ಭಟ್ಕಳ: ತಾಲೂಕಿನ ಶಿರಾಲಿಯ ಬಂಡಿಕಾಶಿಯಲ್ಲಿ ಹಾಡುಹಗಲೇ ಮನೆಯೊಂದರ ಬಾಗಿಲು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಚಿನ್ನಾಭರಣ, ಸಾವಿರಾರು ರೂಪಾಯಿ ನಗದು ದೋಚಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಶಿರಾಲಿಯ ಬಂಡಿಕಾಶಿ ನಿವಾಸಿ ಮಂಜುನಾಥ ರಾಮ ನಾಯ್ಕ ಎನ್ನುವರರಿಗೆ ಸೇರಿದ ಮನೆಯಲ್ಲಿ ಕಳ್ಳತನವಾಗಿದೆ. ಮಂಜುನಾಥ ನಾಯ್ಕ ಬೊಲೆರೋ ವಾಹನ ಮಾಲಿಕರಾಗಿದ್ದು, ಶುಕ್ರವಾರ ಬೆಳಿಗ್ಗೆ ಮಗನನ್ನು ಕರೆದುಕೊಂಡು ವಾಹನ ಬಾಡಿಗೆಗೆ ತೆರಳಿದ್ದರು. ಅದೇ ಸಮಯದಲ್ಲಿ ಈತನ ಪತ್ನಿ ಬೇಬಿ ಮಂಜುನಾಥ ನಾಯ್ಕ ಅವರು ಮನೆಗೆ ಬೀಗ ಹಾಕಿ ಚಿತ್ರಾಪುರದಲ್ಲಿರುವ ಪೇಪರ್ ಬ್ಯಾಗ ತಯಾರಿಕೆ ಪ್ಯಾಕ್ಟರಿಗೆ ಕೆಲಸಕ್ಕೆ ತೆರಳಿದ್ದರು.
ಇದೇ ಸಮಯವನ್ನು ಹೊಂಚು ಹಾಕಿ ಕುಳಿತ ಕಳ್ಳರು ಮನೆಯ ಹಿಂಬಾಗಿಲನ್ನು ತೆರೆದು ಒಳನುಗ್ಗಿ ವಾಸದ ಕೋಣೆಯಲ್ಲಿರುವ ಕಪಾಟನ್ನು ಒಡೆದು ಅಂದಾಜು 250 ಗ್ರಾಂ ತೂಕದ ಚಿನ್ನಾಭರಣವನ್ನು ಹಾಗೂ ಸುಮಾರು 35 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಮನೆಯ ಮಾಲಿಕ ಮಂಜುನಾಥ ನಾಯ್ಕ ಮನೆಗೆ ಬಂದು ಹಿಂಬದಿ ಅಡುಗೆ ಒಲೆಗೆ ಸೌದೆ ಹಾಕಲು ಮುಂದಾದಾಗ ಹಿಂಬದಿ ಬಾಗಿಲು ತೆರೆದಿರುವುದವನ್ನು ಗಮನಕ್ಕೆ ಬಂದು ಪರಿಶೀಲಿಸಿದಾಗ ಮನೆಯೊಳಗೆ ಎಲ್ಲವೂ ಚೆಲ್ಲಾಪಿಲ್ಲಿಯಾಗಿರುವು ಕಂಡು ಬಂತು. ತಕ್ಷಣ ಗ್ರಾಮೀಣ ಪೊಲೀಸರಿಗೆ ತಿಳಿಸಿದ್ದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯವಾಗಿ ಪರಿಶೀಲಿಸಿ ನಂತರ ಕಾರವಾರದಿಂದ ಶ್ವಾನ ದಳವನ್ನು ಕರೆಯಿಸಿ ಪರಿಶೀಲನೆ ನಡೆಸಿದ್ದಾರೆ.