ಭಟ್ಕಳ, ಅಕ್ಟೋಬರ್ 12: ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಸಂತ್ರಸ್ತರಿಗೆ ಪರಿಹಾವನ್ನು ನೀಡುವಲ್ಲಿ ಸರಕಾರಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದು ದಲಿತರಿಗೆ, ಕೆಳಜಾತಿಯವರಿಗೆ ಸರಿಯಾಗಿ ಪರಿಹಾರ ನೀಡುತ್ತಿಲ್ಲ, ಜಾತಿ ಆಧಾರದಲ್ಲಿ ಮೇಲ್ವರ್ಗದ ಜನರಿಗೆ ಮೊದಲ ಆದ್ಯತೆಯ ಮೇರೆಗೆ ಪರಿಹಾರವನ್ನು ನೀಡುತ್ತಿದ್ದು ಸರಕಾರವು ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ವಿಫಲಗೊಂಡಿದೆ ಎಂದು ಸಿ.ಪಿ.ಐ(ಎಮ್) ನ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ನಿತ್ಯಾನಂದ ಸ್ವಾಮಿ ಆರೋಪಿಸಿದ್ದಾರೆ.
ಅವರು ಸೋಮವಾರದಂದು ಭಟ್ಕಳದ ಪ್ರವಾಸಿ ಬಂಗ್ಲೆಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತ ಉತ್ತರಕರ್ನಾಟಕದಲ್ಲಿ ಸಂಭವಿಸಿದ ಭೀಕರ ಜಲಪ್ರಳಯ ಒಂದು ರಾಷ್ಟ್ರೀಯ ದುರಂತವೆಂದು ಘೋಷಿಸಿ ಕೂಡಲೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರವಾಹ ಪೀಡಿತರಿಗೆ ಗರಿಷ್ಠ ನೆರವನ್ನು ಒದಗಿಸಬೇಕೆಂದು ಆಗ್ರಹಿಸಿದರು.

ಜಲ ಪ್ರಳಯಕ್ಕೆ ಸಿಲುಕಿ ಉತ್ತರ ಕರ್ನಾಟಕದ ಜನತೆ ಸಾವುನೋವಿನಲ್ಲಿರುವಾಗ ರಾಜ್ಯದ ಮುಖ್ಯಮಂತ್ರಿಗಳು ಬಳ್ಳಾರಿಯ ಗಣಿಧಣಿಗಳಿಂದ ಬೆಳ್ಳಿ ಕಿರಿಟ ತೊಟ್ಟು ಸಂಭ್ರಮಿಸಿದ್ದು ನಾಚಿಗೇಡು ಎಂದ ಅವರು ಇವರ ಮಂತ್ರಿಮಂಡಲವು ಸಂತ್ರಸ್ತರ ನೆರವಿಗೆ ಧಾವಿಸುವುದನ್ನು ಬಿಟ್ಟು ಚಿಂತನ ಬೈಠಕ್ ನಲ್ಲಿ ಕಾಲಹರಣ ಮಾಡುತ್ತಿದ್ದರು ಎಂದು ಆರೋಪಿಸಿದರು. ಹವಮಾನ ಇಲಾಖೆಯು ರಾಜ್ಯದಲ್ಲಿ ಭಾರಿ ಮಳೆ ಮತ್ತು ನೆರೆ ಉಂಟಾಗಲಿದೆ ಎಂದು ರಾಜ್ಯ ಸರ್ಕಾರಕ್ಕೆ ಒಂದು ವಾರದ ಮುಂಚೆಯೇ ಎಚ್ಚರಿಸಿದ್ದರೂ ಅದನ್ನು ಗಣನೆಗೆ ತೆಗೆದುಕೊಳ್ಳದ ಯಡಿಯೂರಪ್ಪನವರು ದಸರಾ ಸಂಭ್ರಮದಲ್ಲಿ ತಲ್ಲೀನರಾಗಿದ್ದರು ಎಂದು ಲೇವಡಿ ಮಾಡಿದರು.
ಸಂತ್ರಸ್ತರಿಗಾಗಿ ತೆರೆಯಲಾಗಿದ್ದ ಗಂಜಿಕೇಂದ್ರಗಳು ಗಂಜಿ ಕೇಂದ್ರಗಳಾಗಿಯೆ ಉಳಿದಿದೆ, ಅಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ. ಇಲ್ಲಿ ಆಶ್ರಯ ಪಡೆದ ನಿರಾಶ್ರಿತರನ್ನು ಭಿಕ್ಷುಕರಂತೆ ಕಾಣಲಾಗುತ್ತಿದೆ, ಊಟ ಹಾಗೂ ಕುಡಿಯುವ ನೀರಿಗಾಗಿ ಜನರು ತತ್ತರಿಸುತ್ತಿದ್ದಾರೆ ಎಂದರು.

ನೆರೆಹಾವಳಿಗೆ ತುತ್ತಾಗಿ ಸಾವನ್ನಪ್ಪಿದವರ ವಾರಸುದಾರರಿಗೆ ೫ ಲಕ್ಷ ರೂ ಪರಿಹಾರವನ್ನು ನೀಡಬೇಕು, ಕುಸಿದ ಹಾಗೂ ಶಿಥಿಲಗೊಂಡ ಮನೆಗಳನ್ನು ಪುನರ್ ನಿರ್ಮಿಸಬೇಕು ಹಾಗೂ ತಲಾ ಒಂದು ಲಕ್ಷ ರೂ ಪರಿಹಾರವನ್ನು ನೀಡಬೇಕು, ಸಂತ್ರಸ್ತ ಕುಟುಂಬಕ್ಕೆ ಮುಂದಿನ ಮೂರು ತಿಂಗಳಿಗೆ ಬೇಕಾಗುವಷ್ಟು ಅಹಾರ ಧಾನ್ಯ ಹಾಗೂ ಸೀಮೆ ಎಣ್ಣೆಯನ್ನು ಉಚಿತವಾಗಿ ನೀಡಬೇಕು, ಬಳೆ ಹಾನಿ ಸಂಭವಿಸಿದ ರೈತರಿಗೆ ಎಕರೆ ಹತ್ತು ಸಾವಿರ ರೂ ಗಳಂತೆ ಪರಿಹಾರವನ್ನು ನೀಡಬೇಕು ಮತ್ತು ಅವರ ಬೆಳೆ ಸಾಲವನ್ನು ಮನ್ನಮಾಡಬೇಕು, ರಾಜ್ಯಾದ್ಯಂತ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಬೇಕು, ನಿರಂತರವಾಗಿ ಪ್ರವಾಹಕ್ಕೆ ಪೀಡಿತವಾಗುತ್ತಿರುವ ಗ್ರiಗಳನ್ನು ಸ್ಥಳಾಂತರಿಸಬೇಕು ಎಂಬುದು ಪಕ್ಷದ ಬೇಡಿಕೆಯಾಗಿದ್ದು ಸರ್ಕಾರವು ಕೂಡಲೆ ಈ ಎಲ್ಲಾ ಕ್ರಮಗಳನ್ನು ಜರುಗಿಸಬೇಕೆಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ಸುಭಾಸ್ ಕೊಪ್ಪಿಕರ್ ಮತ್ತು ಸಿ.ಆರ್. ಶಾನುಭಾಗ್ ಉಪಸ್ಥಿತರಿದ್ದರು.