ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಹೈದರಾಬಾದ್: ಗಣಿಧಣಿಗಳ ಅಕ್ರಮ ಗಣಿಗಾರಿಕೆ ? - ಸಿಬಿಐ ತನಿಖೆಗೆ ಆಂಧ್ರಪ್ರದೇಶ ಸರ್ಕಾರ ನಿರ್ಧಾರ

ಹೈದರಾಬಾದ್: ಗಣಿಧಣಿಗಳ ಅಕ್ರಮ ಗಣಿಗಾರಿಕೆ ? - ಸಿಬಿಐ ತನಿಖೆಗೆ ಆಂಧ್ರಪ್ರದೇಶ ಸರ್ಕಾರ ನಿರ್ಧಾರ

Wed, 18 Nov 2009 02:51:00  Office Staff   S.O. News Service
ಬೆಂಗಳೂರು/ಹೈದ್ರಾಬಾದ್,ನ.೧೭: ಕರ್ನಾಟಕದ ರಾಜಕಾರಣದಲ್ಲಿ ಮೇಲುಗೈ ಸಾಧಿಸಿ ದೊರೆಯಂತೆ ಹೆಮ್ಮೆಯಿಂದ ಇದ್ದ ಬಳ್ಳಾರಿ ಗಣಿ ಧಣಿಗಳಿಗೆ ತಾವು ವ್ಯವಹಾರ ನಡೆಸುವ ನೆರೆಯ ಆಂಧ್ರಪ್ರದೇಶದಲ್ಲೇ ಬರೆ ಬಿದ್ದಿದೆ. 

ಇತ್ತೀಚಿನ ಕೆಲವು ದಿನಗಳಿಂದ ಆಂಧ್ರ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿರುವ ಕರ್ನಾಟಕದ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ (ಓ‌ಎಂಸಿ) ನಡೆಸುತ್ತಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಬಗ್ಗೆ ಸಿಬಿ‌ಐ ತನಿಖೆ ನಡೆಸಲು ಅಲ್ಲಿನ ಸರ್ಕಾರ ತೀರ್ಮಾನಿಸಿದೆ. 

ಆದರೆ ಸಿಬಿ‌ಐ ತನಿಖೆಗೆ ವಹಿಸುವ ನಿರ್ಧಾರದ ಬೆನ್ನಲ್ಲೇ ಬೆಂಗಳೂರಿನಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಜನಾರ್ದನರೆಡ್ಡಿ, ಆಂಧ್ರ ಸರ್ಕಾರದ ನಿಲವನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. 
ಆಂಧ್ರದ ಮುಖ್ಯಮಂತ್ರಿ ಕೆ.ರೋಸಯ್ಯ ಮಂಗಳವಾರ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆಯುವ ಮೂಲಕ ಜನಾರ್ದನರೆಡ್ಡಿ ಅವರ ವ್ಯವಹಾರದ ಮೇಲೆ ಬರೆ ಎಳೆದಿದ್ದಾರೆ. ಆದರೆ, ಇದರಿಂದ ತೃಪ್ತವಾಗದ ತೆಲುಗುದೇಶಂ ಪಕ್ಷ ತನಿಖೆ ಪೂರ್ಣಗೊಳ್ಳುವವರೆಗೆ ಓ‌ಎಂಸಿಯ ಗಣಿಗಾರಿಕೆಯನ್ನು ಸ್ಥಗಿತಗೊಳಿಸಬೇಕು ಎಂಬ ಆಗ್ರಹವನ್ನು ಮುಂದಿಟ್ಟಿದೆ. 
 
ರಾಜ್ಯ ರಾಜಕಾರಣದಲ್ಲಿ ಮೇಲುಗೈ ಸಾಧಿಸುವತ್ತ ಹೆಜ್ಜೆ ಇಟ್ಟಿದ್ದ ಜನಾರ್ದನರೆಡ್ಡಿ ಅವರಿಗೆ ಈ ಬೆಳವಣಿಗೆ ಅವರದೇ ಬಿಜೆಪಿ ಪಕ್ಷದಲ್ಲಿನ ವಿರೋಧಿಗಳು ಹಾಗೂ ಪ್ರತಿಪಕ್ಷಗಳ ಮುಖಂಡರಿಗೆ ಪ್ರಬಲವಾದ ಅಸ್ತ್ರ ಒದಗಿಸಿದಂತಾಗಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆಯೂ ಜನಾರ್ದನರೆಡ್ಡಿ ಅವರನ್ನು ಒತ್ತಾಯಿಸಿದೆ. 
 
ರಾಜೀನಾಮೆಯ ಬೇಡಿಕೆಯನ್ನು ಬಲವಾಗಿ ಅಲ್ಲಗಳೆದಿರುವ ಜನಾರ್ದನರೆಡ್ಡಿ, ‘ನನ್ನ ಕಂಪನಿಯ ವ್ಯವಹಾರ ಶೇ.೧೦೦ ರಷ್ಟು ಸರಿಯಾಗಿದೆ. ಸಿಬಿ‌ಐ ತನಿಖೆ ನಂತರ ನಾನು ಪರಿಶುದ್ಧನಾಗಿ ಹೊರಹೊಮ್ಮುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ನಾನೇಕೆ ರಾಜೀನಾಮೆ ನೀಡಬೇಕು’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. 
 
ಅಲ್ಲದೆ, ‘ತೆಲುಗುದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು ನನ್ನನ್ನು ಅಡ್ಡವಿಟ್ಟುಕೊಂಡು ಜಗನ್‌ಮೋಹನ್ ರೆಡ್ಡಿ ಅವರನ್ನು ಗುರಿ ಮಾಡುತ್ತಿದ್ದಾರೆ. ಪ್ರತಿಪಕ್ಷಗಳ ಒತ್ತಾಯಕ್ಕೆ ಕಟ್ಟುಬಿದ್ದು ರೋಸಯ್ಯ ಅವರು ತನಿಖೆಗೆ ನಿರ್ಧರಿಸಿದ್ದಾರೆ’ ಎಂದೂ ಅವರು ಹರಿಹಾಯ್ದಿದ್ದಾರೆ. 
 
ತನಿಖೆಯನ್ನು ಸ್ವಾಗತಿಸಿರುವುದು ಕೇವಲ ಮಾತುಗಳಲ್ಲಿ ಮಾತ್ರ. ಸಿಬಿ‌ಐಗೆ ವಹಿಸಿರುವ ಕ್ರಮದಿಂದ ರೆಡ್ಡಿ ಆತಂಕಕ್ಕೆ ಒಳಗಾಗಿದ್ದರೂ ಅದನ್ನು ತೋರಿಸಿಕೊಳ್ಳುತ್ತಿಲ್ಲ ಎಂಬುದು ಅವರ ಸಮೀಪವರ್ತಿಗಳ ಅನಿಸಿಕೆ. 
 
ಆಂಧ್ರದ ದಿವಂಗತ ಮುಖ್ಯಮಂತ್ರಿ ವೈ.ಎಸ್.ರಾಜಶೇಖರರೆಡ್ಡಿ ಪುತ್ರ ಜಗನ್‌ಮೋಹನ್ ರೆಡ್ಡಿ ಮಟ್ಟ ಹಾಕುವ ಉದ್ದೇಶದಿಂದ ಜನಾರ್ದನರೆಡ್ಡಿಯನ್ನು ದಾಳವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಹೆಚ್ಚೂ ಕಡಮೆಯಾಗಿ ಕಾಂಗ್ರೆಸ್ ಹೈಕಮಾಂಡ್ ಕಠಿಣ ನಿರ್ಧಾರ ತೆಗೆದುಕೊಂಡಲ್ಲಿ ಜನಾರ್ದನರೆಡ್ಡಿ ಅವರ ವ್ಯವಹಾರಕ್ಕೆ ಕತ್ತರಿ ಬೀಳಬಹುದು ಎನ್ನಲಾಗಿದೆ. 
ಕುತೂಹಲದ ಸಂಗತಿ ಎಂದರೆ, ಆಂಧ್ರ ಸರ್ಕಾರ ಸಿಬಿ‌ಐ ತನಿಖೆ ಕೋರಿ ಕೇಂದ್ರಕ್ಕೆ ಬರೆದಿರುವ ಪತ್ರದಲ್ಲಿ ಎಲ್ಲೂ ಜರ್ನಾದನರೆಡ್ಡಿ ಅಥವಾ ಓಬಳಾಪುರಂ ಮೈನಿಂಗ್ ಕಂಪನಿಯ ಹೆಸರನ್ನು ಉಲ್ಲೇಖಿಸಿಲ್ಲ. ಬದಲಾಗಿ ‘ಅನಂತಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ’ ಎಂದಷ್ಟೇ ಉಲ್ಲೇಖಿಸಲಾಗಿದೆ. ಆದರೆ ಅನಂತಪುರ ಜಿಲ್ಲೆಯ ಗಣಿಗಾರಿಕೆಯಲ್ಲಿ ಜರ್ನಾದನರೆಡ್ಡಿಯದ್ದೇ ದೊಡ್ಡ ಪಾಲು. ಹಾಗಾಗಿ ಆಂಧ್ರ ಸರ್ಕಾರದ ಈ ಹೆಜ್ಜೆ ರೆಡ್ಡಿಯನ್ನೇ ಗುರಿಯಾಗಿಸಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. 
ಅನಂತಪುರ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಯಲ್ಲಿ ತೊಡಗಿರುವ ಜನಾರ್ದನ ರೆಡ್ಡಿಯ ಓಬಳಾಪುರಂ ಮೈನಿಂಗ್ ಕಂಪನಿ ಅರಣ್ಯ ಒತ್ತುವರಿ, ಖಾಸಗಿ ಭೂಮಿಗಳ ಒತ್ತುವರಿ ಸೇರಿದಂತೆ ಹಲವು ಅಕ್ರಮ ಎಸಗುತ್ತಿದೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಆಂಧ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. 
ಈ ಓಬಳಾಪುರಂ ಮೈನಿಂಗ್ ಕಂಪನಿಯಲ್ಲಿ ಕಂದಾಯ ಸಚಿವ ಕರುಣಾಕರರೆಡ್ಡಿ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ನಿರ್ದೇಶಕರಾಗಿದ್ದಾರೆ. 
 
2006ರಿಂದ ವಿವಾದ ಆರಂಭ:ಕರ್ನಾಟಕದಲ್ಲಿ ಇತ್ತೀಚಿನ ಬಿಜೆಪಿ ಭಿನ್ನಮತ ಬೆಳವಣಿಗೆಯಲ್ಲಿ ಸಾಕಷ್ಟು ಮುನ್ನಡೆ ಸಾಧಿಸಿದ್ದ ರೆಡ್ಡಿ ಸಹೋದರರಿಗೆ ಈ ಗಣಿ-ಸಿಬಿ‌ಐ ಬೆಳವಣಿಗೆ ತೀವ್ರ ಹಿನ್ನೆಡೆ ಉಂಟು ಮಾಡಿದೆ. 
 
ರೆಡ್ಡಿ ಸಹೋದರರು ಕರ್ನಾಟಕದ ರಾಜಕಾರಣದಲ್ಲಿ ಈ ಪ್ರಮಾಣದಲ್ಲಿ ಮಿಂಚಲು ಅವರ ಅಪಾರ ಆರ್ಥಿಕ ಸಂಪತ್ತು ಕಾರಣ. ಆ ಸಂಪತ್ತಿನ ಮೂಲವೇ ಈ ಓಬಳಾಪುರಂ ಮೈನಿಂಗ್ ಕಂಪನಿ. ಇದೀಗ ಆ ಮೂಲಕ್ಕೇ ಆಂಧ್ರ ಸರ್ಕಾರ ಕೈಹಾಕಿದೆ. 
 
ಈ ಮೊದಲು ೨೦೦೬ರಿಂದಲೇ ಓ‌ಎಂಸಿ ಕೇವಲ ಕರ್ನಾಟಕದ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಅಂದಿನ ಜೆಡಿ‌ಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಜನಾರ್ದನರೆಡ್ಡಿ ೧೫೦ ಕೋಟಿ ರುಪಾಯಿ ಆರೋಪ ಹೊರಿಸಿದ ನಂತರ ಓ‌ಎಂಸಿ ಕಂಪನಿ ವಿವಾದಕ್ಕೆ ಒಳಗಾಯಿತು.   
  
ರಾಜ್ಯದಲ್ಲಿ ಓ‌ಎಂಸಿ ವಿರುದ್ಧ ಗಡಿ ಒತ್ತುವರಿ ಮಾಡಿಕೊಂಡಿರುವ ಆಪಾದನೆ ಕೇಳಿ ಬಂದಿದ್ದರೆ, ಆಂಧ್ರದಲ್ಲಿ ಓ‌ಎಂಸಿ ವಿರುದ್ಧ ಅಕ್ರಮ ಗಣಿಗಾರಿಕೆ, ಅತಿಕ್ರಮಣ, ರಸ್ತೆ ನಿರ್ಮಾಣ, ಕರ್ನಾಟಕದಿಂದ ಅಕ್ರಮ ಅದಿರು ಸಂಗ್ರಹಿಸಿ ಆಂಧ್ರಕ್ಕೆ ಸಾಗಿಸುವ ಆರೋಪಗಳು ಕೇಳಿಬಂದಿವೆ. 

ಟಿ ರೋಸಯ್ಯ ಭೇಟಿ ನಂತರ...:ಕಳೆದ ತಿಂಗಳು ಆಂಧ್ರ ಮುಖ್ಯಮಂತ್ರಿ ರೋಸಯ್ಯ ಅವರು ಬೆಂಗಳೂರಿಗೆ ಬಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾದ ಕೆಲದಿನಗಳಲ್ಲೇ ಜನಾರ್ದನರೆಡ್ಡಿ ಅವರ ಓ‌ಎಂಸಿ ವಿರುದ್ಧದ ಸಮರಕ್ಕೆ ಚಾಲನೆ ದೊರಕಿದ್ದು ಕಾಕತಾಳೀಯವಿರಬಹುದು. ಇತ್ತ ರಾಜ್ಯದಲ್ಲಿ ಜನಾರ್ದನರೆಡ್ಡಿ ಅವರು ಯಡಿಯೂರಪ್ಪ ವಿರುದ್ಧ ಬಂಡಾಯ ಚಟುವಟಿಕೆ ತೀವ್ರಗೊಳಿಸುತ್ತಿದ್ದಂತೆಯೇ ಅತ್ತ ಆಂಧ್ರದಲ್ಲಿ ಓ‌ಎಂಸಿ ವಿರುದ್ಧ ಕಾರ್ಯಾಚರಣೆ ಆರಂಭಗೊಂಡಿತು. ಈಗ ಆ ಕಾರ್ಯಾಚರಣೆ ಅಂತಿಮ ಘಟ್ಟಕ್ಕೆ ಬಂದು ನಿಂತಂತಾಗಿದೆ.


ಸೌಜನ್ಯ: ಕನ್ನಡಪ್ರಭ


Share: