ನವದೆಹಲಿ, ಅ.27: ವರದಿ ಸಲ್ಲಿಕೆಗೆ ಮುನ್ನ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕರೆಯಲಾಗುವ ಉನ್ನತ ಮಟ್ಟದ ಸಭೆಯಲ್ಲಿ ಈ ಸಂಬಂಧ ಪರಾಮರ್ಶೆ ಆಗಬೇಕು. ಈ ಪ್ರಕ್ರಿಯೆಯಲ್ಲಿ ನಂದಿ ಕಂಪನಿಯನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂಬ ನೈಸ್ ಕೋರಿಗೆ ಬಗ್ಗೆ ನ್ಯಾಯಾಲಯ ಬುಧವಾರ ಲಿಖಿತ ಆದೇಶ ಹೊರಡಿಸಲಿದೆ. ನೈಸ್ ಹೆದ್ದಾರಿಯ ‘ಅಲೈನ್ಮೆಂಟ್’ನ್ನು ಕರ್ನಾಟಕ ಟೌನ್ ಅಂಡ್ ಕಂಟ್ರಿ ಪ್ಲ್ಯಾನಿಂಗ್ ಕಾಯಿದೆಯ ಮೇರೆಗೆ ನಿಗದಿ ಮಾಡಿ ಯೋಜನೆಯ ನಿರ್ಮಾಣ ಮುಂದುವರೆಸಬಹುದು ಎಂಬುದಾಗಿ ನ್ಯಾಯಾಲಯ ಹೇಳಿದ್ದಾಗಿ ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಹಳ್ಳಿ ತಿಳಿಸಿದರು.
ಅರ್ಜಿಗಳ ಅಡಚಣೆ:ನೈಸ್ ಹೆದ್ದಾರಿಯ ಅಲೈನ್ಮೆಂಟ್ ಪ್ರಶ್ನಿಸಿ ಖಾಸಗಿ ಜಮೀನು ಮಾಲೀಕರು ಈ ಯೋಜನೆಯ ನಿರ್ಮಾಣಕ್ಕೆ ರಾಜ್ಯ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆಗಳನ್ನು ಪಡೆದುಕೊಂಡಿದ್ದಾರೆ. ಯೋಜನೆಯು ಮಂದಗತಿ ಹಿಡಿಯಲು ಈ ತಕರಾರು ಅರ್ಜಿಗಳು ದೊಡ್ಡ ಅಡಚಣೆಯಾಗಿವೆ ಎಂಬುದಾಗಿ ‘ನೈಸ್’ ಪರ ನ್ಯಾಯವಾದಿ ದುಷ್ಯಂತ್ ದವೆ ನ್ಯಾಯಾಲಯದ ಮುಂದೆ ದೂರಿದರು.
ರಾಜ್ಯ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದು ಸರ್ವೋಚ್ಚ ನ್ಯಾಯಾಲಯ ೨೦೦೬ರ ಏಪ್ರಿಲ್ನಲ್ಲಿ ನೀಡಿದ್ದ ತೀರ್ಪನ್ನು ಜಾರಿಗೊಳಸಲು ಉದ್ದೇಶಪೂರ್ವಕ ಅಡಚಣೆ ಒಡ್ಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ಅಂದಿನ ಮುಖ್ಯ ಕಾರ್ಯದರ್ಶಿ ಪಿ.ಬಿ.ಮಹಿಷಿ ಮತ್ತು ಇತರ ಅಧಿಕಾರಿಗಳ ವಿರುದ್ಧ ೨೦೦೭ರಲ್ಲಿ ನೈಸ್ ನ್ಯಾಯಾಲಯ ನಿಂದನೆ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯ ಮುಂದುವರಿದ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ತರುಣ್ ಚಟರ್ಜಿ, ಆರ್.ಎಂ.ಲೋಧಿ ಹಾಗೂ ದೀಪಕ್ ವರ್ಮ ಅವರನ್ನು ಒಳಗೊಂಡ ನ್ಯಾಯಪೀಠ ಮಂಗಳವಾರ ನಡೆಸಿತು.
ಯೋಜನೆಗೆ ಅಗತ್ಯವಿರುವ ಯಾವುದೇ ಜಮೀನು ಒದಗಿಸಲು ಮತ್ತು ಸಂಪೂರ್ಣ ಸಹಕಾರ ನೀಡಲು ರಾಜ್ಯ ಸರ್ಕಾರ ಸಿದ್ಧ ಯೋಜನೆಯ ಸಲೀಸು ಅನುಷ್ಠಾನಕ್ಕೆ ಅವಕಾಶ ಮಾಡಿಕೊಡಲು ಈ ಹಿಂದಿನ ಹಲವು ಸರ್ಕಾರಿ ಆದೇಶಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಹಳ್ಳಿ ನ್ಯಾಯಾಲಯಕ್ಕೆ ನಿವೇದಿಸಿಕೊಂಡರು.
ರಾಜ್ಯ ಸರ್ಕಾರ ಈಗಾಗಲೆ ಏಳು ಸಾವಿರ ಎಕರೆಗಳಷ್ಟು ಜಮೀನನ್ನು ನೈಸ್ಗೆ ಹಸ್ತಾಂತರ ಮಾಡಿದೆ. ೧,೯೦೦ ಎಕರೆಗಳಷ್ಟು ಜಮೀನು ಹಸ್ತಾಂತರಕ್ಕೆ ಸಿದ್ಧವಾಗಿದೆ. ೫೫ ಕಿ.ಮೀ.ಗಳಷ್ಟು ‘ನೈಸ್’ ರಸ್ತೆ ನಿರ್ಮಾಣ ಮುಗಿದಿದ್ದು, ಟೋಲ್ ಸಂಗ್ರಹಿಸಲು ಸರ್ಕಾರ ಅನುಮತಿಯನ್ನೂ ಕೂಡ ನೀಡಿದೆ ಎಂದು ಅವರು ವಿವರಣೆ ನೀಡಿದರು.
ನೈಸ್ಗೆ ನೀಡಬೇಕಿರುವ ಜಮೀನಿನ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯ ಉನ್ನತ ಮಟ್ಟದ ಸಭೆ ಎರಡೇ ವಾರಗಳಲ್ಲಿ ನಡೆದು ಸ್ಥಿತಿಗತಿಯ ವರದಿಯನ್ನು ಸಲ್ಲಿಸುವಂತೆ ಸೂಚಿಸಬೇಕು ಎಂಬುದು ನೈಸ್ ಪರ ನ್ಯಾಯವಾದಿ ದುಷ್ಯಂತ್ ದವೆ ಅವರ ಒತ್ತಾಯವಾಗಿತ್ತು.
ನಾಲ್ಕು ವಾರಗಳ ಕಾಲಾವಕಾಶ ಬೇಕೆಂದು ಅಶೋಕ್ ಹಾರ್ನಹಳ್ಳಿ ಕೋರಿದರು. ಎರಡು ವಾರಗಳ ಅವಧಿ ಬಹಳ ಕಡಿಮೆ ಎಂದು ನ್ಯಾಯಪೀಠ ಕೂಡ ದನಿಗೂಡಿಸಿತು.
ವರದಿ ಸಲ್ಲಿಸಲು ಸೂಚನೆ:ಈವರೆಗೆ ಎಷ್ಟು ಜಮೀನು ಕೊಟ್ಟಿದ್ದೀರಿ, ತಕ್ಷಣ ಎಷ್ಟು ಕೊಡಬಲ್ಲಿರಿ, ಮುಂದೆ ಎಷ್ಟು ಕೊಡುತ್ತೀರಿ ಎಂಬ ಬಗೆಗೆ ಕೋಷ್ಟಕವೊಂದನ್ನು ತಯಾರು ಮಾಡಿ ಸಲ್ಲಿಸಿ ಎಂದು ನ್ಯಾಯಪೀಠ ಅಶೋಕ್ ಹಾರ್ನಹಳ್ಳಿ ಅವರಿಗೆ ಸೂಚಿಸಿತು.
ಕಾಲಮಿತಿ ವಿಧಿಸದೆ ಹೋದರೆ ಸರ್ಕಾರಗಳು ಚುರುಕಾಗಿ ವರ್ತಿಸುವುದಿಲ್ಲ. ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿ ಮೂರು ವರ್ಷ ಉರುಳಿದ್ದರೂ ಈ ಯೋಜನೆ ಇನ್ನೂ ತೆವಳುತ್ತಿರುವುದಕ್ಕೆ ಕಾಲಮಿತಿ ವಿಧಿಸದೆ ಇರುವುದೇ ಮುಖ್ಯ ಕಾರಣ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು ಯೋಜನೆಗೆ ತಡೆಯಾಜ್ಞೆಗಳನ್ನು ನೀಡುತ್ತಲೇ ಸಾಗಿದ್ದಾರೆ. ಕೆಲವು ನ್ಯಾಯಾಧೀಶರು ವೈಯಕ್ತಿಕವಾಗಿ ಈ ಯೋಜನೆಯ ಪರವಾಗಿ ಅಥವಾ ವಿರೋಧವಾಗಿ ಇರಬಹುದು. ಆದರೆ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಮಾನ್ಯ ಮಾಡಬೇಕು ಎಂದು ದವೆ ವಾದಿಸಿದರು.
ನ್ಯಾಯಾಲಯದ ತೀರ್ಪಿನ ಪ್ರಕಾರ ನೈಸ್ ಕಾರಿಡಾರ್ ಯೋಜನೆಗೆ ರಾಜ್ಯ ಸರ್ಕಾರ ೨೦,೧೯೩ ಎಕರೆಗಳಷ್ಟು ಜಮೀನು ಹಸ್ತಾಂತರ ಮಾಡಬೇಕಿತ್ತು. ಈ ಪೈಕಿ ೬,೯೫೬ ಎಕರೆಗಳು ಸರ್ಕಾರಿ ಭೂಮಿ. ಉಳಿದ ೧೩,೨೩೭ ಎಕರೆ ಖಾಸಗಿ ಭೂಮಿ.
ಈ ಪೈಕಿ ಈವರೆಗೆ ಶೇ.೨೦ರಷ್ಟು ಜಮೀನನ್ನು ಮಾತ್ರವೇ ಸರ್ಕಾರ ಹಸ್ತಾಂತರ ಮಾಡಿದೆ ಎಂದು ದವೆ ದೂರಿದರು.
ಸೌಜನ್ಯ: ಕನ್ನಡಪ್ರಭ