ಸಮರ್ಥ ಶಿಕ್ಷಕನಿಗೆ ಸಂಧ ಗೌರವ
ಭಟ್ಕಳ : ತಾಲೂಕಿನ ಹೊನ್ನೆಮಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ರಾಘವೇಂದ್ರ ಎಸ್. ಮಡಿವಾಳ ಅವರು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ, ಸೆಪ್ಟೆಂಬರ್ 5, 2024 ರಂದು ಬೆಂಗಳೂರಿನಲ್ಲಿ ಜರುಗುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಶಿಕ್ಷಣ ಮಂತ್ರಿಗಳು, ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಪ್ರಧಾನವಾಗಲಿದೆ.
ಶಿಕ್ಷಕ ಮಡಿವಾಳ ಅವರ ಸಾಧನೆಗಳು ಬಹು ವಿಶೇಷವಾಗಿದ್ದು, ಅತ್ಯಂತ ಕುಗ್ರಾಮವಾದ ಬಂಗೋಡಿ ಕಿರಿಯ ಪ್ರಾಥಕ ಶಾಲೆಯಲ್ಲಿ ಏಕೋಪಾಧ್ಯಾಯ ಶಿಕ್ಷಕರಾಗಿ 8 ವರ್ಷಗಳ ಸೇವೆಯನ್ನು ಸಲ್ಲಿಸಿದ್ದು, ಮಾರಾಟಿ ಭಾಷಿಕರೇ ಹೆಚ್ಚಿರುವ ಈ ಪ್ರದೇಶದಲ್ಲಿ ಉತ್ತಮ ಶಿಕ್ಷಣವನ್ನು ಒದಗಿಸಲು ಅವರು ಮಾಡಿದ ಶ್ರಮವು ವಿಶಿಷ್ಟವಾಗಿದೆ. ಆ ನಂತರ, ಗೊರಟೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು ಭಟ್ಕಳದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಪ್ರಾಥಮಿಕ ವಿಭಾಗದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ 6 ವರ್ಷಗಳಿಂದ, ಅವರು ಹೊನ್ನೆಮಡಿಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಡಿವಾಳ ಅವರ ನೇತೃತ್ವದಲ್ಲಿ, ಹೊನ್ನೆಮಡಿ ಶಾಲೆಯ ವಿದ್ಯಾರ್ಥಿಗಳು ಪ್ರತಿ ವರ್ಷ ಕ್ಲಸ್ಟರ್, ತಾಲೂಕು, ಮತ್ತು ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸುತ್ತಾ ಬಂದಿದ್ದು, ಕ್ರೀಡಾ, ಸಾಂಸ್ಕೃತಿಕ, ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಶ್ರೇಷ್ಠ ಸಾಧನೆಗಳನ್ನು ಮಾಡಿದ್ದಾರೆ. ವಿಶೇಷವಾಗಿ, ದೈಹಿಕ ಶಿಕ್ಷಕರಿಲ್ಲದಿದ್ದರೂ, ಹಳೆಯ ವಿದ್ಯಾರ್ಥಿಗಳ ಸಹಕಾರವನ್ನು ಪಡೆದು, ಕ್ರೀಡಾಕೂಟಗಳಲ್ಲಿ ಬಹಳಷ್ಟು ಪದಕಗಳನ್ನು ಗಳಿಸಿದ್ದಾರೆ.
ಶಿಕ್ಷಕ ಮಡಿವಾಳ ಅವರು ಅನೇಕ ತರಬೇತಿಗಳನ್ನು ನೀಡಿದ್ದು, ನವೀನ ಚಟುವಟಿಕೆಗಳನ್ನು ತಂತ್ರಜ್ಞಾನ ಆಧಾರಿತವಾಗಿ ಪ್ರಾರಂಭಿಸುವಲ್ಲಿ ಸಕ್ರಿಯವಾಗಿ ಮುಂದಾಗಿದ್ದಾರೆ. ಕರೋನ ಸಂಕಷ್ಟ ಕಾಲದಲ್ಲಿ, ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಲ್ಲಿ ಹಿನ್ನಡೆಯಾಗದಂತೆ ನವೀನ ಆನ್ಲೈನ್ ಪಾಠಗಳನ್ನು ಸೃಜಿಸಿ, ಮಕ್ಕಳ ಕಲಿಕೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಶ್ರಮಿಸಿದ್ದಾರೆ.
ಇದರೊಂದಿಗೆ, ಶಾಲೆಯ ಭೌತಿಕ ಸೌಂದರ್ಯವನ್ನು ಹೆಚ್ಚಿಸಲು ಹೊಸ ಕಟ್ಟಡಗಳನ್ನು ನಿರ್ಮಿಸಿ, ಖಾಸಗಿ ಶಾಲೆಗಳ ಸಮಾನ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿದ್ದಾರೆ. ಮಡಿವಾಳ ಅವರ ಶ್ರೇಷ್ಠ ಸಾಧನೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರ ಅಕರ್ಷಕ ಸೇವೆಯನ್ನು ಪರಿಗಣಿಸಿ, ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
"ಸಾಧಿಸಿರುವುದು ತುಂಬಾ ಕಡಿಮೆ, ಸಾಧಿಸಬೇಕಾದದ್ದು ಇನ್ನೂ ಅಗಾಧ," ಎಂಬ ಅವರ ಮಾತುಗಳು ಅವರ ಸೇವಾ ಮನೋಭಾವವನ್ನು ಸ್ಪಷ್ಟಪಡಿಸುತ್ತವೆ.
ವಿದ್ಯಾರ್ಥಿಗಳಲ್ಲಿ ಸೌಹಾರ್ದತೆ ಮೂಡಿಸಲು ಅವರು ಸದಾ ಪ್ರಯತ್ನಶೀಲಾರಾಗಿದ್ದು ಸ್ವತಃ ತಾವೆ ಎಲ್ಲ ಧರ್ಮದ ಜನಸಮುದಾಯಗೊಂದಿಗೆ ಉತ್ತಮ ಬಾಂಧವ್ಯವನ್ನಿಟ್ಟುಕೊಂಡು ಎಲ್ಲರೊಳಗೊಂದಾಗಿ ಬದುಕುತ್ತಿದ್ದಾರೆ.
ಎಂ.ಆರ್.ಮಾನ್ವಿ