ಭಟ್ಕಳ, ಡಿಸೆಂಬರ್ 29: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಪಕ್ಕದಲ್ಲಿರುವ ಸಾಹಿಲ್ ಆನ್ ಲಾಯಿನ್ ಪತ್ರಿಕಾ ಕಛೇರಿಗೆ ಎಕಾಏಕಿ ನುಗ್ಗಿದ ಐದು ಜನ ದುಷ್ಕರ್ಮಿಗಳ ತಂಡವು ಅಲ್ಲಿ ಕೆಲಸ ಮಾಡುವ ಕಛೇರಿ ಸಿಬ್ಬಂದಿ ಅತಾವುಲ್ಲಾ ಶೇಖ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದು ಕಛೇರಿಯ ಗಾಜುಗಳನ್ನು ದ್ವಂಸಗೊಳಿಸಿದ ಘಟನೆ ಇಂದು ಬೆಳಗ್ಗೆ ಹತ್ತು ಗಂಟೆಗೆ ನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದದೆ. ಈ ಕುರಿತು ಸಾಹಿಲ್ ಆನ್ ಲಾಯಿನ್ ಸಂಪಾದಕ ಇನಾಯತುಲ್ಲಾ ಗವಾಯಿ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿದ್ದು ಐದಾರು ಜನರು ಪಾನಮತ್ತರಾಗಿ ಕಛೇರಿಗೆ ನುಗ್ಗಿದ್ದಲ್ಲದೆ ಕಛೇರಿಯ ಗಾಜುಗಳನ್ನು ಒಡೆದು ಹಾಕಿ ಅಲ್ಲಿ ಕೆಲಸ ಮಾಡುತ್ತಿರುವ ಅತಾವುಲ್ಲಾ ಶೇಖ್ ಎಂಬಾತನಿಗೆ ಹಲ್ಲೆಗೈದು ಜೀವ ಬೆದರಿಕೆಯನ್ನು ಒಡ್ಡಿದ್ದಾರೆ. ನೀವು ನಮ್ಮ ಬಗ್ಗೆ ಪೋಲಿಸರಿಗೆ ಮಾಹಿತಿಯನ್ನು ನೀಡುತ್ತಿರಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆಯನ್ನು ಹಾಕಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ಬಯ್ದು ಜಾತಿ ನಿಂದನೆಯನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಕೋರರು ಪಾನಮತ್ತರಾಗಿ ತೂರಾಡಿಕೊಂಡು ರೇಗಾಡುತ್ತಿದ್ದರು ಎನ್ನಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡ ಪೋಲಿಸರು ಐಟಿಐ ಕಾಲೇಜಿನ ಶಂಕರ ಮಾಸ್ತಪ್ಪ ನಾಯ್ಕ ಹಾಗೂ ಮತ್ತೊಬ್ಬನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ನಗರ ಠಾಣೆ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.

ಪ್ರಕರಣದ ವಿವರ: ಬಸ್ ನಿಲ್ದಾಣದ ಪಕ್ಕದ ಸಮ್ಮರ್ ಐಸ್ಕ್ರೀಮ್ ಪಾರ್ಲರ್ ಹಿಂದಿನ ಸ್ಥಳಾವಕಾಶವು ಕಿಡಿಗೇಡಿಗಳ ಅಡ್ಡೆಯಾಗಿ ಪರಿಣಮಿಸಿದ್ದು, ಕಳೆದ ಏಳೆಂಟು ದಿನಗಳ ಹಿಂದೆ ವಿದ್ಯಾರ್ಥಿಯೋರ್ವ ಥಳಿತಕ್ಕೊಳಗಾಗಿ ಅಲ್ಲಿಯೇ ಕಂಪೌಂಡ ಬಳಿ ತಲೆ ತಿರುಗಿ ಬಿದ್ದಿದ್ದ ಎಂದು ಹೇಳಲಾಗಿದೆ. ಕೂಡಲೇ ಅಲ್ಲಿಯೇ ಪಕ್ಕದ ಸಾಹಿಲ್ ಆನ್ ಲೈನ್ ಕಚೇರಿಯಿಂದ ಪೊಲೀಸ್ ಠಾಣೆಗೆ ಮಾಹಿತಿಯನ್ನು ಕಳುಹಿಸಲಾಗಿತ್ತು ಎಂದು ತಿಳಿದು ಬಂದಿದೆ. ಮಂಗಳವಾರ ಪೊಲೀಸ್ ಜೀಪೊಂದು ಯಾವುದೋ ಕೆಲಸಕ್ಕಾಗಿ ಬಸ್ ನಿಲ್ದಾಣದ ಕಡೆ ಚಲಿಸಿದ್ದು ಅಲ್ಲಿಯೇ ಪಕ್ಕದ ಕಂಪೌಂಡ ಮೇಲೆ ಕುಳಿತು ಸಿಗರೇಟ್ ಸೇದುತ್ತ ಕುಳಿತಿದ್ದ ಯುವಕರ ಗುಂಪೊಂದು ಅಲ್ಲಿಂದ ಪಲಾಯನಗೈಯಿತು ಎಂದು ತಿಳಿದು ಬಂದಿದೆ. ಆದರೆ ಪೊಲೀಸರು ಅವರ ಕೆಲಸ ಮುಗಿಸಿ ಹಿಂದಿರುಗುತ್ತಿದ್ದಂತೆಯೇ ತಮ್ಮ ಚಟುವಟಿಕೆಯನ್ನು ಪೊಲೀಸರಿಗೆ ಅರುಹಿ ಜೀಪನ್ನು ಕರೆಯಿಸಿಕೊಳ್ಳಲಾಗಿದೆ ಎಂದು ತಪ್ಪಾಗಿ ಅರ್ಥೈಸಿಕೊಂಡ ದುಷ್ಕರ್ಮಿಗಳು ಸಾಹಿಲ್ ಆನ್ಲೈನ್ ಕಚೇರಿಯನ್ನು ಪ್ರವೇಶಿಸಿ ಸಿಬ್ಬಂದಿಯನ್ನು ಥಳಿಸಿದ್ದಾರೆ. ಟೇಬಲ್ ಮೇಲಿನ ಗ್ಲಾಸನ್ನು ಪುಡಿಗೈಯಲಾಗಿದೆ. ಈ ಸಂಬಂಧ ಅತಾವುಲ್ಲಾ ಎಂಬುವವರು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರೊಂದನ್ನು ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಶಂಕರ ಮೊಗೇರ ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಎಸೈ ಮಂಜುನಾಥ ಗೌಡ ತನಿಖೆಯನ್ನು ಮುಂದುವರೆಸಿದ್ದಾರೆ.
ಚಿತ್ರ, ವರದಿ: ಎಮ್ಮಾರ್ ಮಾನ್ವಿ / ವಸಂತ ದೇವಾಡಿಗ, ಭಟ್ಕಳ