ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ತಣಿಯದ ಭಿನ್ನಮತ?. ಶೆಟ್ಟರ್‌ಗೆ ಗ್ರಾಮೀಣಾಭಿವೃದ್ಧಿ ಖಾತೆ: ಪ್ರಮಾಣ ವಚನ ಸ್ವೀಕಾರ;

ಬೆಂಗಳೂರು: ತಣಿಯದ ಭಿನ್ನಮತ?. ಶೆಟ್ಟರ್‌ಗೆ ಗ್ರಾಮೀಣಾಭಿವೃದ್ಧಿ ಖಾತೆ: ಪ್ರಮಾಣ ವಚನ ಸ್ವೀಕಾರ;

Wed, 18 Nov 2009 02:51:00  Office Staff   S.O. News Service

ಬೆಂಗಳೂರು, ನ.೧೬: ನಿನ್ನೆ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಗದೀಶ್ ಶೆಟ್ಟರ್, ಇಂದು ಸಂಪುಟ ದರ್ಜೆಯ ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು. ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಜಗದೀಶ್ ಶೆಟ್ಟರ್‌ಗೆ ಗ್ರಾಮೀಣಾಭಿವೃದ್ಧಿ ಖಾತೆಯನ್ನು ವಹಿಸಲಾಗಿದೆ. ಸಚಿವೆ ಶೋಭಾ ಕರಂದ್ಲಾಜೆಯವರ ರಾಜೀನಾಮೆಯಿಂದ ಈ ಖಾತೆ ತೆರವಾಗಿತ್ತು.

14483.jpg

ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಎಚ್.ಆರ್.ಭಾರಧ್ವಜ್ ಮುಖ್ಯಮಂತ್ರಿ ಯಡಿಯೂರಪ್ಪನವರ ಸಮ್ಮುಖದಲ್ಲಿ ಜಗದೀಶ್ ಶೆಟ್ಟರವರಿಗೆ ಗೌಪ್ಯತೆ ಮತ್ತು ಪ್ರಾಮಾಣಿಕ ಬದ್ಧತೆಯ ಪ್ರಮಾಣ ವಚನ ಬೋಧಿಸಿದರು. ನಂತರ ಶೆಟ್ಟರವನ್ನು ಮುಖ್ಯಮಂತ್ರಿ ಅಭಿನಂದಿಸಿದರು.

ಬೆಳಗ್ಗೆ ೧೧.೩೦ಕ್ಕೆ ಆರಂಭವಾದ ಪ್ರಮಾಣ ವಚನ ಸಮಾರಂಭ ಕೆಲವೆ ನಿಮಿಷಗಳಲ್ಲಿ ಮುಕ್ತಾಯವಾಯಿತು. ನಂತರ ಜಗದೀಶ್ ಶೆಟ್ಟರ್ ವೇದಿಕೆಯ ಮುಂದೆ ಕುಳಿತಿದ್ದ ಸಚಿವರಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಶ್ರೀರಾಮುಲುರ ಬಳಿಗೆ ಹೋಗಿ ಶುಭಾಷಯ ವಿನಿಮಯ ಮಾಡಿಕೊಂಡರು. ಜಗದೀಶ್ ಶೆಟ್ಟರ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಧಾರವಾಡದಿಂದ ಸುಮಾರು ೨ ಸಾವಿರ ಜನ ಆಗಮಿಸಿದರು.

14506_3.jpg

ರಾಜಭನದ ಗಾಜಿನಮನೆಯಲ್ಲಿ ಕಿಕ್ಕಿರಿದ ಜನಸ್ತೋಮದ ನಡುವೆ ಶೆಟ್ಟರ್ ಪ್ರಮಾಣ ವಚನ ಸ್ವೀಕಾರ ಮಾಡಿದಾಗ ಜಯಕಾರಗಳು ಮೋಳಗಿದವು. ಸರಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಕಾರ್ಯಕ್ರಮ ನಿರೂಪಿಸಿದರು.

ಭಿನ್ನಮತೀಯ ಶಾಸಕರು ಪ್ರತಿಭಟನೆ ನಡೆಸುವ ಬೆದರಿಕೆ ಇದಿದ್ದರಿಂದ ರಾಜಭವನದ ಒಳಗೆ ಮತ್ತು ಹೊರಗೆ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಯಡಿಯೂರಪ್ಪನವರ ವಿರುದ್ಧ ಬಂಡಾಯ ಸಾರಿದ್ದ ಶಾಸಕ ಮತ್ತು ಸಚಿವರು ಹಾಜರಿದ್ದರು. ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದ ಕೆಲ ಸಚಿವರು ಗೈರು ಹಾಜರಾಗಿದ್ದರು. ಶೆಟ್ಟರ್ ಕುಟುಂಬದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವ್ಯಕ್ತಿ ಪರಿಚಯ:

14483_3.jpg

ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಶಾಸಕರಾದ ಜಗದೀಶ್ ಶೆಟ್ಟರ್ ಎಬಿವಿಪಿಯಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಸ್ವಯಂ ಸೇವಕ ಸಂಘ ಹಾಗೂ ಇತರಡೆ ಸೇವೆ ಸಲ್ಲಿಸಿದ ಅವರು, ೧೯೯೦ರಲ್ಲಿ ಹುಬ್ಬಳ್ಳಿ ಗ್ರಾಮಾಂತರ ಕ್ಷೇತ್ರದ ಅಧ್ಯಕ್ಷರಾಗುವ ಮೂಲಕ ರಾಜಕೀಯಕ್ಕೆ ಅಧಿಕೃತವಾಗಿ ಪ್ರವೇಶ ಪಡೆದರು.

ನಂತರ ಜಿಲ್ಲಾ ಬಿಜೆಪಿ, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ, ಪ್ರತಿಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದರು. ಜೆಡಿ‌ಎಸ್-ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಕಂದಾಯ ಸಚಿವರಾಗಿದ್ದ ಶೆಟ್ಟರ್ ಬಿಜೆಪಿ ಸ್ವಂತ ಬಲದ ಮೇಲೆ ಸರಕಾರ ರಚನೆಯಾದಾಗ ಯಡಿಯೂರಪ್ಪ ಮತ್ತು ವರಿಷ್ಠರ ಒತ್ತಾಸೆಯಂತೆ ಸ್ಪೀಕರ್ ಸ್ಥಾನವನ್ನು ಒಲ್ಲದ ಮನಸ್ಸಿನಿಂದಲೆ ಒಪ್ಪಿಕೊಂಡಿ ದ್ದರು.

೧೯೯೪, ೧೯೯೯, ೨೦೦೪ ಮತು ೨೦೦೮ ಸೇರಿದಂತೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಬಿಜೆಪಿಯ ಪ್ರಮುಖ ನಾಯಕರು. ಕಳೆದ ವಿಧಾನಸಭೆ ಚುನಾವಣೆ ಪೂವದಲ್ಲಿ ಜೆಡಿಯುನಿಂದ ವಲಸೆ ಬಂದಿದ್ದ ಬಸವರಾಜ ಬೋಮ್ಮಾಯಿಯವರನ್ನು ಶೆಟ್ಟರ್‌ರವರಿಗೆ ಪರ್ಯಾಯ ನಾಯಕರನ್ನಾಗಿ ಬೆಳೆಸಲು ಯಡಿಯೂರಪ್ಪ ಯತ್ನಿಸಿದ್ದೇ ಬಿಜೆಪಿಯ ಬಿಕ್ಕಟ್ಟಿನಲ್ಲಿ ಶೆಟ್ಟರ್ ಗಣಿಧಣಿಗಳ ಜೊತೆ ಕೈಜೋಡಿಸಲು ಕಾರಣ ಎಂದು ಹೇಳಲಾಗಿದೆ.

ಬಿಕ್ಕಟ್ಟಿನ ಸಂದರ್ಭದಲ್ಲಿ ಶೆಟ್ಟರ್‌ನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಸಕ್ರಿಯ ರಾಜಕಾರಣಕ್ಕೆ ತರಬೇಕು ಎಂದು ಗಣಿಧಣಿಗಳು ವರಿಷ್ಠರ ಮುಂದೆ ಬೇಡಿಕೆ ಮಂಡಿಸಿದ್ದರು. ಅದರಂತೆ ಇಂದು ಶೆಟ್ಟರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಹೊಸ ಅಧ್ಯಾಯ: ಶೆಟ್ಟರ್

14483_2.jpg

ಇನ್ನು ಮುಂದೆ ಭಿನ್ನಮತೀಯ ಚಟುವಟಿಕೆಗಳು ನಡೆಯುವುದಿಲ್ಲ ಎಂದು ನೂತನ ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.

ಇನ್ನು ಮುಂದೆ ನಾವೆಲ್ಲಾ ಒಟ್ಟಾಗಿರುತ್ತೇವೆ. ಇಂದಿನಿಂದ ಹೊಸ ಅಧ್ಯಾಯ ಪ್ರಾರಂಭವಾಗಿದೆ. ಬಿಜೆಪಿಯಲ್ಲಿ ಒಂದೇ ಗುಂಪು ಅದರ ಹೊರತಾಗಿ ಪ್ರತ್ಯೇಕ ಗುಂಪುಗಳಿವೆ ಎಂಬುದು ಸುಳ್ಳು ಎಂದು ಹೇಳಿದರು.

ಸ್ವೀಕರ್ ಸ್ಥಾನದ ಬಗ್ಗೆ ತಮಗೆ ಅಪಾರ ಗೌರವ ಇದೆ. ಆ ಸ್ಥಾನಕ್ಕೆ ಚ್ಯುತಿ ತರುವಂತೆ ಎಂದಿಗೂ ನಡೆದುಕೊಂಡಿಲ್ಲ. ಪಕ್ಷದ ವತಿಯಿಂದ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗುತ್ತಿಲ್ಲ ಎಂಬ ನೋವು ಹೊರತು ಪಡಿಸಿ, ಸ್ಪೀಕರ್ ಸ್ಥಾನಕ್ಕೆ ಬದ್ಧನಾಗಿ ಸೇವೆ ಸಲ್ಲಿಸಿದ್ದೇನೆ. ರಾಜಕೀಯ ಹೊರತಾಗಿ ನಡೆದುಕೊಂಡಿದ್ದೇನೆ.

ಒಂದುವರೆ ವರ್ಷದ ನಂತರ ನಾಳೆ ನಡೆಯುತ್ತಿರುವ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತೋಷವಾಗಿದೆ ಎಂದು ಅವರು ನುಡಿದರು.

ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳಿಂದ ನೆರೆ ಸಂತ್ರಸ್ಥರ ಪರಿಹಾರ ಕಾರ್ಯಗಳು ಸ್ಥಗಿತಗೊಂಡಿರಲಿಲ್ಲ ಎಂದರು. ಸಕ್ರಿಯ ರಾಜಕಾರಣದಿಂದ ಮಾತ್ರ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯ. ಆದ್ದರಿಂದ ಇಂದು ತಮಗೆ ತುಂಬಾ ಸಂತೋಷವಾಗಿದೆ ಎಂದು ಅವರು ನುಡಿದರು.

ಎಲ್ಲ ಬೇಡಿಕೆಗಳೂ ಈಡೇರಿವೆ: ಯಡಿಯೂರಪ್ಪ

14483_1.jpg

ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಉತ್ತರ ಕರ್ನಾಟಕ ಭಾಗದ ಪ್ರಮುಖ ನಾಯಕರಾದ ಶೆಟ್ಟರ್ ಸಚಿವರಾಗಿರುವುದು ತಮಗೆ ಸಂತೋಷ ತಂದಿದೆ ಎಂದು ಹೇಳಿದರು.

ಸದ್ಯಕ್ಕೆ ಸಂಪುಟದಲ್ಲಿ ಯಾವುದೇ ಬದಲಾವಣೆಯಿಲ್ಲ. ರೆಡ್ಡಿ ಸಹೋದರರು ಮಂಡಿಸಿದ್ದ ಎಲ್ಲ ಬೇಡಿಕೆಗಳು ಈಡೇರಿವೆ. ಉಳಿದಂತೆ ಬೇರ‍್ಯಾವ ಬೇಡಿಕೆಗಳು ಇಲ್ಲ ಎಂದು ಯಡಿಯೂರಪ್ಪ ಹೇಳಿದರು.

ತಣಿಯದ ಭಿನ್ನಮತ

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಶಾಸಕರಲ್ಲಿ ವಿಶ್ವಾಸವಿಲ್ಲ ಎಂಬ ಪ್ರಬಲವಾದವನ್ನು ಬಿಜೆಪಿ ಶಾಸಕಾಂಗ ಸಭೆಯಲ್ಲಿ ರಾಷ್ಟ್ರೀಯ ನಾಯಕತ್ವದ ಮುಂದೆ ಮಂಡಿಸಲು ಗಣಿಧಣಿಗಳ ಬಣ ಸಜ್ಜುಗೊಂಡಿದೆ.

ಬಿಜೆಪಿ ಬಿಕ್ಕಟ್ಟಿನ ನಂತರ ಮೊದಲ ಬಾರಿಗೆ ನಡೆಯುತ್ತಿರುವ ಮೊದಲ ಶಾಸಕಾಂಗ ಸಭೆಯಲ್ಲಿ ಯಡಿಯೂರಪ್ಪನವರ ವೈಪಲ್ಯಗಳ ಪಟ್ಟಿ ಮಂಡಿಸಿ ಅಸಮರ್ಥತೆಯನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಡಲು ತಂತ್ರ ರೂಪಿಸಿರುವ ಗಣಿಧಣಿಗಳ ಬಣದ ಶಾಸಕರು ಪೂರ್ವ ಭಾವಿಯಾಗಿ ಇಂದು ಕಂದಾಯ ಸಚಿವ ಕರುಣಾಕರ ರೆಡ್ಡಿಯವರ ನಿವಾಸದಲ್ಲಿ ಮಹತ್ವದ ಚರ್ಚೆ ನಡೆಸಿದರು.

ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದು ೧೫ ದಿನಗಳ ಕಾಲ ಗಣಿಧಣಿಗಳು ನಡೆಸಿದ ಭಿನ್ನಮತೀಯ ಚಟುವಟಿಕೆಗಳಿಗೆ ರಾಷ್ಟ್ರೀಯ ಮುಖಂಡರಾದ ಸುಷ್ಮಾ ಸ್ವರಾಜ್‌ರ ಮಧ್ಯ ಪ್ರವೇಶದಿಂದ ತಾತ್ಕಾಲಿಕ ತೆರೆ ಬಿದಿತ್ತು. ಜನಾರ್ದನ ರೆಡ್ಡಿ ಮುಖ್ಯಮಂತ್ರಿಯೊಂದಿಗೆ ಕೈಜೋಡಿಸಿ ಸಂಧಾನಕ್ಕೆ ಬದ್ಧವಾಗಿರುವುದಾಗಿ ಹೇಳಿದ್ದರು. ಕರುಣಾಕರ ರೆಡ್ಡಿ ತಮ್ಮ ಸಂಧಾನದಿಂದ ಹೊರಗುಳಿದಿದ್ದಾರೆ. ಜೊತೆಗೆ ಸಿನಿಮಾ ಇನ್ನು ಅಂತಿಮ ಘಟ್ಟಕ್ಕೆ ಬಂದಿಲ್ಲ ಎಂದು ಹೇಳುತ್ತಲೇ ಇದ್ದಾರೆ.

ಈ ಹಿನ್ನೆಲೆಯಲ್ಲಿ ಭಿನ್ನಮತೀಯ ಶಾಸಕರು ಕರುಣಾಕರ ರೆಡ್ಡಿಯವರ ನಾಯಕತ್ವದಲ್ಲಿ ನಾಳೆ ನಡೆಯುವ ಶಾಸಕಾಂಗ ಸಭೆಯಲ್ಲಿ ಯಡಿಯೂರಪ್ಪನವರ ವಿರುದ್ಧ ಬಂಡಾಯದ ಕಹಳೆ ಊದಲು ಸಿದ್ಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಾಯಕತ್ವ ಬದಲಾಗಲೇ ಬೇಕು ಎಂಬ ಗರಿಷ್ಠ ಮಟ್ಟದ ಬೇಡಿಕೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಈಗಾಗಲೇ ಬದ್ಧರಾಗಿರುವುದಾಗಿ ಹೇಳಿದ್ದೇವೆ. ಆದರೆ, ಬಿಜೆಪಿ ಸರಕಾರ ಸುಗಮ ಆಡಳಿತ ನಡೆಸಬೇಕಾದರೆ ನಾಯಕತ್ವ ಬದಲಾಗಲೇ ಬೇಕು. ತಮ್ಮ ಬೇಡಿಕೆಯನ್ನು ಶಾಸಕಾಂಗ ಸಭೆಯಲ್ಲಿ ಮಂಡಿಸಲಿದ್ದೇವೆ ಎಂದು ಹೆಸರು ಹೇಳಲು ಇಚ್ಚಿಸದ ಶಾಸಕರೊಬ್ಬರು ತಿಳಿಸಿದ್ದಾರೆ.

ಶೋಭಾ ಕರಂದ್ಲಾಜೆ ತಲೆದಂಡದೊಂದಿಗೆ ಅನ್ಯ ಪಕ್ಷಗಳಿಂದ ವಲಸೆ ಬಂದು ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ನಾಲ್ಕು ಮಂದಿ ಸಚಿವರ ರಾಜೀನಾಮೆಯನ್ನು ಪಡೆಯಬೇಕು. ತೆರವಾಗಿರುವ ಸ್ಥಾನಗಳಿಗೆ ಪಕ್ಷದ ನಿಷ್ಠಾವಂತ ಶಾಸಕರನ್ನು ನೇಮಿಸಬೇಕು. ಆವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಶಾಸಕರು ಹೇಳಿದ್ದಾರೆ.

ರೇಣುಕಾಚಾರ್ಯರ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಗೂಳಿಹಟ್ಟಿ ಶೇಖರ್, ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಬೇಳೂರು ಗೋಪಾಲಕೃಷ್ಣ, ವೈ.ಸಂಪಂಗಿ, ಸಾರ್ವಭೋಮ ಬಗಲಿ, ದೋಡ್ಡನಗೌಡ ಪಾಟೀಲ್, ಎಸ್.ಕೆ.ಬೆಳ್ಳುಬ್ಬಿ, ಸೀಮಾಮಸೂತಿ ಸೇರಿದಂತೆ ೨೫ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರು.

ಸಮನ್ವಯ ಸಮಿತಿ ರಚನೆ

14503.jpg

ಬೆಂಗಳೂರು: ಬಿಜೆಪಿ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಳಿಬಂದಿದ್ದ ಪ್ರಮುಖ ಬೇಡಿಕೆಯಾದ ಸಮನ್ವಯ ಸಮಿತಿ ರಚನೆಗೆ ಅಸ್ತು ಎಂದಿರುವ ಹೈಕಮಾಂಡ್, ಇಂದು ಸಂಜೆ ಸಮಿತಿಯನ್ನು ರಚನೆ ಮಾಡಿದೆ.

ನಾಳೆ (ಬುಧವಾರ) ಬೆಳಗ್ಗೆ ೧೨.೩೦ಕ್ಕೆ ಬಿಜೆಪಿ ಶಾಸಕಾಂಗ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಇದಕ್ಕೂ ಮೊದಲು ಬೆಳಗ್ಗೆ ೧೦.೩೦ಕ್ಕೆ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಇದೇ ಮೊದಲ ಬಾರಿಗೆ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ಉಪ ನಾಯಕಿ ಸುಷ್ಮಾ ಸ್ವರಾಜ್ ಭಾಗವಹಿಸಿಲಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅರುಣ್ ಜೇಟ್ಲಿ ನೇತೃತ್ವದಲ್ಲಿ ಈವರೆಗೆ ಶಾಸಕಾಂಗ ಸಭೆಗಳು ನಡೆಯುತ್ತಿದ್ದವು. ನಾಳೆ ನಡೆಯುವ ಸಭೆಗೆ ಇಬ್ಬರು ರಾಷ್ಟ್ರೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಹದಿನಾಲ್ಕು ಮಂದಿಯನ್ನೊಳಗೊಂಡ ಸಮನ್ವಯ ಸಮಿತಿಯಲ್ಲಿ ಗಣಿಧಣಿಗಳ ಬಣದ ಕರುಣಾಕರ ರೆಡ್ಡಿ, ಜಗದೀಶ್ ಶೆಟ್ಟರ್ ಮಾತ್ರ ಸೇರ್ಪಡೆಯಾಗಿದ್ದಾರೆ ಉಳಿದಂತೆ ಯಡಿಯೂರಪ್ಪ ಬಣದ ನಾಯಕರೆ ಹೆಚ್ಚಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳು ಮತ್ತು ಸಂಘ ಪರಿವಾರದ ಪ್ರಮುಖ ಮುಖಂಡರಾದ ಸಂತೋಷ್, ವಿ.ಸತೀಶ್ ಸಮಿತಿಗೆ ವಿಶೇಷ ಆಹ್ವಾನಿತರಾಗಿದ್ದಾರೆ.

ಸಮಿತಿಯ ಸದಸ್ಯರು: ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದಗೌಡ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಅನಂತ್‌ಕುಮಾರ್, ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಕಂದಾಯ ಸಚಿವ ಕರುಣಾಕರ ರೆಡ್ಡಿ, ಇಂಧನ ಸಚಿವ ಕೆ.ಎಸ್.ಈಶ್ವರಪ್ಪ, ಕಾನೂನು ಮತ್ತು ಸಂಸದೀಯ ಹಾಗೂ ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್, ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ,  ಸಾರಿಗೆ ಸಚಿವ ಆರ್.ಅಶೋಕ್, ಅಬಕಾರಿ, ಮಾಹಿತಿ ತಂತ್ರಜ್ಞಾನ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ವಿಶೇಷ ಆಹ್ವಾನಿತರಾಗಿ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ವಿ.ಸತೀಶ್ ಹಾಗೂ ಸಂತೋಷ್ ಅವರನ್ನೊಳೊಂಡ ೧೨ ಮಂದಿಯ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ.


Share: