ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಕಾರವಾರ: ಐಬಿ ಅಧಿಕಾರಿಗಳಿಂದ ಕೈಗಾ ಉದ್ಯೋಗಿಗಳ ವಿಚಾರಣೆ

ಕಾರವಾರ: ಐಬಿ ಅಧಿಕಾರಿಗಳಿಂದ ಕೈಗಾ ಉದ್ಯೋಗಿಗಳ ವಿಚಾರಣೆ

Tue, 01 Dec 2009 02:47:00  Office Staff   S.O. News Service
ಕಾರವಾರ/ನವದೆಹಲಿ/ಮುಂಬೈ: ಕೈಗಾ ಸ್ಥಾವರದಲ್ಲಿ ವಿಧ್ವಂಸಕ ಸಂಚು ನಡೆದಿದೆ ಎಂಬ ಶಂಕೆ ಹಿನ್ನೆಲೆಯಲ್ಲಿ ಸ್ಥಾವರದಲ್ಲಿನ ಎಲ್ಲ ಉದ್ಯೋಗಿಗಳನ್ನು ಗುಪ್ತಚರ ದಳ (ಐಬಿ), ವಿಜ್ಞಾನಿಗಳ ತನಿಖಾ ತಂಡ ಸೋಮವಾರ ವಿಚಾರಣೆ ನಡೆಸಿದೆ 
 
ಇದೇ ವೇಳೆ, ಸ್ಥಾವರದ ವಾಟರ್ ಕೂಲರ್‌ನಲ್ಲಿ ಟ್ರೀಶಿಯಂ ಸೇರಿಕೊಂಡ ಘಟನೆ ಬಗ್ಗೆ ಆತಂಕ ಬೇಡವೆಂದು ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ. 
ಮತ್ತೊಂದೆಡೆ, ಕೈಗಾದ ೧ ನೇ ಘಟಕವನ್ನು ವಾರ್ಷಿಕ ನಿರ್ವಹಣೆ ಬಳಿಕ ಕೆಲವೇ ದಿನಗಳಲ್ಲಿ ಆರಂಭಿಸಲಾಗುವುದೆಂದು ಎನ್‌ಪಿಸಿ‌ಐ‌ಎಲ್ ತಿಳಿಸಿದೆ. 

ಐ.ಬಿ., ವಿಜ್ಞಾನಿಗಳ ತಂಡದಿಂದ ತನಿಖೆ: ವಾಟರ್ ಕೂಲರ್‌ನಲ್ಲಿ ಟ್ರೀಶಿಯಂ ಮಿಶ್ರಣ ಘಟನೆಗೆ ಸಂಬಂಧಿಸಿ ಗುಪ್ತಚರ ದಳ, ಅಣು ಶಕ್ತಿ ನಿಯಂತ್ರಣ ಮಂಡಳಿಯ ವಿಜ್ಞಾನಿಗಳು ಮತ್ತು ಹಿರಿಯ ಅಧಿಕಾರಿಗಳು ಕೈಗಾ ಸ್ಥಾವರದಲ್ಲಿ ತನಿಖೆ ನಡೆಸಿದರು. ಘಟನೆ ನಡೆದ ದಿನ ಕರ್ತವ್ಯದಲ್ಲಿದ್ದ ಎಲ್ಲ ಸಿಬ್ಬಂದಿಯಿಂದಲೂ ಅವರು ಮಾಹಿತಿ ಪಡೆದರು. ಅಲ್ಲದೆ, ಸಿಬ್ಬಂದಿಯಲ್ಲಿ ವಿಕಿರಣ ಅಂಶ ಪತ್ತೆಯಾದ್ದರಿಂದ ಅಣು ಶಕ್ತಿ ನಿಯಂತ್ರಣ ಮಂಡಳಿಯೂ ತನಿಖೆ ನಡೆಸಿದೆ ಎಂದು ಸ್ಥಾವರ ನಿರ್ದೇಶಕ ಜೆ.ಪಿ.ಗುಪ್ತಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ಘಟಕದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬನ ಶರೀರದ ಮೇಲಿರುವ ಗುರುತನ್ನು ದಾಖಲಿಸುವ ವೈಜ್ಞಾನಿಕ ವ್ಯವಸ್ಥೆ ಸ್ಥಾವರದಲ್ಲಿದೆ. ಅವರ ಇತಿಹಾಸವನ್ನು ಪರಿಶೀಲಿಸಲಾಗುತ್ತದೆ.       
ಪೊಲೀಸರಿಂದಲೂ ಮಾಹಿತಿ ಪಡೆಯಲಾಗುತ್ತಿದೆ. ಬೆರಳಚ್ಚು ಹಾಗೂ ಸ್ಮಾರ್ಟ್ ಕಾರ್ಡ್ ಮೂಲಕ ಪ್ರತಿಯೊಬ್ಬನ ಗುರುತನ್ನು ದಾಖಲಿಸಲಾಗುತ್ತಿದೆ’ ಎಂದರು. 

ನಿಗಾಕ್ಕೆ ನಿರ್ಧಾರ:ಸ್ಥಾವರದಲ್ಲಿ ಗುತ್ತಿಗೆಯಲ್ಲಿರುವ ಕಾರ್ಮಿಕರನ್ನು ಹೆಜ್ಜೆ ಹೆಜ್ಜೆಗೂ ತೀವ್ರ ನಿಗಾವಹಿಸಲಾಗುತ್ತದೆ. ನ.೨೬ರ ಘಟನೆಯಿಂದಾಗಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗುವುದೆಂದರು. 
 
ಘಟನೆಯಲ್ಲಿ ಅಸ್ವಸ್ಥರಾದವರ ದೇಹದಲ್ಲಿ ಪತ್ತೆಯಾಗಿರುವ ಟ್ರೀಶಿಯಂ ಅಂಶ ೩೦ ಮಿಲಿ ಸೀವರ್ಟ್ (ಭಾರತದಲ್ಲಿ ಇದರ ಮಾನದಂಡ ೩೦ ಮಿಲಿ ಸೀವರ್ಟ್). ಕೇವಲ ಒಬ್ಬ ವ್ಯಕ್ತಿಯಲ್ಲಿ ಇದು ಕಂಡುಬಂದಿದೆ ಎಂದು ಗುಪ್ತಾ ವಿವರಿಸಿದರು. ಟ್ರೀಶಿಯಂ ಪತ್ತೆಯಾಗಿದ್ದ ವಾಟರ್ ಕೂಲರ್‌ನ್ನು ಈಗ ಲಾಕ್ ಮಾಡಲಾಗಿದೆ ಎಂದರು. ಇನ್ನೊಂದೆಡೆ ಕೈಗಾ ಸ್ಥಾವರ ಪರಿಸರದಲ್ಲಿ ವಿಕಿರಣ ಸೋರಿಕೆಯಾಗಿಲ್ಲ ಎಂದು ಗುಪ್ತಾ ಸ್ಪಷ್ಟಪಡಿಸಿದರು. 

ಭಯ ಬೇಡ-ಪಿ‌ಎಂ:ಕೈಗಾ ಘಟನೆ ಬಗ್ಗೆ ಯಾರೂ ಹೆಚ್ಚು ಚಿಂತಿಸಬೇಕಾಗಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ. ಅಲ್ಲಿ ವಿಕಿರಣ ಸೋರಿಕೆಯಾಗಿಲ್ಲ ಎಂದಿದ್ದಾರೆ. 

ಭದ್ರತೆ ಉಲ್ಲಂಘನೆ:ಕೈಗಾ ಘಟನೆ ಭದ್ರತೆಯ ಉಲ್ಲಂಘನೆಯಾಗಿರಬಹುದು. ಸ್ಥಳದ ಬಗ್ಗೆ ಅರಿವು ಹೊಂದಿರುವವರು ನ.೨೬ರ ತಡ ರಾತ್ರಿ ೩ ಮತ್ತು ಬೆಳಗ್ಗೆ ೬ರ ನಡುವೆ ಈ ಘಟನೆ ಸಂಭವಿಸಿರಬಹುದೆಂದು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಪೃಥ್ವಿರಾಜ್ ಚೌಹಾಣ್ ನವದೆಹಲಿಯಲ್ಲಿ ತಿಳಿಸಿದ್ದಾರೆ. 

ರಾಜ್ಯಸಭೆಯಲ್ಲಿ ಪ್ರಸ್ತಾಪ:ಇದೇ ವಿಚಾರ ಶೂನ್ಯ ವೇಳೆಯಲ್ಲಿ ರಾಜ್ಯಸಭೆಯಲ್ಲಿ ಪ್ರಸ್ತಾಪವಾಯಿತು. ಬಿಜೆಪಿ ಸಂಸದ ಕಲ್‌ರಾಜ್ ಮಿಶ್ರಾ ಪ್ರಸ್ತಾಪಿಸಿದರು. ಆದರೆ, ಈ ಬಗ್ಗೆ ಹೆಚ್ಚು ಚರ್ಚೆಯಾಗಲಿಲ್ಲ. 

ಶೀಘ್ರ ಆರಂಭ:ವಾರ್ಷಿಕ ನಿರ್ವಹಣೆಗಾಗಿ ಸ್ಥಗಿತಗೊಂಡಿರುವ ಕೈಗಾ ಸ್ಥಾವರದ ೧ ನೇ ಘಟಕ ಶೀಘ್ರವೇ ಪುನಾರಂಭವಾಗಲಿದೆ ಎಂದು ರಾಷ್ಟ್ರೀಯ ಅಣು ವಿದ್ಯುತ್ ನಿಗಮ (ಎನ್‌ಪಿಸಿ‌ಐ‌ಎಲ್)ದ ಮೂಲಗಳು ಮುಂಬೈನಲ್ಲಿ ತಿಳಿಸಿವೆ.

ಸೌಜನ್ಯ: ಕನ್ನಡಪ್ರಭ


Share: