ಭಟ್ಕಳ, ಅಕ್ಟೋಬರ್ 1: ಉತ್ತರ ಕನ್ನಡ ಜಿಲ್ಲಾ ಕಾಂಗ್ರೇಸ್ ಕಮಿಟಿಯ ಸಭೆಯು ಬುಧವಾರದಂದು ಮುರುಡೇಶ್ವರದ ಆರೆನ್ನೆಸ್ ಸಭಾಭವನದಲ್ಲಿ ಜರುಗಿದ್ದು ಕಾಂಗೈನ ಎರಡು ಬಣಗಳ ನಡುವಿನ ಭಿನ್ನ ಮತದಿಂದಾಗಿ ಸಭೆಯು ಪೂರ್ಣಗೊಳ್ಳದೆ ಮುಂದೂಡಲ್ಪಟ್ಟ ಘಟನೆ ಜರುಗಿದ್ದು ಜಿಲ್ಲೆಯಲ್ಲಿ ಮಾರ್ಗರೇಟ್ ಅಳ್ವ ಹಾಗೂ ಕೆ.ಪಿ.ಸಿ.ಸಿ. ಅಧ್ಯಕ್ಷ ಆರ್. ವಿ.ದೇಶಪಾಂಡೆ ನಡುವಿನ ಗುಂಪುಗಾರಿಕೆಯು ಸ್ಫೋಟಗೊಂಡತಾಗಿದೆ.
ಈ ಸಭೆಯಲ್ಲಿ ಭಾಗವಹಿಸಲು ಆಹ್ವಾನಿತರಿಗೆ ಮಾತ್ರ ಅವಕಾಶವಿದ್ದು ಇತರ ಕಾರ್ಯಕರ್ತರಿಗೆ ಅವಕಾಶವನ್ನು ನೀಡದಿದ್ದುದ್ದೇ ಸಭೆಯಲ್ಲಿ ಗದ್ದಲವೇರ್ಪಡಲು ಕಾರಣವೆನ್ನಲಾಗಿದೆ. ಈ ಗದ್ದಲದ ಹಿಂದೆ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಆಯ್ಕೆಯ ವಿಚಾರವೂ ಸೇರಿದೆ ಎನ್ನಲಾಗಿದೆ.
ಮಧ್ಯಾಹ್ನ ಮೂರು ಗಂಟೆಗೆ ಮುಖಂಡರೊಂದಿಗೆ ವೇದಿಕೆಗೆ ಬಂದ ಭಟ್ಕಳ ವಿಧಾನಸಭಾ ಶಾಸಕ ಜೆ.ಡಿ.ನಾಯ್ಕರು ಆರಂಭದಲ್ಲೆ ಡಿ.ಸಿ.ಸಿ. ಸಭೆಗೆ ಆಹ್ವಾನಿತರನ್ನು ಹೊರತು ಪಡಿಸಿ ಉಳಿದ ಕಾರ್ಯಕರ್ತರು ಸಭೆಯಿಂದ ಹೊರಹೋಗುವಂತೆ ವಿನಂತಿಸಿಕೊಂಡಿದ್ದು ಶಾಸಕರ ವಿನಂತಿಗೆ ಕೆರಳಿದ ಕೆಲವು ಕಾರ್ಯಕರ್ತರು ವೇದಿಕೆ ಬಂದು ತಗಾದೆ ತೆಗೆದರೆ ಇನ್ನು ಕೆಲವು ಅಲ್ಲೆ ಕುಳಿತು ಆಸನಗಳನ್ನು ಅಸ್ಥವ್ಯಸ್ಥಗೊಳಿಸಿದರು ಎನ್ನಲಾಗಿದೆ. ಈ ಮಧ್ಯ ಆಳ್ವ ಹಾಗೂ ಆರ್ವಿಡಿ ಗುಂಪಿನ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದು ಹ್ಯೋಕೈ ಮಾಡಿಕೊಂಡ ಘಟನೆಯು ಜರುಗಿದೆ. ಪರಸ್ಪರ ಧಿಕ್ಕಾರ ಹಾಗೂ ಜೈಕಾರಗಳ ನಡುವೆ ಸಭೆಯು ಅರ್ಧಕ್ಕೆ ಸ್ಥಗಿತಗೊಂಡಿದ್ದಂತೋ ಕಾಂಗೈ ಪಕ್ಷದಲ್ಲಿನ ಅಶಿಸ್ತು ಎತ್ತಿ ತೋರಿಸುತ್ತಿತ್ತು.
ಬೇಸರಿಸಿಕೊಂಡ ನಿಷ್ಠಾವಂತರು: ನಿನ್ನೆ ಜರುಗಿದ ಕಾಂಗೈ ಡಿ.ಸಿ.ಸಿ. ಸಭೆಯಲ್ಲಿ ಕಾಂಗೈನ ಎರಡು ಗುಂಪುಗಳ ಮಧ್ಯ ನಡೆದ ಅಹಿತಕರ ಘಟನೆಗೆ ಕಾಂಗೈನ ನಿಷ್ಠಾವಂತ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದು ಜಿಲ್ಲೆಯಲ್ಲಿ ಪಕ್ಷವನ್ನು ಬಲಶಾಲಿಯನ್ನಾಗಿ ಮಾಡಬೇಕಾಗಿದ್ದ ಮುಖಂಡರೆ ಹೀಗೆ ಎರಡು ಬಣಗಳಲ್ಲಿ ಒಡೆದುಹೋಗಿ ಪರಸ್ಪರರನ್ನು ಹೀಯಾಳಿಸುತ್ತಿರುವುದು ನಾಚಿಕೆಗೇಡು ಸಂಗತಿ ವರಿಷ್ಠರು ಪ್ರಯತ್ನಿಸಿದರೆ ಈ ರಂಪಾಟ ಜರುಗುತ್ತಿರಲಿಲ್ಲವಂದು ನಿಷ್ಟಾವಂತರ ಅನಿಸಿಕೆಯಾಗಿದೆ.
ಡಿ.ಸಿ.ಸಿ ಸಭೆಯ ಸ್ಥಳ ನಿಗಧಿಯಾದ ಆರಂಭದಿಂದಲೆ ಹಲವಾರು ಅಪಸ್ವರಗಳು ಕೇಳಿಬಂದಿದ್ದು ಈ ಸಭೆಯಿಂದಾಗಿ ಕಾಂಗೈ ಪಕ್ಷದಲ್ಲಿ ಭಿನ್ನಮತ ಶಮನಗೊಳ್ಳವ ಬದಲು ಮತ್ತಷ್ಟು ಭುಗಿಲೆದ್ದಂತೆ ಕಾಣುತ್ತಿದೆ. ಜಿಲ್ಲಾಪಂಚಾಯಾತ್ ಅಧ್ಯಕ್ಷರ ಆಯ್ಕೆ ಹಿನ್ನಲೆಯಲ್ಲಿ ಉಂಟಾಗಿರುವ ಗೊಂದಲವೆ ಈ ಭಿನ್ನಮತ ಭುಗಿಲೇಳಲು ಕಾರಣವೆನ್ನಲಾಗಿದೆ.
ದೇಶಪಾಂಡೆ ವಿರುದ್ದ ಕಿಡಿ: ಎ.ಐ.ಸಿ.ಸಿ ಸದಸ್ಯ ಮೋಂಟಿ ಫರ್ನಾಂಡಿಸ್ ಮತ್ತು ಮಾಜಿ ಶಾಸಕ ಗೋಪಾಲ್ ಕಾನಡೆ ಕೆ.ಪಿ.ಸಿ.ಸಿ. ಅಧ್ಯಕ್ಷ ಆರ್.ವಿ.ದೇಶಪಾಂಡೆ ಹಾಗೂ ಜಿಲ್ಲಾಧ್ಯಕ್ಷ ಶಾಂತರಾಮ ಹೆಗಡೆ ವಿರುದ್ಧ ಕಿಡಿಯನ್ನು ಕಾರಿದ್ದು ಕಳೆದ 40 ವರ್ಷಗಳಿಂದ ಪಕ್ಷಕ್ಕೆ ನಿಷ್ಟರಾಗಿದ್ದು ಕಾರ್ಯನಿರ್ವಹಿಸುತ್ತಿರುವ ತಮಗೆ ಮುರುಡೇಶ್ವರದ ಸಭೆಗೆ ಕರೆಯದೆ ಇರುವುದು ಬೇಸರ ತಂದಿದೆ ಅಲ್ಲದೆ ಪಕ್ಷವನ್ನು ಕಟ್ಟಿಬೆಳಸಲು ಶ್ರಮಿಸಿದ ತಮಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಕೆಲವು ಸ್ಥಾಪಿತ ಹಿತಾಸಕ್ತಿಗಳು ಜಿಲ್ಲೆಯಲ್ಲಿ ಪಪಕ್ಷವನ್ನು ಗುಂಪುಗಾರಿಕೆಯತ್ತ ತಳ್ಳುತ್ತಿವೆ ಎಂದು ಅವರು ಆರೋಪಿಸಿದರು. ಕೆಲವರೆ ಪಕ್ಷಕ್ಕಿಂತ ತಮ್ಮ ಸ್ವ ಹಿತಾಸಕ್ತಿಯೆ ಮೇಲಾಗಿದೆ ಎಂದು ಪರೋಕ್ಷವಾಗಿ ದೇಶಪಾಂಡೆಯವರತ್ತ ಬೆಟ್ಟುಮಾಡಿದರು.
ಮಾಂಕಾಳ ಹಾಗೂ ಗರ್ಡಿಕರ್ ಗೈರು:ತಮ್ಮ ಸೌ ಕ್ಷೇತ್ರದಲ್ಲೆ ಜರುಗಿದ ಡಿ.ಸಿ.ಸಿ. ಸಭೆಗೆ ಗೈರು ಹಾಜರಾದ ಜಿ.ಪಂ.ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ದಾಮೋದರ್ ಗರ್ಡಿಕರ್ ಹಾಗೂ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಮಾಂಕಾಳ್ ಎಸ್. ವೈದ್ಯ ಸಭೆಗೆ ಗೈರು ಹಾಜರಾಗುವುದರ ಮೂಲಕ ಆಶ್ಛರ್ಯವನ್ನುಂಟು ಮಾಡಿದರು. ಈ ಸಭೆಯಲ್ಲಿ ಅವರ ಅನುಪಸ್ಥಿತಿಯು ಎದ್ದು ಕಾಣುತ್ತಿತ್ತು.
ಡಿ.ಸಿ.ಸಿ ಅಧ್ಯಕ್ಷರ ಸ್ಪಷ್ಟನೆ: ಈ ಮಧ್ಯ ನಿನ್ನೆ ಸಂಜೆ ಮುರುಡೇಶ್ವರದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಸ್ಪಷ್ಟನೆಯನ್ನು ನೀಡಿದ ಜಿಲ್ಲಾ ಕಾಂಗೈ ಅಧ್ಯಕ್ಷ ಶಾಂತರಾಮ ಹೆಗಡೆ ಜಿ.ಪಂ.ಅಧ್ಯಕ್ಷರ ಆಯ್ಕೆಯಲ್ಲಿ ಯಾವುದೆ ಗೊಂದಲಗಳಿಲ್ಲ ಇನ್ನು ಮುಂದೆ ಇದಕ್ಕೆ ಸಂಬಂಧಿಸಿದಂತೆ ಯಾವುದೆ ಚರ್ಚೆಗೆ ಆಸ್ಪಧವಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಬಗ್ಗೆ ಜಿ.ಪಂ. ಸದಸ್ಯರ ಸ್ಪಷ್ಟವಾದ ಬೆಂಬಲವನ್ನು ಪಡೆಯಲಾಗಿದೆ. ಸಭೆಯಲ್ಲಿ ಹಾಜರಿದ್ದ 13 ಮಂದಿ ಸದಸ್ಯರು ಜಿ.ಪಂ.ಅಧ್ಯಕ್ಷ ಎಲ್.ವಿ.ಶಾನುಭಾಗ್ ಆಯ್ಕೆಗೆ ಬೆಂಬಲವನ್ನು ಸೂಚಿಸಿದ್ದಾರೆ. ಸಭೆಗೆ ಅನಾನುಕೂಲತೆಯ ಕಾರಣದಿಂದ ಬರದೆ ಇರುವ ಸದಸ್ಯರನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ಸಭೇಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಅದರಂತೆ ನೂತವಾಗಿ ಆಯ್ಕೆಗೊಂಡ ಜಿ.ಪಂ ಅಧ್ಯಕ್ಷರಿಗೆ ೧೯ ಸದಸ್ಯರ ಬೆಂಬಲವಿದೆ ಇದಕ್ಕೆ ಸಂಬಂಧಿಸಿದಂತೆ ಯಾವುದೆ ಚರ್ಚೆ,ಹಾಗೂ ಅಭಿಪ್ರಾಯಗಳಿಗೆ ಅವಕಾಶವಿಲ್ಲ ಎಂದರು.
ಈ ಸಂದರ್ಭದಲ್ಲಿ ಭಟ್ಕಳ ಶಾಸಕ ಜೆ.ಡಿ.ನಾಯ್ಕ, ಮುಖಂಡರಾದ ಆರ್. ಆರ್. ಭಾಗವತ್, ರಮಾನಂದಾ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ವರದಿ: ಎಮ್ಮಾರ್ ಮಾನ್ವಿ.