ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬಳ್ಳಾರಿ: ಗಣಿಧಣಿಗಳಿಗೆ ಜೀವದಾನ ನೀಡಿದ ನ್ಯಾಯಾಲಯ

ಬಳ್ಳಾರಿ: ಗಣಿಧಣಿಗಳಿಗೆ ಜೀವದಾನ ನೀಡಿದ ನ್ಯಾಯಾಲಯ

Sat, 12 Dec 2009 03:15:00  Office Staff   S.O. News Service
ಬಳ್ಳಾರಿ, ಡಿಸೆಂಬರ್ ೧೧: ಸಚಿವ ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಗಣಿ ಕಂಪನಿ ಸೇರಿದಂತೆ ೬ ಗಣಿ ಕಂಪನಿಗಳ ಚಟುವಟಿಕೆ ಸ್ಥಗಿತಗೊಳಿಸಲು
ಆಂಧ್ರ ಸರಕಾರ ನ.೩೦ರಂದು ಹೊರಡಿಸಿದ್ದ ಆದೇಶಕ್ಕೆ ಆಂಧ್ರ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದ್ದು, ಓಬಳಾಪುರಂ ಗಣಿ
ಚಟುವಟಿಕೆಗಳು ಮತ್ತೆ ಆರಂಭವಾಗಿವೆ.
 
ಆಂಧ್ರ ಸರಕಾರದ ಕೋರಿಕೆಯಂತೆ ಅನಂತಪುರ ಜಿಲ್ಲೆ ವ್ಯಾಪ್ತಿಯ ೬ ಗಣಿ ಕಂಪನಿಗಳ ಅಕ್ರಮಗಳ ಬಗ್ಗೆ ಸಿಬಿ‌ಐ ಅಧಿಕಾರಿಗಳು ತನಿಖೆ ನಡೆಸುತ್ತಿರುವ ಸಂದರ್ಭದಲ್ಲೇ ಆಂಧ್ರ ಹೈಕೋರ್ಟ್ ಹೊರಡಿಸಿದ ಈ ಆದೇಶ, ರೆಡ್ಡಿ ಬಳಗಕ್ಕೆ ಜೀವದಾನ ನೀಡಿದೆ. ಕೇಂದ್ರ ಉನ್ನತಾಧಿಕಾರ ಸಮಿತಿ (ಸಿ‌ಇಸಿ) ನೀಡಿರುವ ವರದಿಯ ಅಂಶಗಳ ಬಗ್ಗೆ ಯಾವುದೇ ತಕ ರಾರು ಎತ್ತದೆ, ಕೇವಲ ಗಣಿಗಾರಿಕೆ ಸ್ಥಗಿತಗೊಳಿ ಸಲು ಆದೇಶ ನೀಡಿದ ಕ್ರಮಕ್ಕೆ ಮಾತ್ರ ತಡೆಯಾಜ್ಞೆ ನೀಡಿರುವ ಹೈಕೋರ್ಟ್ ಆದೇಶ ಗಣಿ ವಲಯದಲ್ಲಿ ಸಂಚಲನ ಮೂಡಿಸಿದೆ. ಗುರುವಾರವಷ್ಟೇ ಸಿಬಿ‌ಐ ದಾಳಿಗೊಳಗಾಗಿದ್ದ ಬಳ್ಳಾರಿಯ ಒ‌ಎಂಸಿ ಕಚೇರಿ ಮುಂದೆ ಶುಕ್ರವಾರ ಪಟಾಕಿ ಸದ್ದು ಕೇಳಿ ಬಂತು.
 
ಸಿ‌ಇಸಿ ಸೂಚನೆ,ಆಂಧ್ರ ಸರಕಾರದ ಕ್ರಮ ಪ್ರಶ್ನಿಸಿ ಓಬಳಾಪುರಂ ಕಂಪನಿ ಹೈಕೋರ್ಟ್‌ನಲ್ಲಿ ಹೂಡಿದ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನರಸಿಂಹರೆಡ್ಡಿ, ಸಿ‌ಇಸಿ ಅಧಿ
ಕಾರ ಪ್ರಶ್ನಿಸಿದ್ದಾರೆ.

ಹಿನ್ನೆಲೆ: ಸಿ‌ಇಸಿ ನೀಡಿದ ಸೂಚನೆ ಆಧರಿಸಿ ೬ ಗಣಿ ಕಂಪನಿಗಳಿಗೆ ಚಟುವಟಿಕೆ ಸ್ಥಗಿತಗೊಳಿಸುವಂತೆ ಆಂಧ್ರ ಸರಕಾರ ಆದೇಶ ನೀಡಿತ್ತು. ಈ ಕುರಿತು ಆಂಧ್ರ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸಿ‌ಇಸಿ ಸದಸ್ಯ ಎಂ.ಕೆ. ಜೀವ ರಾಜ್ಕಾ ನ.೨೩ರಂದು ಪತ್ರ ಬರೆದು, ಅದಿರು ಸಾಗಣೆ ಸಹಿತ ಗಣಿಗಾರಿಕೆಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು
ಸೂಚನೆ ನೀಡಬೇಕು ಎಂದು ತಿಳಿಸಿದ್ದರು. ಗಣಿ ಉದ್ಯಮಿ ಟಪಾಲ್ ಗಣೇಶ್ ನೀಡಿರುವ ದೂರು ಆಧರಿಸಿ ಕರ್ನಾಟಕ ಆಂಧ್ರ ಗಡಿ ಭಾಗದ ಅನಂತಪುರ ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆ ಚಟುವಟಿಕೆಗಳನ್ನು ಪರಿಶೀಲಿಸಿದ್ದ ಸಿ‌ಇಸಿ, ಗಣಿಗಾರಿಕೆ ಚಟುವಟಿಕೆಗಳ ವರದಿಯನ್ನು ಸುಪ್ರೀಂಕೋರ್ಟ್‌ಗೂ ಸಲ್ಲಿಸಿತ್ತು. ಬಳ್ಳಾರಿ ಹಾಗೂ ಆಂಧ್ರದ ಅನಂತಪುರ ಜಿಲ್ಲೆ ವ್ಯಾಪ್ತಿ ಪ್ರದೇಶದ ಬಳ್ಳಾರಿ ಕಬ್ಬಿಣದ ಅದಿರು ಕಂಪನಿ, ವೈ. ಮಹಾಬಳೇಶ್ವರಪ್ಪ ಮತ್ತು
ಮಕ್ಕಳಿಗೆ ಸೇರಿದ ಅದಿರು ಕಂಪನಿ, ಓಬಳಾಪುರಂ ಕಂಪನಿಯ ಮೂರು ಗುತ್ತಿಗೆ ಪ್ರದೇಶಗಳು, ಅನಂತಪುರ ಮೈನಿಂಗ್ ಕಾರ್ಪೊರೇಷನ್ ಕಂಪನಿಗಳು ಆಂಧ್ರ ಸರಕಾರ ಹೊರಡಿಸಿದ ಆದೇಶದಿಂದಾಗಿ ಸ್ಥಗಿತಗೊಂಡಿದ್ದವು. ಮೀಸಲು ಅರಣ್ಯ ಪ್ರದೇಶದಲ್ಲಿ ರಾಜ್ಯ ಗಡಿ ವಿಭಜನೆಗೆ ಇರಿಸಿರುವ ಗುರುತು ಕಲ್ಲುಗಳನ್ನು ನಾಶಪಡಿಸಲಾಗಿದೆ. ಗಡಿ ಗುರುತಿಗೆ ಪ್ರಮುಖ ಸಾಕ್ಷಿಯಾಗಿದ್ದ ಸುಗ್ಗಲಮ್ಮನ ದೇವಸ್ಥಾನ ನಾಶಪಡಿಸಿ ಗಣಿ ಗಡಿಯನ್ನು ಅತಿಕ್ರಮಿಸಲಾಗಿದೆ ಎಂದು ಸಮಿತಿ ವರದಿ ಯಲ್ಲಿ ಉಲ್ಲೇಖಿಸಿತ್ತು.
 
ಹೊಸಪೇಟೆ ವರದಿ: ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಮತ್ತೆ ನಾಲ್ಕು ಗಣಿ ಕಂಪನಿಗಳ ಗಣಿಗಾರಿಕೆ ಚಟುವಟಿಕೆ ನಿಲ್ಲಿಸುವಂತೆ ಭಾರತೀಯ ಗಣಿ ಪ್ರಾಧಿಕಾರ (ಐಬಿ‌ಎಂ) ಶುಕ್ರವಾರ ಶಿಫಾರಸು ಮಾಡಿದೆ. ಜೀನತ್ ಟ್ರಾನ್ಸ್‌ಪೋರ್ಟ್ ಕಂಪನಿಯ ರಾಮಘಡ ಐರನ್ ಓರ್ ಮೈನ್, ಎಸ್.ಎ. ತವಾಬ್‌ನ ಎ.ಎಸ್.ತವಾಬ್ ಐರನ್ ಓರ್ ಮೈನ್, ಮೈಸೂರು ಮಿನರಲ್ಸ್‌ನ ತಿಮ್ಮಪ್ಪನ ಗುಡಿ ಐರನ್ ಓರ್ ಮೈನ್ ಹಾಗೂ ವೀಯಮ್ ಪೈ.ಲಿ.ನ ವೆಂಕಟಾಚಲ ಐರನ ಓರ್ ಮೈನ್ ಅಕ್ರಮ ಗಣಿಗಾರಿಕೆ ನಡೆಸಿವೆ ಎಂದು ಐಬಿ‌ಎಂ ಅಧಿಕಾರಿ ಎ.ಬಿ.ಪಾಣಿಗ್ರಹಿ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಮುಂದೇನು? ಕೇಂದ್ರ ಉನ್ನತಾಧಿಕಾರ ಸಮಿತಿಯ ಅಧಿಕಾರ ವ್ಯಾಪ್ತಿಯ ಕುರಿತು ಸುಪ್ರೀಂಕೋರ್ಟ್ ಅಭಿಪ್ರಾಯ ಏನಿರಬಹುದು ಎಂಬುದು ಚರ್ಚೆಗೆ ವಸ್ತುವಾಗಿದ್ದು, ಸುಪ್ರೀಂ ತೀರ್ಪಿನ ಬಗ್ಗೆ ಎದುರು ನೋಡುವಂತಾಗಿದೆ. ಆಂಧ್ರ ಹೈಕೋರ್ಟ್ ನೀಡಿರುವ ತೀರ್ಪು ಕೇವಲ ಮಧ್ಯಂತರ ಆದೇಶವಾಗಿದ್ದು, ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದರೆ ಮತ್ತೆ ಗಣಿಚಟುವಟಿಕೆಗಳು ಸ್ಥಗಿತಗೊಳ್ಳು ಸಾಧ್ಯತೆಗಳೇ ಹೆಚ್ಚಿವೆ ಎಂದೂ ಹೇಳಲಾಗುತ್ತಿದೆ. ಹಾಗಾಗಿ ಸುಪ್ರಿಂಕೋರ್ಟ್ ತಡೆಯಾಜ್ಞೆ ಬರುವ ಮುಂಚೆ ಎಷ್ಟು ಸಾಧ್ಯವೋ ಅಷ್ಟು ಗಣಿಗಾರಿಕೆ ಮತ್ತು ಅದಿರು ಸಾಗಣೆಯನ್ನು ಪೂರ್ಣಗೊಳಿಸುವ ತರಾತುರಿ ಓಬಳಾಪುರಂ ಕಂಪನಿಗೆ ಇದೆ. ಆಂಧ್ರ ಹೈಕೋರ್ಟ್ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಅವಸರದಲ್ಲೇ ಗಣಿಗಾರಿಕೆ ಚಟುವಟಿಕೆಗಳನ್ನು ಆರಂಭಿಸಿದ ಓಬಳಾಪುರಂ ಕಂಪನಿಯ ಸಂಭ್ರಮ ತಾತ್ಕಾಲಿಕವಾದದ್ದು. ಆದರೆ ನಂತರವೂ ರೆಡ್ಡಿ ಬಳಗ ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಮೂಲಗಳಿಂದ ಪ್ರಯತ್ನ
ಆರಂಭಿಸಲಿದೆ.

ಓಬಳಾಪುರಂ ಸೇರಿ ಹಲವು ಗಣಿ ಕಂಪನಿಗಳ ಕಚೇರಿಗಳ ಮೇಲೆ ಸಿಬಿ‌ಐ ದಾಳಿ ನಡೆಸಿದ ಸಂದರ್ಭದಲ್ಲಿ ಆಂಧ್ರ ಸರಕಾರ ಹೊರಡಿಸಿದ ಈ ಆದೇಶ ಗಣಿ ರೆಡ್ಡಿಗಳಿಗೆ ಮರುಭೂಮಿಯಲ್ಲಿ ನೀರು ದೊರಕಿದ ಅನುಭವ ನೀಡಿದೆ.

ಸೌಜನ್ಯ: ವಿಜಯ ಕರ್ನಾಟಕ


Share: