ಭಟ್ಕಳ, ಡಿಸೆಂಬರ್ 29: ಮಗನನ್ನು ರೇಲ್ವೇ ನಿಲ್ದಾಣಕ್ಕೆ ತಲುಪಿಸಿ ಹಿಂದಿರುಗುತ್ತಿದ್ದ ಮುಗ್ಧ ಕಾಲೋನಿಯ ಮೀರಾ ಎಂಬುವವರ ಮೇಲೆ ರವಿವಾರ ರಾತ್ರಿ ಗುಳ್ಮಿಯ ಬಳಿ ಮುಸುಕು ಧರಿಸಿ ಹಲ್ಲೆ ನಡೆಸಿದ ಆರೋಪಿಯನ್ನು ಭಟ್ಕಳ ಶಹರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೃಷ್ಣಪ್ಪ ತಿಮ್ಮಣ್ಣ ನಾಯ್ಕ, ಚೌಥನಿ ಎಂದು ಗುರುತಿಸಲಾಗಿದೆ. ಕುತೂಹಲದ ಬೆಳವಣಿಗೆಯೊಂದರಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ ಮೀರಾನ ಹೆಂಡತಿಯೇ ಘಟನೆಯ ಸೂತ್ರಧಾರಿ ಎಂಬ ಮಾಹಿತಿ ಬಹಿರಂಗಗೊಂಡಿದೆ.
ಆರೋಪಿ ಕೃಷ್ಣಪ್ಪನಿಗೆ ಮೀರಾನ ಹೆಂಡತಿಯೊಂದಿಗೆ ಇರುವ ಅನೈತಿಕ ಸಂಬಂಧದ ಮಾಹಿತಿ ಪೊಲೀಸ್ ತನಿಖೆಯ ವೇಳೆ ಹೊರ ಬಂದಿದ್ದು, ಗಂಡನ ಕಿರಿಕಿರಿ ತಾಳದೇ ಹೆಂಡತಿಯೇ ಹಲ್ಲೆಗೆ ನಿರ್ದೇಶನ ನೀಡಿದ್ದಳು ಎಂದು ಹೇಳಲಾಗಿದೆ. ಘಟನೆ ನಡೆದ ಇಪ್ಪತ್ನಾಲ್ಕು ಗಂಟೆಯೊಳಗೆ ನಡೆದ ಭಟ್ಕಳ ಶಹರ ಠಾಣೆ ಎಸೈ ಮಂಜುನಾಥ ಗೌಡ ನೇತೃತ್ವದ ಪೊಲೀಸ್ ತಂಡದ ಯಶಸ್ವಿ ಕಾರ್ಯಾಚರಣೆ ಸಾರ್ವತ್ರಿಕ ಶ್ಲಾಘನೆಗೆ ಪಾತ್ರವಾಗಿದೆ. ತಲೆ ಭಾಗಕ್ಕೆ ಬಲವಾದ ಏಟು ತಿಂದ ಮೀರಾ ಇಲ್ಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತನಿಖೆ ಮುಂದುವರೆದಿದೆ.
ವರದಿ: ವಸಂತ ದೇವಾಡಿಗ, ಭಟ್ಕಳ