯುತ್ತಿರುವ ಕಡತಗಳು. ಇಷ್ಟು ಹೇಳುವಾಗಲೇ ಊಹಿಸಿರಬಹುದು. ಇದು ಯಾವುದೋ ಸರ್ಕಾರಿ ಕಚೇರಿಯ ಚಿತ್ರಣ ಎಂದು.
ಹೌದು. ಗ್ರಾಮೀಣ ಪ್ರದೇಶಗಳಲ್ಲಿರುವ ಬಹುತೇಕ ಕಂದಾಯ ನಿರೀಕ್ಷಕರ ಕಚೇರಿಗಳು, ಗ್ರಾಮ ಚಾವಡಿಗಳ ಪರಿಸ್ಥಿತಿ ಇದೇ ಆಗಿದೆ. ಆದರೆ ಕಾರವಾರ ತಾಲೂಕಿನಲ್ಲಿ ಈ ಕಚೇರಿಗಳ ಪರಿಸ್ಥಿತಿ ಬದಲಾಗಿದೆ. ತಾಲೂಕಿನ ಗ್ರಾಮ ಚಾವಡಿಗಳು, ಕಂದಾಯ ನಿರೀಕ್ಷಕರ ಕಚೇರಿಗಳು ಇನ್ನು ಮುಂದೆ ಕಂಪ್ಯೂಟರೈಸ್ಡ್. ಅಷ್ಟೇ ಅಲ್ಲ ಎಲ್ಲ ಕಚೇರಿಗಳೂ ಒಂದೇ ರೀತಿಯ ಬಣ್ಣ ಮತ್ತು ಆಸನ ಸೇರಿ ದಂತೆ ಮೂಲಭೂತ ಸಾಮಗ್ರಿಗಳನ್ನು ಪಡೆದು ಕೊಂಡು ನವೀಕರಣಗೊಳ್ಳಲಿವೆ. ಈ ಯೋಜನೆ ಕಾರವಾರ ಉಪವಿಭಾಗದಲ್ಲಿ ಮಾತ್ರ.
ಇದು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಿಂದ ಜಾರಿಯಾದ ಯೋಜನೆಯಲ್ಲ. ಕ್ರಿಯಾ ಶೀಲ ಅಧಿಕಾರಿಯೊಬ್ಬರ ಯೋಜನೆಯ ಫಲವಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಸಹಭಾಗಿತ್ವ ದಲ್ಲಿ ಕಾರವಾರ ತಾಲೂಕಿನ ಎಲ್ಲ ೨೬ ಗ್ರಾಮ ಚಾವಡಿಗಳು ೪ ಕಂದಾಯ ನಿರೀಕ್ಷಕರ ಕಚೇರಿ ಗಳು ಮತ್ತು ೨ ಡೆಪ್ಯುಟಿ ಸಬ್ ರಜಿಸ್ಟ್ರಾರ್ ಕಚೇರಿಗಳು ನವೀಕರಣಗೊಳ್ಳುತ್ತಿವೆ.
ಹಿಂದಿನ ಉಪವಿಭಾಗಾಧಿ ಕಾರಿ ಸಲ್ಮಾ ಪಹೀಂ ಅವರ ಯೋಜನೆಯಂತೆ ಕಾರ್ಯ ನಿರ್ವಹಿಸಿ ಕಾರವಾರ ತಹ ಶೀಲ್ದಾರ್ ಶಿವಾನಂದಮೂರ್ತಿ ಕಾರವಾರ ತಾಲೂಕಿನ ಕಂದಾಯ ಇಲಾಖೆ ಕಚೇರಿಗಳ ನವೀಕರಣಕ್ಕೆ ತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ಉಪವಿಭಾಗದ ಕಚೇರಿ ಗಳಿಗೆ ಈ ವ್ಯವಸ್ಥೆ ಅಳವಡಿಸಲಾಗುವುದು ಎನ್ನುತ್ತವೆ ಕಂದಾಯ ಇಲಾಖೆ ಮೂಲಗಳು.
ಈ ಯೋಜನೆ ಕರ್ನಾಟಕದಲ್ಲೇ ಪ್ರಥಮ ಯೋಜನೆಯಾಗಿದೆ. ಒಂದೊಂದು ಕಚೇರಿಗಳನ್ನು ಒಂದೊಂದು ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ ವಹಿಸಿಕೊಡಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ೧೦ ಕಚೇರಿಗಳ ನವೀಕರಣದ ಜವಾಬ್ದಾರಿ ಹೊತ್ತಿದೆ. ಇಂಡಿಯನ್ ಬ್ಯಾಂಕ್ ೭, ಕೈಗಾದ ಎನ್‌ಪಿಸಿಐಎಲ್ ೩, ಬಿಣಗಾದ ಸೋಲಾರೀಸ್ ಕೆಮ್‌ಟೆಕ್ ಲಿಮಿಟೆಡ್ ಒಂದು, ಸಿಂಡಿಕೇಟ್ ಬ್ಯಾಂಕ್ ೨ ಹೀಗೆ ವಿವಿಧ ಸಂಸ್ಥೆಗಳು ನವೀಕರಣದ ಜವಾಬ್ದಾರಿ ಹೊತ್ತಿವೆ.
ಒಂದು ಕಚೇರಿ ನವೀಕರಣಕ್ಕೆ ೫೦ ಸಾವಿರ ರೂ. ಅಂದಾಜಿಸಲಾಗಿದೆ. ಈಗಾಗಲೇ ಕಾರವಾರ ತಾಲೂಕಿನ ಕಂದಾಯ ಇಲಾಖೆಯ ಬಹುತೇಕ ಕಚೇರಿಗಳು ನವೀಕರಣಗೊಂಡಿವೆ.
ಅಲ್ಲಿ ಒಂದು ಕಂಪ್ಯೂಟರ್, ಕರೆಂಟ್ ವ್ಯವಸ್ಥೆ, ವ್ಯವಸ್ಥಿತ ಖುರ್ಚಿ ಟೇಬಲ್, ಸಾರ್ವಜನಿಕರಿಗೆ ಕೂರಲು ಮೂರು ಖುರ್ಚಿ, ಗಡಿಯಾರ ಈ ಎಲ್ಲ ವ್ಯವಸ್ಥೆ ಮಾಡಲಾಗುವುದು. ಇಷ್ಟೇ ಅಲ್ಲದೆ ಎಲ್ಲ ಕಂದಾಯ ಕಚೇರಿಗಳಿಗೂ ಒಂದೇ ರೀತಿಯ ಬಣ್ಣ ಬಳಿಯುವ ವ್ಯವಸ್ಥೆ ಜಾರಿಗೆ ತರಲಾಗಿದ್ದು, ತಳದಲ್ಲಿ ಕೆಂಪು, ಮೇಲೆ ಹಳದಿ ಬಣ್ಣ ಬಳಿಯಲಾಗುತ್ತಿದೆ. ನಡುವೆ ಬರುವ ನೀಲಿ ಪಟ್ಟಿಯಲ್ಲಿ ಕಂದಾಯ ಇಲಾಖೆ ಎಂಬ ಹೆಸರು ರಾರಾಜಿಸಲಿದೆ. ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ಕಚೇರಿಯ ಹೆಸರು ವಿಳಾಸ ಬರೆಯಲಾಗುವುದು.
ಒಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿರುವ ಕಂದಾಯ ಇಲಾಖೆ ಕಚೇರಿಗಳೂ ಹೊಸ ಸೀರೆ ಉಟ್ಟು ನವ ವಧುವಿನಂತೆ ಸಿದ್ಧ ವಾಗುತ್ತಿವೆ. ಬ್ಯಾಂಕ್ ಮತ್ತು ಸಂಸ್ಥೆಗಳು ನೀಡಿರುವ ಈ ಪ್ರಯೋಜನ ಗಳನ್ನು ಕಂದಾಯ ಇಲಾಖೆ ಅಧಿ ಕಾರಿಗಳು ನಿರ್ವ ಹಿಸಿಕೊಂಡು ಹೋದರೆ ಇಲಾಖೆಯ ಬಗ್ಗೆ ಸಾರ್ವಜನಿ ಕರಲ್ಲಿ ಇರುವ ಚಿತ್ರಣ ಬದಲಾಗುವುದರಲ್ಲಿ ಸಂಶಯವಿಲ್ಲ.
ಸೌಜನ್ಯ:ಉದಯವಾಣಿ