ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಹೊಸದಿಲ್ಲಿ: ಎ.8ಕ್ಕೆ ಬೆಲೆಯೇರಿಕೆಯ ವಿರುದ್ಧ ಎಡಪಕ್ಷಗಳಿಂದ ‘ಜೈಲ್ ಭರೊ’: ಪ್ರಕಾಶ್‌ ಕಾರಟ್‌

ಹೊಸದಿಲ್ಲಿ: ಎ.8ಕ್ಕೆ ಬೆಲೆಯೇರಿಕೆಯ ವಿರುದ್ಧ ಎಡಪಕ್ಷಗಳಿಂದ ‘ಜೈಲ್ ಭರೊ’: ಪ್ರಕಾಶ್‌ ಕಾರಟ್‌

Sat, 13 Mar 2010 02:18:00  Office Staff   S.O. News Service
ಹೊಸದಿಲ್ಲಿ, ಮಾ.೧೨: ಅಗತ್ಯ ವಸ್ತುಗಳ ತೀವ್ರ ಬೆಲೆಯೇರಿಕೆಯನ್ನು ವಿರೋಧಿಸಿ ಎ.೮ರಂದು ದೇಶಾದ್ಯಂತ ‘ಜೈಲ್ ಭರೊ’ ಚಳವಳಿ ನಡೆಸಲು ಎಡಪಕ್ಷಗಳು ಶುಕ್ರವಾರ ನಿರ್ಧರಿಸಿವೆ.

‘ಜನವಿರೋಧಿ, ಕಾಂಗ್ರೆಸ್ ನೇತೃತ್ವದ ಯುಪಿ‌ಎ ಸರಕಾರಕ್ಕೆ ಎಚ್ಚರಿಕೆ ನೀಡುವ ಸಲುವಾಗಿ ಸುಮಾರು ೨೫ ಲಕ್ಷ ಕಾರ್ಯಕರ್ತರು ದೇಶಾದ್ಯಂತ ಸರಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಿ ಸ್ವಯಂ ಬಂಧನಕ್ಕೆ ಒಳಗಾಗಲಿದ್ದಾರೆಂದು ಅವು ಹೇಳಿವೆ.

ಎ.೮ರ ಚಳವಳಿಯು ಕೇಂದ್ರ ಸರಕಾರದ ನೀತಿಯ ವಿರುದ್ಧ ನಡೆಯಲಿರುವ ಅತಿ ದೊಟ್ಟ ಜನಪ್ರತಿಭಟನೆಯಾಗಲಿದೆ. ಸರಕಾರ ಇದಕ್ಕೆ ಕಿವಿ ಕೊಡದಿದ್ದಲ್ಲಿ ಬಜೆಟ್ ಅಧಿವೇಶನದ ಉಳಿದ ಅವಧಿಗೆ ತಾವು ಸರಕಾರದ ವಿರುದ್ಧ ಕೆಲಸ ಮಾಡಲಿದ್ದೇವೆ ಎಂದು ಸಿಪಿ‌ಎಂ ನಾಯಕ ಪ್ರಕಾಶ್ ಕಾರಟ್ ಇಂದು ನಡೆದ ರ‍್ಯಾಲಿಯೊಂದರಲ್ಲಿ ತಿಳಿಸಿದರು.

ಇಂದು ಸಂಸದ್ಭವನಕ್ಕೆ ಹೋಗುವ ರಸ್ತೆಗಳೆಲ್ಲ ನಾಲ್ಕು ಎಡಪಕ್ಷಗಳ ಕೆಂಪು ಧ್ವಜಗಳಿಂದ ಕೆಚ್ಚನಾಗಿದ್ದವು.

ರ‍್ಯಾಲಿಯು ಬೆಲೆ ನಿಯಂತ್ರಣ, ಆಹಾರದ ಹಕ್ಕು, ಆರೋಗ್ಯದ ಹಕ್ಕು ಹಾಗೂ ಸಾರ್ವಜನಿಕ ವಿತರಣ ವ್ಯವಸ್ಥೆ ಬಲಗೊಳಿಸುವುದು ಇತ್ಯಾದಿ ಬೇಡಿಕೆಗಳನ್ನು ಸರಕಾರದ ಮುಂದಿರಿಸಿತು. ಸಭೆಯಲ್ಲಿ ಸಿಪಿ‌ಐ ನಾಯಕ ಎ.ಬಿ. ಬರ್ಧನ್, ಆರೆಸ್ಪಿ ನಾಯಕ ಟಿ.ಜೆ. ಚಂದ್ರಚೂಡನ್, ಸಿಪಿ‌ಐ ಸಂಸದೀಯ ಪಕ್ಷದ ನಾಯಕ ಗುರುದಾಸ ದಾಸಗುಪ್ತಾ ಹಾಗೂ ಸಿಪಿ‌ಎಂ ಸಂಸದೀಯ ಪಕ್ಷದ ನಾಯಕ ಸೀತಾರಾಮ ಯೆಚೂರಿ ಭಾಷಣ ಮಾಡಿದರು.

ಜನಸಾಮಾನ್ಯರಿಗೆ ಉದ್ಯೋಗ ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಯುಪಿ‌ಎ ಸರಕಾರವು ಶ್ರೀಮಂತರು ಹಾಗೂ ಕಾರ್ಪೊರೇಟ್ ವಲಯವನ್ನು ಬೆಂಬಲಿಸುವ ಮೂಲಕ ಮಾತು ತಪ್ಪಿದೆಯೆಂದು ಅವರು ಆರೋಪಿಸಿದರು.

ಕೇಂದ್ರ ಸರಕಾರವು ಕಾರ್ಪೊರೇಟರ್ ವಲಯಕ್ಕೆ ರೂ. ೮೦ ಸಾವಿರ ಕೋಟಿಗಲಷ್ಟು ರಿಯಾಯ್ತಿಗಳನ್ನು ನೀಡಿದ್ದರೆ, ದುಡಿಯುವ ವರ್ಗದ ಮೇಲೆ ರೂ. ೬೦ ಸಾವಿರ ಕೋಟಿಯಷ್ಟು ಪರೋಕ್ಷ ತೆರಿಗೆ ವಿಧಿಸಿದೆಯೆಂದ ದಾಸ್‌ಗುಪ್ತಾ, ಸರಕಾರದ ವಿರುದ್ಧ ಸಮರ ಆರಂಭವಾಗಿದೆ ಎಂದು ಎಚ್ಚರಿಸಿದರು.

Share: