ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಡಿಕೇರಿ: ಕೊಡಗಿನ ಕಾಫಿ ತೋಟ ಉಗ್ರನೆಲೆ?

ಮಡಿಕೇರಿ: ಕೊಡಗಿನ ಕಾಫಿ ತೋಟ ಉಗ್ರನೆಲೆ?

Sat, 05 Dec 2009 15:17:00  Office Staff   S.O. News Service
ಮಡಿಕೇರಿ, ಡಿ.4:  ಬೆಂಗಳೂರು ಸ್ಫೋಟದ ವಿಧ್ವಂಸಕರು ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲೂ ಕೆಲ ದಿನ ತಂಗಿದ್ದರು. ಕೊಡಗಿನಲ್ಲಿಯೇ ಉಗ್ರಗಾಮಿಗಳ ತರಬೇತಿ ಕೇಂದ್ರ ರೂಪಿಸಬೇಕು ಎಂಬ ಉದ್ದೇಶ ಇವರಿಗಿತ್ತು ಎಂಬ ಸ್ಫೋಟಕ ಅಂಶ ಇದೀಗ ಬೆಳಕಿಗೆ ಬಂದಿದೆ. 

ಮಾಧ್ಯಮಗಳಿಗೆ ದೊರಕಿದ ಖಚಿತ ಮೂಲಗಳ ಪ್ರಕಾರ, ಬೆಂಗಳೂರು ದಾಳಿಯಲ್ಲಿ ಪಾಲ್ಗೊಂಡಿದ್ದ ಉಗ್ರರು, ಕಳೆದ ವರ್ಷ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಾದಾಪುರ ಬಳಿಯ ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕರಂತೆ ಆಶ್ರಯ ಪಡೆದಿದ್ದರು. ಈ ಮಾಹಿತಿಯನ್ನು ಬೆಂಗಳೂರು ಪೊಲೀಸ್ ವಿಚಾರಣೆ ಸಂದರ್ಭ ಉಗ್ರರು ಬಹಿರಂಗ ಪಡಿಸಿದ್ದಾರೆ. 
ಕೊಡಗು ವಿಧ್ವಂಸಕ ಚಟುವಟಿಕೆಗಳಿಗೆ ಸೂಕ್ತ ತಾಣವಾಗಿದ್ದು, ಕಾಫಿ ತೋಟಗಳಲ್ಲಿ ಕಾರ್ಮಿಕರಂತೆ ಆಶ್ರ ಯ ಪಡೆಯುವುದು ಸುಲಭ. ದೂರ ದೂರ ಮನೆಗಳಿರುವ ಮಲೆನಾಡಿನಲ್ಲಿ ಯಾರಿಗೂ ತಮ್ಮ ಚಟುವಟಿಕೆ ಬಗ್ಗೆ ಸಂಶ ಯ ಬರುವುದು ಕಡಮೆ ಎಂಬ ಹಿನ್ನೆಲೆಯಲ್ಲಿ ಕೊಡಗಿನಲ್ಲಿಯೇ ತರಬೇತಿ ಕೇಂದ್ರವೊಂದನ್ನು ರಹಸ್ಯವಾಗಿ ಸ್ಥಾಪಿಸಿ, ಉಗ್ರರ ಚಟುವಟಿಕೆಗಳಿಗೆ ಮಾಹಿತಿ ರವಾನೆ, ವಿಧ್ವಂಸಕ ಕಾರ್ಯಗಳಿಗೆ ತರಬೇತಿ ನೀಡುವ ಉದ್ದೇಶ ಹೊಂದಿದ್ದರು. ಈ ವಿಷಯ ಪೊಲೀಸ್ ವಿಚಾರಣೆ ಸಂದರ್ಭ ತಿಳಿದುಬಂದಿದೆ ಎನ್ನಲಾಗಿದೆ.                  

ಕೊಡಗು ಜಿಲ್ಲೆಯನ್ನು ಇಂತಹ ವಿದ್ವಂಸಕ ಕೃತ್ಯಗಳಿಗೆ ಆಯ್ದುಕೊಳ್ಳಲು ಮತ್ತೊಂದು ಪ್ರಮುಖ ಕಾರಣ ಎಂದರೆ ಕೊಡಗು ಜಿಲ್ಲೆ ಕೇರಳ ರಾಜ್ಯದ ನೆರೆಯ ಜಿಲ್ಲೆಯಾಗಿರುವುದು. ಕೊಡಗಿಗೆ ಕೇರಳದಿಂದ ಸಾರಿಗೆ ಸೇರಿದಂತೆ ವ್ಯಾವಹಾರಿಕ ಸಂಬಂಧವಿದ್ದು, ಈ ಹಿನ್ನೆಲೆಯಲ್ಲೇ ಕೇರಳ ಮೂಲದ ವಿದ್ವಂಸಕರು ಕೊಡಗಿನ ನಿಕಟತೆಯನ್ನು ಇಂತಹ ದುಷ್ಕಾರ್ಯಗಳಿಗೆ ಬಳಸಿಕೊಂಡಿದ್ದಾರೆ. 
ವಿದ್ವಂಸಕರು ಕೆಲ ಕಾಲ ಆಶ್ರಯ ಪಡೆದಿದ್ದರು ಎನ್ನಲಾದ ಮಾದಾಪುರ ಬಳಿಯ ಶಾಲೆಯ ಸಮೀಪದ ಕಾಫಿ ತೋಟಕ್ಕೆ ‘ಕನ್ನಡಪ್ರಭ’ ಪ್ರತಿನಿಧಿ ಶುಕ್ರವಾರ ಭೇಟಿ ನೀಡಿದಾಗ, ತೋಟದಲ್ಲಿ ಬಿರುಸಿನ ಕಾಫಿ ಕೊಯ್ಲು ನಡೆಯುತ್ತಿತ್ತು. ಮಾದಾಪುರ- ಸುಂಟಿಕೊಪ್ಪ ನಡುವಿನ ಮುಖ್ಯ ಮಾರ್ಗದಿಂದ ಒಳಹಾದಿಯಲ್ಲಿ ಸುಮಾರು ೩ ಕಿ.ಮೀ.ಸಾಗಿದರೆ, ಸಿಗುವ ವಿಶಾಲವಾದ ಕೆರೆಯ ಬಳಿಯ ತೋಟದಲ್ಲೇ ವಿದ್ವಂಸಕರು ತಮ್ಮ ಕೇಂದ್ರ ಸ್ಥಾನ ರೂಪಿಸಲು ಸಂಚು ಹೊಂದಿದ್ದರು. ಅಂತಿಮವಾಗಿ ಕೊಡಗಿನಲ್ಲಿ ತರಬೇತಿ ಕೇಂದ್ರ ಸ್ಥಾಪಿಸುವ ಸಂದರ್ಭದಲ್ಲೇ ಬೆಂಗಳೂರು ಸ್ಪೋಟಕ್ಕೆ ಸಿದ್ಧತೆ ಸಾಗಿದ್ದ ಹಿನ್ನಲೆಯಲ್ಲಿ ಈ ಯೋಜನೆ ಕೈಬಿಡಲಾಗಿತ್ತು ಎಂದು ವಿದ್ವಂಸಕ ತಿಳಿಸಿದ್ದಾನೆ ಎಂದು ತಿಳಿದುಬಂದಿದೆ. 
 
ಹೊಸಬರ ಬಗ್ಗೆ ಮಾಹಿತಿ ಕಷ್ಟ:’ರಸ್ತೆಯಲ್ಲಿ ಜನ ಸಂಚಾರ ವಿರಳವಾದ, ರಾತ್ರಿಯಲ್ಲಂತೂ ಜನರೇ ಹೊರಬಾರದ ಮಾದಾಪುರ ಬಳಿಯ ಈ ತೋಟ ವ್ಯಾಪ್ತಿಯು ಇಂತಹ ಚಟುವಟಿಕೆಗಳಿಗೆ ಹೇಳಿ ಮಾಡಿಸಿದಂತಿದೆ. ಊರಲ್ಲದ ಊರಿನಲ್ಲಿ ಸಾಮಾನ್ಯ ಗ್ರಾಮಗಳಂತೆ ಅಂಗಡಿ ಕೂಡ ಇಲ್ಲ. ಇದರಿಂದಾಗಿ ಗ್ರಾಮಕ್ಕೆ ಹೊಸಬರು ಬಂದರೆ ಅವರ ಸುಳಿವು, ಮಾಹಿತಿ ದೊರಕುವುದೂ ಕಷ್ಟ. 
ಈ ಬಾರಿ ಕೇರಳ ಮೂಲದವರು ತಮ್ಮ ತೋಟಗಳಲ್ಲಿ ಕೆಲಸ ಮಾಡುತ್ತಿಲ್ಲ. ಮಾಡುತ್ತಿದ್ದರೂ ಕಂಡು ಹಿಡಿಯುವುದು ಕಷ್ಟ. ಕಾರ್ಮಿಕರು ಕೆಲಸಕ್ಕೆ ಸೇರುವಾಗ ನೀಡಿದ ಮಾಹಿತಿಯನ್ನು ನಂಬುವ ಅನಿವಾರ್ಯತೆ ತಮಗಿದೆ’ ಎಂದು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದವರೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.ಕೊಡಗಿನ ವಿವಿಧೆಡೆ ಇರುವ ನೂರಾರು ಹೋಂಸ್ಟೇಗಳು, ಕಾಟೇಜ್‌ಗಳು, ಹೊಟೇಲ್‌ಗಳಲ್ಲಿ ಕೂಡ ವಿದ್ವಂಸಕ ಕೃತ್ಯಗಳಲ್ಲಿ ತೊಡಗಿರುವವರು ತಂಗಬಹುದಾದ ಸುಲಭೋಪಾಯವಿದೆ. ಕಾಫಿ ತೋಟಗಳ ನಡುವೆ ಹೋಂಸ್ಟೇಗಳಲ್ಲಿ ಎಷ್ಟು ದಿನ ಬೇಕಾದರೂ ತಂಗಬಹುದಾಗಿದೆ. 
 
ಕಾಡಿನೊಳಗೆ ಹೋದರಂತೂ ಸುಳಿವೇ ಸಿಗದ ಪರಿಸ್ಥಿತಿ. ಕಾಫಿ ತೋಟಗಳಿಗೆ ವರ್ಷದ ವಿವಿಧ ದಿನಗಳೂ ಕಾರ್ಮಿಕರಾಗಿ ಸಾವಿರಾರು ಜನ ಬರುತ್ತಲೇ ಇರುತ್ತಾರೆ. ಮೊದಲೇ ಕಾರ್ಮಿಕರ ತೀವ್ರ ಕೊರತೆ ಎದುರಿಸುತ್ತಿರುವ ಈ ಜಿಲ್ಲೆಗೆ ಎಲ್ಲಿಂದ ಕಾರ್ಮಿಕರು ಬಂದರೂ ತೋಟ ಮಾಲೀಕರು ಕೆಲಸಕ್ಕೆ ನೇಮಿಸಿ ಕೊಳ್ಳುವುದಿದೆ. ಹೀಗಾಗಿ ಶ್ರೀಲಂಕಾ, ಬಿಹಾರ, ಆಂಧ್ರ, ತಮಿಳುನಾಡು, ಕೇರಳಗಳಿಂದಲೂ ಕೊಡಗಿನಲ್ಲಿ ನೂರಾರು ಜನ ಕಾರ್ಮಿಕರು ತೋಟ ಕೆಲಸ ಮಾಡುತ್ತಿದ್ದಾರೆ. 
 
ಕೊಡಗು ಜಿಲ್ಲೆಯನ್ನು ಇಂತಹ ವಿದ್ವಂಸಕ ಕೃತ್ಯಗಳಿಗೆ ಕೂಡ ತಾಣವಾಗಿ ಬಳಸಿಕೊಳ್ಳುವ ಸಾಧ್ಯತೆ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಮತ್ತಷ್ಟು ಚುರುಕಾಗ ಬೇಕಾಗಿದೆ. ‘ದಕ್ಷಿಣ ಭಾರತದ ಕಾಶ್ಮೀರ’ ನಿಜವಾದ ಅರ್ಥದಲ್ಲೂ ಕಾಶ್ಮೀರದ ಅಶಾಂತಿಯನ್ನು ಹೊಂದುವ ಮುನ್ನ ಎಚ್ಚತ್ತುಕೊಳ್ಳುವ ಅನಿವಾರ್ಯತೆ ಇದೆ. 

ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ, ಲಷ್ಕರಿ ತೋಯಿಬಾ ಮೂಲದವನೆಂಬ ಶಂಕಿತ ನಾಸಿರ್‌ನನ್ನು ಬಂಧಿಸುವ ಅನೇಕ ಅವಕಾಶ ಬೆಂಗಳೂರು ಪೊಲೀಸರಿಗೆ ಲಭಿಸಿದ್ದರೂ ಕ್ಷಣ ಮಾತ್ರದಲ್ಲಿ ಈ ಅವಕಾಶಗಳು ತಪ್ಪಿಹೋಗುತ್ತಲೇ ಬಂದವು. ಕೇರಳ ಪೊಲೀಸರು ನಾಸಿರ್‌ನ ಮೊಬೈಲ್ ಕರೆಗಳ ಮೇಲೆ ಕಣ್ಗಾವಲಿರಿಸಿ, ಆತನ ಚಲನವಲನ ತಿಳಿದುಕೊಳ್ಳುತ್ತಿತ್ತು.ಇದೇ ಸಂದರ್ಭ ಕೇರಳ ಪೊಲೀಸರು ನಾಸೀರ್ ಕರ್ನಾಟಕಕ್ಕೆ ಸಂಪರ್ಕಿಸುತ್ತಿದ್ದ ಸಫೀಕ್ ಎಂಬಾತನ ಬಗ್ಗೆಯೂ ಮಾಹಿತಿ ನೀಡಿತ್ತು ಎನ್ನಲಾಗಿದೆ.ನಾಸೀರ್ ಕೇರಳದ ಕಣ್ಣೂರುವಿನಿಂದ ಬೆಂಗಳೂರು ಮಾರ್ಗವಾಗಿ ಮಹಾರಾಷ್ಟ್ರಕ್ಕೆ ತಪ್ಪಿಸಿಕೊಂಡು ಹೋಗುವಾಗಲೂ ಕೇರಳ ಪೊಲೀಸರು ಕರ್ನಾಟಕ ಪೊಲೀಸರನ್ನು ಎಚ್ಚರಿಸಿದ್ದರು.ನಾಸೀರ್ ಮತ್ತು ಸಫೀಕ್ ಬೆಂಗಳೂರಿನ ಮೆಜೆಸ್ಟಿಕ್ ತಲುಪಿದಾಗಲೂ ಕೇರಳ ಪೊಲೀಸರು ಈ ಬಗ್ಗೆ ಕರ್ನಾಟಕ ಪೊಲೀಸರ ಗಮನ ಸೆಳೆದಿದ್ದರು. ಅಲ್ಲಿಂದಲೂ ಪರಾರಿಯಾದ ಆರೋಪಿಗಳು ಪುಣೆಯ ಸುರಕ್ಷಿತ ಪ್ರದೇಶ ತಲುಪಿದ ಬಳಿಕ ಮೊಬೈಲ್ ಬಳಕೆ ಬಿಟ್ಟದ್ದರಿಂದಾಗಿ ಅನಂತರ ಕೇರಳ ಪೊಲೀಸರಿಗೂ ಇವರಿಬ್ಬರ ಸುಳಿವು ದೊರಕಲಿಲ್ಲ.’ಮೂರು ಬಾರಿ ಕರ್ನಾಟಕ ಪೊಲೀಸರಿಗೆ ನಾಸೀರ್ ಬಗ್ಗೆ ಸುಳಿವು ನೀಡಿದ್ದೆವು. ಆದರೆ, ಅವರಿಂದ ಸೂಕ್ತ ಸ್ಪಂದನ ಬಾರದ ಹಿನ್ನಲೆಯಲ್ಲಿ ನಾಸಿರ್ ಬಂಧನವಾಗಲಿಲ್ಲ’ ಎಂದು ಕೇರಳ ಪೊಲೀಸ್ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.ಕೇರಳ ಪೊಲೀಸರು ಈ ವರ್ಷದ ಜನವರಿ ೧೯ ರಂದು ಬಾಂಬ್ ಹೊಂದಿದ್ದ ಆರೋಪದ ಮೇಲೆ ಅಬ್ದುಲ್ ಸತ್ತಾರ್ ಅಲಿಯಾಸ್ ಜೈನುದ್ದೀನ್ ಎಂಬಾತನನ್ನು ಬಂಧಿಸಿದಾಗ ಬೆಂಗಳೂರು ಬಾಂಬ್ ಬ್ಲಾಸ್ಟ್ ಸಂಚು ಸಂಪೂರ್ಣವಾಗಿ ಬಹಿರಂಗವಾಗಿತ್ತು.ಆಶ್ಟರ್ಯಕರ ಮಾಹಿತಿ ಎಂದರೆ, ಬೆಂಗಳೂರು ಬ್ಲಾಸ್ಟ್‌ಗೆ ಎರಡು ದಿನಗಳ ಮುನ್ನವೇ ನಾಸೀರ್ ಚಲನವಲನಗಳಿಂದ ಸಂಶಯಗೊಂಡ ಪೊಲೀಸರು ಬೊಮ್ಮಸಂದ್ರದ ಕೈಗಾರಿಕಾ ಬಡಾವಣೆಯಲ್ಲಿನ ಆತನ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದರು.ಆದರೆ ಆ ಸಂದರ್ಭ ನಾಸಿರ್ ಮನೆಯಲ್ಲಿರಲಿಲ್ಲ. ಮತ್ತು ಆ ಮನೆಯಲ್ಲಿ ಮಹತ್ವದ ಸುಳಿವು ಪೊಲೀಸರಿಗೆ ದೊರಕಲಿಲ್ಲ. ಬೆಂಗಳೂರು ಸ್ಫೋಟದ ಬಳಿಕ ಕೇರಳದ ಕಣ್ಣೂರಿಗೆ ತೆರಳಿ, ಅಲ್ಲಿಂದ ಮತ್ತೆ ಬೆಂಗಳೂರು ಮಾರ್ಗವಾಗಿ, ಪುಣೆಯಲ್ಲಿ ಕೆಲ ದಿನಗಳಿದ್ದ ನಾಸೀರ್, ಅಲ್ಲಿಂದಲೂ ಪರಾರಿಯಾಗಿ ಬಾಂಗ್ಲಾದಲ್ಲಿ ಆಶ್ರಯ ಪಡೆದಿದ್ದ.ಜುಲೈನಲ್ಲಿ ನಾಸೀರ್ ತನ್ನ ಸಹವರ್ತಿ ನವಾಝ್‌ಗೆ ದೂರವಾಣಿ ಕರೆ ಮಾಡಿ, ‘ಪೊಲೀಸರು ತಮ್ಮ ಹಿಂದೆ ಬಿದ್ದಿದ್ದು, ಶೀಘ್ರವೇ ಪೊಲೀಸ್ ಬಲೆಗೆ ಬೀಳಬಹುದು’ ಎಂಬ ಸಂಶಯ ವ್ಯಕ್ತಪಡಿಸಿದ್ದ. ಈ ಸಂಶಯ ನಿಜವಾಗಿ ಈಗ ಬೆಂಗಳೂರು ಬಾಂಬ್ ಬ್ಲಾಸ್ಟ್‌ನ ಪ್ರಮುಖ ಆರೋಪಿ ನಾಸೀರ್ ಸೇರಿದಂತೆ ಎಲ್ಲರೂ ಬಂಧಿತರಾಗಿದ್ದಾರೆ. ಬಾಂಬ್ ಬ್ಲಾಸ್ಟ್ ಜತೆಗೆ ಇನ್ನೂ ಅನೇಕ ಸ್ಫೋಟಕ ಅಂಶಗಳು ಬೆಳಕಿಗೆ ಬರುತ್ತಿವೆ. 

ಕಾಫಿ ತೋಟಗಳಿಗೆ ಬರುವ ಕಾರ್ಮಿಕರ ಬಗ್ಗೆ ತೀವ್ರ ನಿಗಾ ಇರಲಿ. ಕಾರ್ಮಿಕರ ಫೋಟೋ ತೆಗೆದು ಸಮೀಪದ ಪೊಲೀಸ್ ಠಾಣೆಗೆ ನೀಡುವುದು ಸೂಕ್ತ. ಕಾರ್ಮಿಕರ ಸಂಪೂರ್ಣ ಮಾಹಿತಿ ಕಲೆಹಾಕಿಟ್ಟುಕೊಳ್ಳಿ. ಹಣವನ್ನು ಕಾರ್ಮಿಕರಿಗೆ ಸಾಲದ ರೂಪದಲ್ಲಿ ನೀಡುವ ಮುನ್ನ ಕೂಲಂಕಶ ವಿಚಾರಣೆ ನಡೆಸಿ. ಕೊಂಚ ಏರುಪೇರಾದರೂ ಕಾರ್ಮಿಕರ ಸೋಗಿನಲ್ಲಿ ಬಂದಿರುವ ವ್ಯಕ್ತಿಗಳು ವಿದ್ವಂಸಕ ಕೃತ್ಯಗಳಲ್ಲಿ ತೊಡಗಿರುವವರಾಗಿರ ಬಹುದು. ಸಹಾಯ ಮಾಡಲು ಹೋಗಿ, ಅವರ ಕೊರಳಿಗೆ ಬೀಳುವ ಉರುಳಿನಲ್ಲಿ ಅನಗತ್ಯವಾಗಿ ಸಿಲುಕದಿರಿ. ಕೊಂಚ ಸಂಶಯ ಬಂದರೂ ಸರಿ ಅಂತಹವರ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿದರೆ ಉತ್ತಮ.

ಸೌಜನ್ಯ:ಅನಿಲ್ ಎಚ್.ಟಿ, ಕನ್ನಡಪ್ರಭ



Share: