ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ತಜ್ಞರಿಂದ ವೈದ್ಯಕೀಯ ಶಿಬಿರ ಯಶಸ್ವಿ

ಭಟ್ಕಳ: ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ತಜ್ಞರಿಂದ ವೈದ್ಯಕೀಯ ಶಿಬಿರ ಯಶಸ್ವಿ

Mon, 25 Nov 2024 02:58:54  Office Staff   SOnews

 

ಭಟ್ಕಳ: ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಸಂಘ ಮತ್ತು ಭಟ್ಕಳ ಸರಕಾರಿ ಆಸ್ಪತ್ರೆಯ ಸಹಯೋಗದೊಂದಿಗೆ ಭಾನುವಾರ ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ಆಯೋಜಿಸಿದ್ದ ವಿಶೇಷ ವೈದ್ಯಕೀಯ ಶಿಬಿರವು ಯಶಸ್ವಿಯಾಗಿ ನೆರವೇರಿತು.

ಶಿಬಿರವನ್ನು ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಖ್ಯಾತ ಎಲುಬು ಮತ್ತು ಕೀಲು ತಜ್ಞ ಡಾ. ವಿಕ್ರಂ ಶೆಟ್ಟಿ ಉದ್ಘಾಟಿಸಿ, ಮಾತನಾಡಿದರು. "ಕೆ.ಎಸ್. ಹೆಗ್ಡೆ ಆಸ್ಪತ್ರೆ 1200 ಹಾಸಿಗೆಯ ಬೃಹತ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಿದ್ದು, ಕಡಿಮೆ ದರದಲ್ಲಿ ಅತ್ಯಾಧುನಿಕ ಚಿಕಿತ್ಸೆ ಲಭ್ಯವಿದೆ. ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಅನುಕೂಲವಾಗಲು ವೈದ್ಯಕೀಯ ಶಿಬಿರಗಳು ನಿರಂತರವಾಗಿ ನಡೆಸಲಾಗುತ್ತಿವೆ. ಈ ಶಿಬಿರವು ಭಟ್ಕಳದ ಜನತೆಗೆ ಬಹುಮುಖ್ಯ ಸೇವೆಯಾಗಿದೆ," ಎಂದು ಅವರು ಅಭಿಪ್ರಾಯಪಟ್ಟರು.

ಸರಕಾರಿ ಆಸ್ಪತ್ರೆಯ ಪಿಜಿಷಿಯನ್ ಡಾ. ಲಕ್ಷ್ಮೀಶ ನಾಯ್ಕ ಮಾತನಾಡಿ, "ಮಂಗಳೂರಿನ ಪ್ರತಿಷ್ಠಿತ ಕೆ.ಎಸ್. ಹೆಗ್ಡೆ ಆಸ್ಪತ್ರೆ ತಜ್ಞ ವೈದ್ಯರು ಭಟ್ಕಳದಲ್ಲಿ ಶಿಬಿರ ಆಯೋಜಿಸಿರುವುದು ಇಲ್ಲಿ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಿದೆ," ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದ ವೇಳೆ ಡಾ. ವಿಕ್ರಂ ಶೆಟ್ಟಿ ಮತ್ತು ಡಾ. ಲಕ್ಷ್ಮೀಶ ನಾಯ್ಕರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ಟ, ಅಧ್ಯಕ್ಷ ರಾಘವೇಂದ್ರ ಹೆಬ್ಬಾರ, ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ, ಉಪಾಧ್ಯಕ್ಷ ವಿಷ್ಣು ದೇವಡಿಗ, ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ದೀಪಕ ನಾಯ್ಕ, ಪ್ರಧಾನ ಕಾರ್ಯದರ್ಶಿ ಪಾಂಡುರಂಗ ನಾಯ್ಕ ಮತ್ತು ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಜೈಸನ್ ಉಪಸ್ಥಿತರಿದ್ದರು.

ಸಭೆಯ ಸ್ವಾಗತ ಮತ್ತು ನಿರೂಪಣೆಯನ್ನು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಖಜಾಂಚಿ ಮೋಹನ ನಾಯ್ಕ ನಿರ್ವಹಿಸಿದರು. ಶಿಬಿರದಲ್ಲಿ 200ಕ್ಕೂ ಅಧಿಕ ಜನರು ಭಾಗವಹಿಸಿ, ತಜ್ಞ ವೈದ್ಯರಿಂದ ಪ್ರಯೋಜನ ಪಡೆದುಕೊಂಡರು.


Share: