ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಚಿಕ್ಕಮಗಳೂರು: ಆಡಳಿತಾರೂಢರಿಂದ ಅಕ್ರಮ ಸಾಧ್ಯತೆ : ಬಿ.ಎಲ್. ಶಂಕರ್

ಚಿಕ್ಕಮಗಳೂರು: ಆಡಳಿತಾರೂಢರಿಂದ ಅಕ್ರಮ ಸಾಧ್ಯತೆ : ಬಿ.ಎಲ್. ಶಂಕರ್

Fri, 18 Dec 2009 04:44:00  Office Staff   S.O. News Service
ಚಿಕ್ಕಮಗಳೂರು , ಡಿಸೆಂಬರ್ 17: ಶುಕ್ರವಾರ ನಡೆಯಲಿರುವ ಮೇಲ್ಮನೆ ಚುನಾವಣೆಯಲ್ಲಿ  ಆಡಳಿತ ರೂಢರು ಅಕ್ರಮ ಎಸಗುವ ಸಾಧ್ಯತೆಗಳು ಬಹುತೇಕ ನಿಚ್ಚಳವಾಗಿದ್ದು, ಪಕ್ಷದ ಕಾರ್ಯಕರ್ತರು ಅಂತಹ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಎಚ್ಚರಿಕೆಯಿಂದ ಇರಬೇಕು ಎಂದು ಮಾಜಿ ಸಂಸದ ಬಿ.ಎಲ್. ಶಂಕರ್ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. 

ಗುರುವಾರ ಅವರು ತರೀಕೆರೆಯ ಓಲ್ಡ್ ಟೌನ್ ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಸರಕಾರದ ದುರಾಡಳಿತದ ವಿರುದ್ಧ ಮತ ನೀಡುವ ಮೂಲಕ ಆತ್ಮ ಗೌರವ ಹೆಚ್ಚಿಸಿಕೊಳ್ಳಬೇಕು ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯುವ ಜನರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು. 
 
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ ಜೆಡಿ‌ಎಸ್ ಮುಖಂಡ ಎಸ್.ಎಲ್. ಬೋಜೇಗೌಡ ಮಾಜಿ ಕಾಂಗ್ರೆಸ್ ಅಧ್ಯಕ್ಷ ಕೆ.ಬಿ. ಮಲ್ಲಿಕಾರ್ಜುನ, ಟಿ.ವಿ. ಶಿವಶಂಕರಪ್ಪ, ಮಾಜಿ ಶಾಸಕ ಬಿ.ಆರ್. ನೀಲಕಂಠಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ಮಂಜುನಾಥ್, ಎನ್. ರಾಜು, ವರ್ಮ ಪ್ರಕಾಶ್ ಉಪಸ್ಥಿತರಿದ್ದರು. 
 
 
ಮಗನ ಸಾವು : ತಾಯಿ ಆತ್ಮಹತ್ಯೆ 
 
ಚಿಕ್ಕಮಗಳೂರು ಡಿ.17 : ಮಗನ ಸಾವಿನಿಂದ ಕಂಗಾಲಾದ ಆತನ ತಾಯಿಯು ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆಯು ನರಸಿಂಹರಾಜಪುರ ತಾಲ್ಲೂಕಿನ ಗುಬ್ಬಿಗಾ ಎಂಬಲ್ಲಿ ಬುಧವಾರ ನಡೆದಿದೆ. 
 
ಮೃತರನ್ನು ಯಶೋಧ (52) ಎಂದು ಗುರುತಿಸಲಾಗಿದೆ. ಇತ್ತಿಚೆಗೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಈಕೆಯ ಪುತ್ರ ಸತೀಶ್ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ತಾಯಿಯು ಆಘಾತಗೊಂಡಿದ್ದರು ಎನ್ನಲಾಗಿದೆ. ಅವರು ತಮ್ಮ ಜಮೀನಿಗೆ ಸಿಂಪಡಿಸಲು ತಂದಿಟ್ಟಿದ್ದ ವಿಷವನ್ನು ಸೇವಿಸಿದ್ದರಿಂದ ಕೂಡಲೇ ಸ್ಥಳೀಯರ ಸಹಕಾರದಿಂದ ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 
 
ಈ ಕುರಿತು ಕೆ. ಪ್ರಶಾಂತ್ ಎಂಬವರು ನರಸಿಂಹರಾಜಪುರ ಪೋಲಿಸ್ ಠಾಣೆಗೆ ದೂರು ನೀಡಿದ್ದು ತನಿಖೆ ನಡೆಯುತ್ತಿದೆ. 


Share: