ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಉತ್ತರಕ್ನಡದಲ್ಲಿಯೂ ಬಿಜೆಪಿ ವಿರುದ್ಧ ಕಾಂಗ್ರೆಸ್ ಜಯಭೇರಿ: ಐವಾನ್

ಭಟ್ಕಳ: ಉತ್ತರಕ್ನಡದಲ್ಲಿಯೂ ಬಿಜೆಪಿ ವಿರುದ್ಧ ಕಾಂಗ್ರೆಸ್ ಜಯಭೇರಿ: ಐವಾನ್

Sat, 04 May 2024 23:30:06  Office Staff   S O News

ಭಟ್ಕಳ: ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷ ಜಿದ್ದಾ ಜಿದ್ದಿನ ಹೋರಾಟ ನಡೆಸುತ್ತಿದ್ದು, ಉತ್ತರಕನ್ನಡ ಜಿಲ್ಲೆಯಲ್ಲಿಯೂ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಐವಾನ್ ಡಿಸೋಜಾ ಹೇಳಿದ್ದಾರೆ.

ಅವರು ಗುರುವಾರ ಭಟ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ದಕ್ಷಿಣ ಕನ್ನಡ, ಉಡುಪಿಯಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ಧವಾಗಿದ್ದು, ಉತ್ತರಕನ್ನಡ ಜಿಲ್ಲೆಯಲ್ಲಿ ವಿವೇಕ ಹೆಬ್ಬಾರ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆಯೊಂದಿಗೆ ಪಕ್ಷಕ್ಕೆ ಹೆಚ್ಚಿನ ಬಲ ತಂದು ಕೊಟ್ಟಿದ್ದಾರೆ. ಬಿಜೆಪಿ ಈ ಹಿಂದೆ ಜಾತಿ, ಧರ್ಮದ ಆಧಾರದಲ್ಲಿ ಚುನಾವಣೆ ನಡೆಸುತ್ತ ಬಂದಿದ್ದು, ಜನರಿಗೆ ಇದು ಅರ್ಥವಾಗಿರುವುದರಿಂದ ಈ ಬಾರಿ ಚುನಾವಣೆ ಅಭಿವೃದ್ಧಿಯ ಆಧಾರದಲ್ಲಿ ನಡೆಯುತ್ತಿದೆ. ಉತ್ತರಕನ್ನಡ ಜಿಲ್ಲೆಗೆ ಕೇಂದ್ರ ಸರಕಾರ ಯಾವುದೇ ಮಹತ್ವದ ಯೋಜನೆಯನ್ನು ನೀಡಿಲ್ಲ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಬಗ್ಗೆಯೂ ನಿರ್ಲಕ್ಷ್ಯ ವಹಿಸಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶ ಇದ್ದರೂ ಯಾವುದೇ ನೆರವು ನೀಡಿಲ್ಲ. ಅಭಿವೃದ್ಧಿಯ ಬಗ್ಗೆ ಚರ್ಚೆಗೆ ಕರೆದರೆ ಯಾವೊಬ್ಬ ಬಿಜೆಪಿ ನಾಯಕರೂ ಮುಂದೆ ಬರುವ ಧೈರ್ಯ ತೋರುತ್ತಿಲ್ಲ. ಈ ಭಾಗದ ಸಂಸದರಿಗೆ ಬಳಿ ಜನರ ಪ್ರಶ್ನೆಗಳಿಗೆ ಉತ್ತರ ಇಲ್ಲ. ಕೋಮುಗಲಭೆ ಸೃಷ್ಟಿಸಿ ನಡೆಸುವ ರಾಜಕಾರಣಕ್ಕೆ ಈ ಬಾರಿ ಜನರು ಫುಲ್‍ಸ್ಟಾಪ್ ಹಾಕಲಿದ್ದಾರೆ. ಜನರ ಬದುಕನ್ನು ಹಸನಗೊಳಿಸುವ ಉದ್ದೇಶದೊಂದಿಗೆ ಇಂಡಿಯಾ ಒಕ್ಕೂಟ ರಚಿಸಲಾಗಿದ್ದು, ಜನರ ನಾಡಿಮಿಡಿತ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟದ ಪರ ವಾಲಿದೆ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪಿವೆ. ಸೋಲಿನ ಹತಾಸೆಯಿಂದ ಪ್ರಧಾನ ಮಂತ್ರಿಗಳು ತಮ್ಮ ಹುದ್ದೆಯ ಘನತೆಯನ್ನು ಮರೆತು ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಹೇಳಿಕೆಯನ್ನು ನೀಡಲು ಆರಂಭಿಸಿದ್ದಾರೆ ಎಂದರು.

 ಪ್ರಜ್ವಲ್‍ಗೆ ಟಿಕೇಟ್ ನೀಡಿದ್ದು ಏಕೆ?:
ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ವಿಷಯ ಕಳೆದ ಕೆಲ ತಿಂಗಳುಗಳ ಹಿಂದಿನಿಂದ ಚರ್ಚೆಯಲ್ಲಿದ್ದರೂ ಆತನಿಗೆ ಜನರು ಟಿಕೇಟ್ ನೀಡಿದ್ದಾದರೂ ಏಕೆ ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಐವಾನ್ ಡಿಸೋಜಾ ಪ್ರಶ್ನಿಸಿದ್ದಾರೆ. ಪೆನ್‍ಡ್ರೈವ್ ಹಂಚಿಕೆ ವಿಷಯದಲ್ಲಿ ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ ಹೆಸರು ಪ್ರಸ್ತಾಪಿಸುತ್ತಿರುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಅಬ್ಬಾಸ್ ತೋನ್ಸೆ, ಇಮ್ರಾನ್ ಮಂಗಳೂರು, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ರಾಮಾ ಮೊಗೇರ, ಸುರೇಶ ನಾಯ್ಕ ಮೂಡಭಟ್ಕಳ, ರಮೇಶ ನಾಯ್ಕ, ನಾರಾಯಣ ನಾಯ್ಕ ಯಲ್ವಡಿಕವೂರು, ದುರ್ಗಾದಾಸ ಮೊಗೇರ ಮೊದಲಾದವರು ಉಪಸ್ಥಿತರಿದ್ದರು. 


Share: