ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ:ಅಕ್ರಮ ಮನೆ ಕೆಡವಲು ಬಂದ ಅಧಿಕಾರಿಗಳಿಗೆ ಸಾರ್ವಜನಿಕರಿಂದ ಘೇರಾವ್

ಭಟ್ಕಳ:ಅಕ್ರಮ ಮನೆ ಕೆಡವಲು ಬಂದ ಅಧಿಕಾರಿಗಳಿಗೆ ಸಾರ್ವಜನಿಕರಿಂದ ಘೇರಾವ್

Fri, 25 Dec 2009 04:27:00  Office Staff   S.O. News Service
ಭಟ್ಕಳ, ಡಿಸೆಂಬರ್ 24:ಭಟ್ಕಳ ತಾಲೂಕಿನ ಜಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮದೀನ ಕಾಲೋನಿಯಲ್ಲಿ ಅತಿಕ್ರಮವಾಗಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂಬ ದೂರಿನ ಮೆರೆಗೆ ಅತಿಕ್ರಮಣವನ್ನು ತೆರವುಗೊಳಿಸಲು ಹೋದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಾರ್ವಜನಿಕರು ಘೇರಾವು ಹಾಕಿದ ಘಟನೆ ಘಟನೆ ಬುಧವಾರ ಜರುಗಿದೆ. ಅತಿಕ್ರಮಣದಾರರನ್ನು ಖುಲ್ಲಾಪಡಿಸುವ ಕಾರ್ಯಚರಣೆಯನ್ನು ನಡೆಸಲು ಮುಂದಾದ ಅಧಿಕಾರಿಗಳು ಸಾರ್ವಜನಿಕರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ತೆರವು ಕಾರ್ಯಚರಣೆಯನ್ನು ಕೈಬಿಟ್ಟು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬರಿಗೈಯಿಂದ ಮರಳಬೇಕಾಯಿತು ಎನ್ನಲಾಗಿದೆ
 
ಜಾಲಿ ಪಂಚಾಯತ್ ವ್ಯಾತ್ಪಿಯಲ್ಲಿ ಅರಣ್ಯ ಅತಿಕ್ರಮಣ ಬಹುದಿನಗಳಿಂದಲೂ ನಡೆಯುತ್ತ ಬಂದಿದೆ ಎನ್ನಲಾಗಿದೆ. ಬುಧವಾರದಂದು ಈ ಕುರಿತು ದೂರು ಬಂದ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತಗೊಂಡ ಇಲ್ಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಸಿ. ತಾಂಡೇಲ್, ವಲಯ ಅರಣ್ಯಾಧಿಕಾರಿ ಎಮ್.ಜಿ.ನಾಯ್ಕ ಹಾಗೂ ಸಿಬ್ಬಂಧಿಗಳು ಪೋಲಿಸರ ಸಹಾಯದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದು ಈ ವಿಷಯವನ್ನು ಅರಿತ ಅಲ್ಲಿನ ನೂರಾರು ಜನ ಸ್ಥಳಿಯರು  ಅಧಿಕಾರಿಗಳನ್ನು ಹಾಗೂ ಪೋಲಿಸರನ್ನು ತಡೆದು ಪ್ರತಿಭಟನೆಯನ್ನು ನಡೆಸಿ ಆಕ್ರೋಷವನ್ನು ವ್ಯಕ್ತಪಡಿಸಿದರು ಎನ್ನಲಾಗಿದೆ. 
 
ಭಟ್ಕಳದಲ್ಲಿ ಶೇ 80 ರಷ್ಟು ಅತಿಕ್ರಮಣ ಕಟ್ಟಡಗಳಿದ್ದು ಅವುಗಳೆಲ್ಲವನ್ನು ತೆರವುಗೊಳಿಸಿ ಎಂದು ಸವಾಲು ಹಾಕಿದ ಸ್ಥಳಿಯರು ಯಾವುದೇ ಕಾರಣಕ್ಕೂ ತಾವು ಈ ಕಟ್ಟಡಗಳನ್ನು ತೆರವುಗೊಳಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಾಗ ಅಧಿಕಾರಿಗಳು ಅಲ್ಲಿಂದ ಜಾಗಖಾಲಿ ಮಾಡಿದರು ಎನ್ನಲಗಿದೆ. ಅಧಿಕಾರಿ ಹಾಗೂ ಸಾರ್ವಜನಿಕರ ಮದ್ಯ ಮಾತಿನ ಚಕಮಕಿ ನಡೆದು ಕೆಲ ಸಮಯ ವಾತವರಣದಲ್ಲಿ ಬಿಸಿ ಏರಿತ್ತು ಎನ್ನಲಾಗಿದ್ದು, ಅತಿಕ್ರಮಣದಾರರು ಈ ಮೊದಲು ಬೇರೆಯವರಿಂದ ಹಣ ಕೊಟ್ಟು ಜಾಗವನ್ನು ಖರೀದಿಸಿದ್ದು ಈಗ ಅಲ್ಲಿ ಹಲವಾರು ಮನೆಗಳು ತಲೆ ಎತ್ತಿವೆ. ಎಲ್ಲ ಮುಗಿದೆ ಮೇಲೆ ಈಗ ಬಂದು ಅತಿಕ್ರಮಣ ಜಾಗ ಇದನ್ನು ತೆರವುಗೊಳಿಸಿ ಎಂದರೆ ಇರಲಿಕ್ಕೆ ತಲೆ ಮೇಲೆ ಸೂರು ಇಲ್ಲದವರು ಎಲ್ಲಿ ಹೋಗಬೇಕೆಂಬುದು ಆಕ್ರೋಷಿತ ಜನರ ವಾದವಾಗಿದೆ. ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡುವ ಮೊದಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತಕ್ರಮವನ್ನು ಜರುಗಿಸಿದ್ದರೆ ಇಂತಹ ಪರಿಸ್ಥಿತಿ ಯಾರಿಗೂ ಬರುತ್ತಿರಲಿಲ್ಲ. ಯಾರದೋ ಒತ್ತಡಕ್ಕೆ ಒಳಗಾಗಿ ಎಕಾ‌ಏಕಿ ಈ ರೀತಿಯ ಕಾರ್ಯಚರಣೆಯನ್ನು ಕೈಗೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. 
 
ಚಿತ್ರ, ವರದಿ: ಎಮ್ಮಾರ್ ಮಾನ್ವಿ, ಭಟ್ಕಳ


Share: