ಭಟ್ಕಳ, ಜನವರಿ 23: ಭಟ್ಕಳದ ಪ್ರಸಿದ್ಧ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆಯು ಸಾವಿರಾರು ಜನನ ಭಕ್ತಿ-ಭಾವಗಳ ಸಂಗಮಕ್ಕೆ ಸಾಕ್ಷಿಯಾಗಿ ವಿಜೃಂಭಣೆಯಿಂದ ನೆರವೇರಿತು. ಜಾತ್ರೆಯ ಎರಡನೇಯ ದಿನವಾದ ರವಿವಾರ ಹರಕೆಯ ಮಹಾಪೂರವೇ ದೇವಸ್ಥಾನದೆಡೆಗೆ ಹರಿದು ಬಂತು. ಊರ ಹಾಗೂ ಪರ ಊರಿನ ಭಕ್ತರು ಸರತಿ ಸಾಲಿನಲ್ಲಿ ನಿಂತು ಮಹಾಸತಿ ದೇವಿಗೆ ಪೂಜೆ ಅರ್ಪಿಸಿ ಪುನೀತರಾದರು.


ತಮ್ಮ ಕಷ್ಟ ಕಾರ್ಪಣ್ಯಗಳ ನಿವಾರಣೆಗಾಗಿ ಕೆಂಡಸೇವೆಯ ಹರಕೆ ಹೊತ್ತ ಜನರು ಕೆಂಡವನ್ನು ತುಳಿಯುವುದರ ಮೂಲಕ ತಮ್ಮ ಇಷ್ಟ ದೇವತೆಯನ್ನು ಸಂತುಷ್ಟಗೊಳಿಸಿದರು. ಮಕ್ಕಳು, ಹೆಂಗಸರು, ವಯೋವೃದ್ಧರು ಕೆಂಡಸೇವೆಯಲ್ಲಿ ಪಾಲ್ಗೊಂಡು ಭಾವೋನ್ಮಾದಕ್ಕೆ ಒಳಗಾದರು. ಹಲವು ಭಕ್ತಾದಿಗಳು ಗೊಂಬೆ ಸೇವೆಯನ್ನೂ ಕೈಗೊಂಡರು. ಭಕ್ತರ ದೂರು ದುಮ್ಮಾನಗಳು, ಬೇಡಿಕೆಗಳು ವಿವಿಧ ಬಗೆಯಾಗಿ ದೇವಿಯ ಬಳಿ ಸಾಗಿ ಬಂದವು. ಸೃಷ್ಟಿಯ ಈ ಎಲ್ಲ ವಿಸ್ಮಯಗಳನ್ನು ಕಣ್ಣಲ್ಲಿ ತುಂಬಿಕೊಂಡ ಸಾವಿರಾರು ಜನರು ಬಿರು ಬಿಸಿಲಿನಲ್ಲಿಯೇ ನಿಂತು ಜಾತ್ರೆಗೊಂದು ಮೆರುಗನ್ನು ತಂದುಕೊಟ್ಟರು. ಜನಜಾತ್ರೆಯ ಪಾಲುದಾರರಾದರು. ತಾಲೂಕು ಆಡಳಿತದ ವತಿಯಿಂದ ಭಕ್ತರ ಬಾಯಾರಿಕೆಯನ್ನು ನೀಗಿಸಲು ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ತಿಂಡಿ ತಿನಿಸುಗಳು, ಆಟಿಕೆ ಸಾಮಾನುಗಳು, ಹೂವು-ಹಣ್ಣಿನ ಅಂಗಡಿಗಳು ಜಾತ್ರೆಯಲ್ಲಿ ಜಾಗರಣೆ ನಡೆಸಿದವು. ಜನ ಜಂಗುಳಿಯ ಹಿನ್ನೆಲೆಯಲ್ಲಿ ಸೋಡಿಗದ್ದೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು. ಮಧ್ಯಾಹ್ನದವರೆಗೂ ಸಾಗರೋಪಾದಿಯಲ್ಲಿ ಜನರು ಸೋಡಿಗದ್ದೆಯತ್ತ ದೌಡಾಯಿಸಿ ದೇವಿಯ ದರ್ಶನಕ್ಕೆ ಕಾದು ಕುಳಿತಿರುವುದು ಕಂಡು ಬಂತು. ಸೋಮವಾರದಿಂದ ದೇವಸ್ಥಾನದಲ್ಲಿ ತುಲಾಭಾರ ಸೇವೆಗೆ ಅವಕಾಶವನ್ನು ಕಲ್ಪಿಸಲಾಗಿದೆ.
ಸಂಜೆಯ ಮನರಂಜನಾ ಕಾರ್ಯಕ್ರಮಗಳು ಜಾತ್ರೆಗೆ ರಂಗನ್ನು ತಂದುಕೊಟ್ಟವು. ಶ್ರೀ ಗಜಾನನ ಯುವಕ ಮಂಡಳಿ (ರಿ) ಬೆಳಕೆ ಇದರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಧಾ ಬರಗೂರು ಹಾಸ್ಯ ತಂಡದ ನೇತೃತ್ವವನ್ನು ವಹಿಸಿದರೆ, ಜಿ ಕನ್ನಡ ವಾಹಿನಿ ‘ಲಿಟ್ಲ ಚಾಂಪ್’ ವಿಜಯಿ ‘ಮರಿ ಅಣ್ಣೋರು’ ಖ್ಯಾತಿಯ ಮನೋಜಾವಂ ಹಾಡುಗಾರಿಕೆ ಜನರನ್ನು ರಂಜಿಸಲು ಯಶಸ್ವಿಯಾಯಿತು.