ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ನೆರೆಪೀಡಿತರಿಗೆ ನೆರವಾಗಲು ಜನತೆಯಲ್ಲಿ ಸರ್ಕಾರದ ಮನವಿ

ಬೆಂಗಳೂರು: ನೆರೆಪೀಡಿತರಿಗೆ ನೆರವಾಗಲು ಜನತೆಯಲ್ಲಿ ಸರ್ಕಾರದ ಮನವಿ

Sun, 04 Oct 2009 03:16:00  Office Staff   S.O. News Service

ಬೆಂಗಳೂರು, ಅ.4: ನೆರೆ ಪೀಡಿತರ ಪುನರ್ವಸತಿಗೆ ಉದಾರವಾಗಿ ದೇಣಿಗೆ ನೀಡುವಂತೆ ರಾಜ್ಯ ಸರಕಾರ ಮನವಿ ಮಾಡಿದೆ.

ಹದಿನಾರು ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹದಿಂದ ನೂರಾರು ಜನ ಸಾವನ್ನಪ್ಪಿದ್ದು, ಒಂದುವರೆ ಲಕ್ಷಕ್ಕೂ ಅಧಿಕ ಮನೆಗಳು ಕುಸಿದು ೬ ಲಕ್ಷ ಮಂದಿ ಬೀದಿಪಾಲಾಗಿದ್ದಾರೆ. 

೫೦೦ಕ್ಕೂ ಹೆಚ್ಚು ಗ್ರಾಮಗಳು ಜಲಾವೃತ್ತವಾಗಿರುವುದರಿಂದ ಜನರು ಎಲ್ಲವನ್ನು ಕೆಳೆದುಕೊಂಡಿದ್ದಾರೆ. ಅಂತಹವರಿಗೆ ಬಟ್ಟೆಗಳು, ರಗ್ಗು, ಹೊದಿಕೆ, ಸೀರೆ ಇನ್ನಿತರ ವಸ್ತ್ರಗಳನ್ನು ನೀಡಲಿಚ್ಚಿಸುವ ಸಾರ್ವಜನಿಕರು ತಹಸೀಲ್ದಾರ್ ಕಚೇರಿ ಅಥವಾ ನಗರಸಭೆ ಪುರಸಭೆಗಳಿಗೆ ನೀಡಬಹುದು ಎಂದು ತಿಳಿಸಲಾಗಿದೆ. ಬಳಸಲು ಯೋಗ್ಯವಾಗಿರುವ ಬಟ್ಟೆಯನ್ನು ಮಾತ್ರ ನೀಡುವಂತೆ ಮನವಿ ಮಾಡಲಾಗಿದೆ. 

 

ಪರಿಹಾರ ಕಾರ್ಯಗಳಿಗೆ ಆರ್ಥಿಕ ನೆರವು ನೀಡುವವರು ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿ ಹೆಸರಿಗೆ ನಮೂದಿಸಿದ ಚೆಕ್ ಅಥವಾ ಡಿಡಿಗಳನ್ನು ಜಿಲ್ಲಾಧಿಕಾರಿಗಳಿಗೆ ಖುದ್ದಾಗಿ ಅಥವಾ ಬ್ಯಾಂಕ್‌ಗಳ ಮೂಲಕ ತಲುಪಿಸಬಹುದು. ಅಥವಾ ಕರ್ನಾಟಕ ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿ, ಮುಖ್ಯಮಂತ್ರಿ ಕಚೇರಿಸ ಕರ್ನಾಟಕ ಸರಕಾರ, ವಿಧಾನಸೌಧ ಎಂಬ ವಿಳಾಸಕ್ಕೆ ಅಂಚೆ ಮೂಲಕ ರವಾನಿಸಬಹುದು ಎಂದು ಮನವಿ ಮಾಡಲಾಗಿದೆ.

ಪರಿಹಾರ ನಿಧಿಗೆ ದೇಣಿಗೆ ನೀಡುವವರಿಗೆ ಆದಾಯ ತೆರಿಗೆ ವಿನಾಯಿತಿ ದೊರೆಯಲಿದೆ ಎಂದು ತಿಳಿಸಲಾಗಿದೆ. 

ಸರಕಾರದ ವಿರುದ್ಧ ಜನರ ಆಕ್ರೋಶ

ಬೆಂಗಳೂರು: ನೆರೆ ಸಂತ್ರಸ್ಥರ ನೆರವಿಗೆ ಧಾವಿಸದ ಸರಕಾರದ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು, ರಾಯಚೂರಿನಲ್ಲಿ ಶಾಸಕ ಮತ್ತು ಅಧಿಕಾರಿಗಳ ಮೇಲೆ ನೆರೆ ಪೀಡಿತರು ಹಲ್ಲೆ ನಡೆಸಿದ್ದಾರೆ. ಲಿಂಗಸೂರಿನ ಶಾಸಕರ ವಾಹನದ ಮೇಲೆ ಕಲ್ಲು ತೂರಲಾಗಿದೆ.

ಕಳೆದ ನಾಲ್ಕು ದಿನಗಳಿಂದ ಸುರಿದ ಭಾರೀ ಮಳೆಯಲ್ಲಿ ಸಿಲುಕ್ಕಿದ್ದವರನ್ನು ರಕ್ಷಿಸಲು ತಕ್ಷಣ ಕ್ರಮ ಕೈಗೊಳ್ಳಲಿಲ್ಲ ಎಂದು ರಾಯಚೂರಿನ ಯಲಮಾರಿ ಗ್ರಾಮದ ಜನರು ಮೂರು ದಿನಗಳಿಂದಲೂ ಆಕ್ರೋಶ ವ್ಯಕ್ತಪಡಿಸುತ್ತಲೆ ಇದ್ದರು. ಮೊದಲ ದಿನ ಗ್ರಾಮ ಸಹಾಯಕ, ನಿನ್ನೆ ಗಂಜಿ ಕೇಂದ್ರದ ಉಸ್ತುವಾರಿ ನಿರ್ವಹಿಸುತ್ತಿದ್ದ ಅಧಿಕಾರಿಯನ್ನೂ ತರಾಟೆಗೆ ತೆಗೆದುಕೊಂಡಿದ್ದರು ಎಂದು ಜಿಲ್ಲಾಧಿಕಾರಿ ಸಲೀಂ ತಿಳಿಸಿದ್ದಾರೆ.

ಸಂತ್ರಸ್ಥರಿಗೆ ಸಮಾಧಾನ ಹೇಳಲು ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ರಾಜಾ ರಾಯಪ್ಪ ನಾಯಕ ಇಂದು ಬೆಳಗ್ಗೆ ೧೦ ಗಂಟೆಗೆ ತಹಸೀಲ್ದಾರ್‌ರೊಂದಿಗೆ ಸ್ಥಳಕ್ಕೆ ತೆರಳಿದ್ದರು. ಮಾಜಿ ಸಂಸದ ವೆಂಕಟೇಶ್ ನಾಯಕ, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಸದಸ್ಯರು ಮತ್ತು ಇತರ ಜನಪ್ರತಿನಿಧಿಗಳೊಂದಿಗೆ ಅವರೊಟ್ಟಿಗಿದ್ದರು.

ನೆರೆಯಿಂದಾಗಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಐದಾರು ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಜಾನುವಾರುಗಳು ಸತ್ತಿವೆ, ಮನೆಗಳು ನೀರಿನಲ್ಲಿ ಮುಳುಗಿರುವುದರಿಂದ ಇರಲು ಜಾಗವಿಲ್ಲ. ಸರಕಾರ ತಕ್ಷಣ ಕ್ರಮ ಕೈಗೊಂಡಿದ್ದರೆ ಪ್ರಾಣ ಕೆಲವರು ಪ್ರಾಣ ಉಳಿಸಬಹುದಿತ್ತು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರ ಕೋಪವನ್ನು ಹೆದುರಿಸಲಾಗದೆ ತಂಡ ವಾಪಾಸಾಗಲು ಮುಂದಾದಗ ಆಕ್ರೋಶಗೊಂಡ ಜನರು ಶಾಸಕರನ್ನು ಹೊರಗೆಳೆದು ಹಲ್ಲೆ ನಡೆಸಿದರೆಂದು ಹೇಳಲಾಗಿದೆ. ತಹಸಿಲ್ದಾರ್‌ರ ವಾಹನ ಸೇರಿದಂತೆ ಏಳು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಸ್ಥಳೀಯರಲ್ಲೇ ಕೆಲವರು ಶಾಸಕರ ತಂಡದ ನೆರವಿಗೆ ಧಾವಿಸಿ ಉದ್ರಿಕ್ತರಿಂದ ಪಾರು ಮಾಡಿ ಮಲ್ಲಿಕಾರ್ಜುನಗೌಡ ಎಂಬವರ ಮನೆಯಲ್ಲಿ ಇರಿಸಿ ನಂತರ ಪೊಲೀಸರ ರಕ್ಷಣೆಯಲ್ಲಿ ಕಳುಹಿಸಿಕೊಟ್ಟಿದ್ದಾರೆ. ಇದಕ್ಕೂ ಮೊದಲು ಗ್ರಾಮಕ್ಕೆ ಭೇಟಿ ನೀಡಿದ್ದ ಬಿಜೆಪಿ ಮತ್ತು ಜೆಡಿ‌ಎಸ್ ಮುಖಂಡರ ವಿರುದ್ಧವೂ ಗ್ರಾಮಸ್ಥರು ಇದೇ ರೀತಿ ಹರಿಹಾಯ್ದಿದ್ದಾರೆ ಎನ್ನಲಾಗಿದೆ.

ಕೂಡಲೇ ಹೆಚ್ಚಿನ ಪೊಲೀಸರನ್ನು ಸ್ಥಳಕ್ಕೆ ರವಾನಿಸಲಾಗಿದ್ದು, ಉದ್ರಿಕ್ತರ ಮೇಲೆ ಲಘು ಲಾಠಿ ಪ್ರಹಾರ ನಡೆಸಲಾಗಿದೆ. ನೆರೆಯಿಂದ ಬೀದಿಪಾಲಾದವರ ಮೇಲೆ ಲಾಠಿ ಪ್ರಹಾರ ನಡೆಸಿದ್ದರಿಂದ ಇನ್ನಷ್ಟು ಕೋಪಗೊಂಡ ಜನ ‘ಗೋಲಿಬಾರ್ ಮಾಡಿ ಬಿಡಿ’ ಎಂದು ತಿರುಗಿಬಿದ್ದರು ಎಂದು ಪ್ರತ್ಯೇಕ್ಷದರ್ಶಿಗಳು ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ಉದ್ರಿಕ್ತರ ಮನವೊಲಿಸುವಲ್ಲಿ ಯಶಸ್ವಿಯಾದರು ಎಂದು ಹೇಳಲಾಗಿದೆ.

ಇದೇ ಜಿಲ್ಲೆಯ ಮೂರು ದಿನಗಳ ನಂತರ ಲಿಂಗಸಗೂರಿನ ಕರಡಕಲ್ಲು ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಮಾನಪ್ಪರ ಕಾರಿನ ಮೇಲೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದಾರೆ.
ಹುಬ್ಬಳ್ಳಿಯ ನವಲಗುಂದದಲ್ಲಿನ ಗಂಜಿಕೇಂದ್ರದಲ್ಲಿದ್ದವರಿಗೆ ಕಸ ಸಾಗಿಸುವ ವಾಹನದಲ್ಲಿ ಹಳಸಿದ ಅನ್ನ ಪೂರೈಸಿದ ಮೂವರು ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ.

ಗಂಜಿಕೇಂದ್ರದ ಅವ್ಯವಸ್ಥೆ ವಿರೋಧಿಸಿ ಸಂತ್ರಸ್ಥರು ಪ್ರತಿಭಟನೆ ನಡೆಸಿದರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ ಪುರಸಭೆಯ ಮುಖ್ಯಾಧಿಕಾರಿ ಕೆ.ಎನ್.ನಾಗನೂರು, ಆರೋಗ್ಯಾಧಿಕಾರಿ ಆರ್.ಪಿ.ಜಾದವ್, ಆಹಾರ ನಿರೀಕ್ಷಕ ದೊಡ್ಡಮನಿ ಅಮಾನತ್ತಾಗಿದ್ದಾರೆ.

ಇನ್ನೂ ನೂರು ಕೋಟಿ ಬಿಡುಗಡೆ

ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಸುರಿದ ಭಾರೀ ಮಳೆ ಕಡಿಮೆಯಾಗುತ್ತಿದ್ದರು ಶನಿವಾರ ಮಳೆಗೆ ಸಂಬಂಧಿಸಿದ ಅವಗಡಗಳಲ್ಲಿ ಸುಮಾರು ಒಬ್ಬತ್ತು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಮಧ್ಯೆ ರಾಜ್ಯ ಸರಕಾರ ಪರಿಹಾರ ಕಾರ್ಯಗಳಿಗಾಗಿ ಇನ್ನೂ ೧೦೦ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.

ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ಪ್ರವಾಹದಿಂದಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹ ಇನ್ನಷ್ಟು ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ. ಹದಿನಾರು ಜಿಲ್ಲೆಗಳಲಿಲ್ಲ ೧,೨೩,೫೭೯ ಮನೆಗಳು ಕುಸಿದಿದ್ದು, ೩೦೪೮ ಜಾನುವಾರುಗಳು ಸಾವನ್ನಪ್ಪಿವೆ. ಸುಮಾರು ೩೫೭ ಗ್ರಾಮಗಳು ತೊಂದರೆಗೆ ಒಳಗಾಗಿವೆ. ೮ ಹೆಲಿಕಾಫ್ಟರ್ ಮತ್ತು ೫೨ ದೋಣಿಗಳನ್ನು ಬಳಸಿ ಜನರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿಯುತ್ತಿದೆ. ಕೆಲವು ಕಡೆ ಸುರಕ್ಷಿತ ಸ್ಥಳಕ್ಕೆ ತೆರಳಲು ಒಪ್ಪದ ಜನರು ತಾವಿರಲ್ಲಿಗೆ ಆಹಾರ ಪೂರೈಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಈ ಮೊದಲು ೧೫೭ ಕೋಟಿ ರೂಪಾಯಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿತ್ತು. ನೆರೆ ಶುರುವಾದ ಆರಂಭದಲ್ಲಿ ೪೧ ಕೋಟಿ, ಎರಡು ದಿನಗಳ ಹಿಂದೆ ೧೦೫ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಇಂದು ಮತ್ತೆ ೧೦೦ ಕೋಟಿ ಒದಗಿಸಲಾಗಿದ್ದು ಒಟ್ಟು ೪೦೩ ಕೋಟಿ ರೂಪಾಯಿ ಲಭ್ಯವಿದೆ ಎಂದು ಸಚಿವ ಆಚಾರ್ಯ ತಿಳಿಸಿದ್ದಾರೆ.

ಸರಕಾರದ ಮಾಹಿತಿಯಂತೆ ಬೆಳಗಾವಿ ಜಿಲ್ಲೆಯಲ್ಲಿ ೭, ಗುಲ್ಬರ್ಗ ಜಿಲ್ಲೆಯಲ್ಲಿ ೧೯, ಬಿಜಾಪುರದಲ್ಲಿ ೩೧, ರಾಯಚೂರಿನಲ್ಲಿ ೨೪, ಬಾಗಲಕೋಟೆಯಲ್ಲಿ ೧೫, ಬೆಳ್ಳಾರಿಯಲ್ಲಿ ೧೪, ಕೊಪ್ಳದಲ್ಲಿ ೨೦, ಬೀದರ್‌ನಲ್ಲಿ ೪. ಗದಗದಲ್ಲಿ ೭, ದಾವಣಗೆರೆಯಲ್ಲಿ ೨, ಕಾರಾವರದಲ್ಲಿ ೫, ದಕ್ಷಿಣ ಕನ್ನಡದಲ್ಲಿ ಒಂದು ಸೇರಿ ಒಟ್ಟು ೧೬೯ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಾಸ್ತವಾಗಿ ಈವರೆಗಿನ ಅನಾವುತಗಳಲ್ಲಿ ಸುಮಾರು ೧೮೯ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ನೆರೆಯಿಂದ ರಸ್ತೆ, ಸೇತುವೆ ಕೊಚ್ಚಿ ಹೋಗಿದ್ದು ಬಹಳಷ್ಟು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ರಕ್ಷಣಾ ಕಾರ್ಯ ನಿರಂತರವಾಗಿದ್ದು, ಇನ್ನು ಸುಮಾರು ೨ ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಅಗತ್ಯವಿದೆ ಎಂದು ಹೇಳಲಾಗಿದೆ.

ನೀರಿನ ಮಟ್ಟ ಇಳಿದ ಮೇಲೆ ಇನ್ನಷ್ಟು ಶವಗಳು ಕಾಣಿಸಿಕೊಳ್ಳಬಹುದೆಂದು ಅಂದಾಜಿಸಲಾಗಿದ್ದು, ಇದರಿಂದಾಗಿ ಉಂಟಾಗುವ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಿದ್ಧತೆ ನಡೆಯುತ್ತಿದೆ.

ಸಂಪೂರ್ಣ ಜಲಾವೃತ್ತವಾಗಿದ್ದ ರಾಯಚೂರು ಗಡಿಭಾಗದಲ್ಲಿರುವ ಮಂತ್ರಾಲಯದಲ್ಲಿ ನೀರು ಹಿಂಗಿದ್ದು, ಹಾದಿ ಬೀದಿಯಲ್ಲಿ ಶವಗಳು ಕಾಣಸಿಗುತ್ತಿವೆ. ಸಾವನ್ನಪ್ಪಿದ ಜನ ಮತ್ತು ಜಾನುವಾರುಗಳ ಅಂತ್ಯಕ್ರಿಯೆಗೆ ಜಾಗ ದೊರೆಯದೇ ಇರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆದುರಾಗಿದೆ.

ಬೆಳಗಾವಿಯಲ್ಲಿ ಇಂದು ಗರ್ಭೀಣಿ ಮಹಿಳೆಯೊಬ್ಬರು ಸೂಕ್ತ ಸಮಯಕ್ಕೆ ವೈದ್ಯಕೀಯ ಚಿಕಿತ್ಸೆ ದೊರೆಯದೆ ಹೆರಿಗೆ ನೋವಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಸವದತ್ತಿಯಲ್ಲಿ ಒಂದುವರೆ ವರ್ಷದ ಹೆಣ್ಣು ಮಗು ಗೋಡೆ ಕುಸಿತದಿಂದ ಸಾವನ್ನಪ್ಪಿದೆ. ಇದೇ ಜಿಲ್ಲೆಯಲ್ಲಿ ಒಟ್ಟು ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ನೆರೆಯಲ್ಲಿ ಕೊಚ್ಚಿ ಹೋಗಿರುವ ಬೆಳೆ ನಷ್ಟದಿಂದ ಆಘಾತಕ್ಕೊಳಗಾಗಿ ಹುಬ್ಬಳ್ಳಿಯಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಗುರುವಿನಹಳ್ಳಿಯ ಮೂಹಮ್ಮಗ್‌ಸಾಬ್ ಗೌಸಿ ಎಂಬವರು ೧೭ ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿದ್ದು, ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದರು ಎಂದು ಹೇಳಲಾಗಿದೆ. ಮೂರು ದಿನ ಸುರಿದ ಮಳೆಯಿಂದ ಹೊರ ಬರಲಾಗದ ಅವರು ಇಂದು ಹೊಲಕ್ಕೆ ತೆರಳಿ ನೋಡಿದಾಗ ಪೂರ್ತಿ ಬೆಳೆ ಕೊಚ್ಚಿಹೋಗಿದ್ದು, ಸ್ಥಳದಲ್ಲೇ ಆಘಾತದಿಂದ ಕುಸಿದು ಪ್ರಾಣ ಬಿಟ್ಟರೆಂದು ಹೇಳಲಾಗಿದೆ.  ಹೊನ್ನಳ್ಳಿಯ ರೈತ ಮಹಿಳೆ ಚನ್ನವ್ವ ಎಂಬವರು ಬೆಳೆ ನಷ್ಟದಿಂದ ಆತಂಕಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಮದುರ್ಗದ ಚಿಕ್ಕತಡಸಿ ಗ್ರಾಮದ ನೀಲಪ್ಪ ಗೋಡೆ ಕುಸಿತದಿಂದ ಸಾವನ್ನಪ್ಪಿದ್ದು, ಕಲಘಟಗಿ ಹಿರೇಹೊನ್ನಿ ಗ್ರಾಮದ ಕೆರೆ ನೀರಿನಲ್ಲಿ ಮಂಜುನಾಥ್ ಕೊಚ್ಚಿಹೋಗಿದ್ದಾರೆ.
ಗುಲ್ಬರ್ಗದ ಯಾದಗಿರಿಯ ಸಂಕಲಾಪುರದಲ್ಲಿ ನರಸಪ್ಪ ಎಂಬವರು ಸಾವನ್ನಪ್ಪಿದ್ದು, ಭಿಮರಾಯನ ಹಳ್ಳದ ಜಲಾಶಯದಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದಾರೆ.ಕುಷ್ಠಗಿಯಲ್ಲಿ ವ್ಯಕ್ತಿಯೊಬ್ಬರು ಮನೆ ಕುಸಿತದಿಂದಾಗಿ ಮೃತರಾಗಿದ್ದಾರೆ.

ಇಂದು ಸೋನಿಯಾ ವೈಮಾನಿಕ ಸಮೀಕ್ಷೆ

ಬೆಂಗಳೂರು: ಭಾರೀ ಮಳೆಯಿಂದ ಹಾನಿಗೊಳಗಾಗಿರುವ ಬಳ್ಳಾರಿ, ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಗಳಿಗೆ ನಾಳೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಅ.೬ರಂದು ಪ್ರಧಾನಿ ಮನಮೋಹನ್ ಸಿಂಗ್ ವೈಮಾನಿಕ ಸಮೀಕ್ಷೆ ನಡೆಸಲಿದಾರೆ.

ಕೇಂದ್ರ ಗೃಹ ಸಚಿವ ಚಿದಂಬರಮ್, ಕಾನೂನು ಸಚಿವ ರಪ್ಪ ಮೊಯ್ಲಿ, ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ವೈಮಾನಿಕ ಸಮೀಕ್ಷೆ ನಡೆಸುವರು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದು, ತಾವು ಕೂಡ ಅವರೊಂದಿಗಿದ್ದು ಪರಿಸ್ಥಿತಿಯನ್ನು ವಿವರಿಸುವುದಾಗಿ ಹೇಳಿದ್ದಾರೆ.

ರಜಾ ತೆಗೆದುಕೊಳ್ಳದಿರಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ

ಬೆಂಗಳೂರು: ಅಧಿಕಾರಿಗಳು ಮತ್ತು ನೌಕರರು ಯಾವುದೇ ಕಾರಣಕ್ಕೂ ಒಂದು ತಿಂಗಳ  ಕಾಲ ರಜೆ ತೆಗೆದುಕೊಳ್ಳದೆ ಪ್ರವಾಹ ಪರಿಸ್ಥಿತಿ ನಿರ್ವಹಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ.

ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಯಿಂದ ದುಸ್ಥಿತಿ ಎದುರಾಗಿದ್ದು, ಸರಕಾರಿ ನೌಕರರು ರಜೆ ಹಾಕದೆ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ತಿಳಿಸಿದರು.

ಪರಿಹಾರ ಕಾರ್ಯಕ್ಕೆ ಈಗಾಗಲೇ ಸರಕಾರ ೩೫೦ ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಇನ್ನೂ ಹೆಚ್ಚುವರಿಯಾಗಿ ೧೦೦ ಕೋಟಿ ರೂ.ಗಳನ್ನು ಇಂದು ಬಿಡುಗಡೆ ಮಾಡಲಾಗುತ್ತಿದೆ ಎಂದ ಯಡಿಯೂರಪ್ಪ, ನೆರೆಯಿಂದ ಸೂರು ಕಳೆದುಕೊಂಡ ಜನರಿಗೆ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಇನ್ನೂ ೧೫ ದಿನಗಳೊಳಗೆ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಬೆಳೆ ಹಾನಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಸಮಗ್ರ ವರದಿ ತರಿಸಿಕೊಂಡು ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಯಡಿಯೂರಪ್ಪ, ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕಾಮಗಾರಿಯಲ್ಲಿ ಲೋಪ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಸಂಭವಿಸಿರುವ ಪ್ರವಾಹ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರಕಾರಕ್ಕೆ ನೆರವು ಕೋರಲಾಗಿದೆ. ಬರುವ ಮಂಗಳವಾರ ಪ್ರಧಾನಿ ಮನಮೋಹನ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿ ಪ್ರವಾಹ ಪೀಡಿತ ಪ್ರದೇಶಗಳನ್ನು ಅವರೇ ಖುದ್ದು ಪರಿಶೀಲಿಸಲಿದ್ದಾರೆ ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ನೆರವಿಗೆ ಧಾವಿಸಲು ಆಚಾರ್ಯ ಮನವಿ: ನೆರೆ ಪೀಡಿತ ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ಸಾರ್ವಜನಿಕರು, ಸಂಘ-ಸಂಸ್ಥೆಗಳು, ಸಮಾಜ ಸೇವಕರು ಮುಂದೆ ಬರಬೇಕು ಎಂದು ಗೃಹ ಸಚಿವ ಆಚಾರ್ಯ ಮನವಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರಕ್ಕೆ ನೆರೆ ಹಾವಳಿ ಪರಿಸ್ಥಿತಿ ನಿರೀಕ್ಷೆಗೂ ಮೀರಿದ್ದು, ಸಂತ್ರಸ್ತರಿಗೆ ಸೀರೆ, ಪಂಚೆ, ಹೊದಿಕೆ, ಮಕ್ಕಳಿಗೆ ಬಟ್ಟೆ, ಆಹಾರ ನೀಡಲು ಸಾರ್ವಜನಿಕರು ಮುಂದಾಗಬೇಕು. ನೀಡುವವರು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ನೀಡಬೇಕು ಎಂದು ಸಚಿವ ಆಚಾರ್ಯ ಕೋರಿದರು.

ಈ ಹಿಂದೆ ಬೇರೆ-ಬೇರೆ ರಾಜ್ಯಗಳಲ್ಲಿ ಸುನಾಮಿ ಮತ್ತು ಪ್ರಕೃತಿ ವಿಕೋಪಗಳು ಸಂಭವಿಸಿದ ಸಂದರ್ಭದಲ್ಲಿ ರಾಜ್ಯದ ಜನತೆ ಔದಾರ್ಯ  ಮೆರೆದಿದ್ದಾರೆ.

ರಾಜ್ಯದಲ್ಲೆ ಇಂತಹ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ನೆರವು ನೀಡುವ ಮೂಲಕ ಮಾನಯತೆ ಪ್ರದರ್ಶಿಸಬೇಕು ಎಂದು ಹೇಳಿದ ಗೃಹ ಸಚಿವ ವಿ.ಎಸ್. ಆಚಾರ್ಯ , ಪರಿಹಾರ ಕಾರ್ಯಕ್ಕೆ ಹಣ ನೀಡುವವರು ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡಬಹುದು ಎಂದು ತಿಳಿಸಿದರು. 

ಸರಕಾರ ನಿಷ್ಕಿಯಗೊಂಡಿದೆ: ಧರ್ಮಸಿಂಗ್ ಟೀಕೆ

ಬೆಂಗಳೂರು: ನೆರೆ ಸಂತ್ರಸ್ತರಿಗೆ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವಲ್ಲಿ ರಾಜ್ಯ ಸರಕಾರ ಸಂಪೂರ್ಣ ನಿಷ್ಕಿಯಗೊಂಡಿದ್ದು, ಜನರ ನೆರವಿಗೆ ಧಾವಿಸುವಲ್ಲಿ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಎನ್.ಧರ್ಮಸಿಂಗ್ ಆರೋಪಿಸಿದ್ದಾರೆ.

ಮಳೆಯ ಅಬ್ಬರದಿಂದಾಗಿ ಹಾನಿUಡಾಗಿರುವ ಬೀದರ್ ಜಿಲ್ಲೆಯಲ್ಲಿ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತೆಗೆ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡು ಊಟ, ವಸತಿ ಕಲ್ಪಿಸಬೇಕಾಗಿದ್ದ ಸಿಬ್ಬಂದಿ ಕೆಲಸ ಮಾಡುತ್ತಿಲ್ಲ. ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ದೂರಿದರು.

ಯಡಿಯೂರಪ್ಪ ನೇತೃತ್ವ ಸರಕಾರದ ಪತನದ ಕಾಲ ಸನ್ನಿಹಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಧರ್ಮಸಿಂಗ್, ರಾಜ್ಯ ಸರಕಾರ ತಕ್ಷಣವೇ ಪ್ರವಾಹ ಪೀಡಿತ ಜನರಿಗೆ ಅಗತ್ಯ ನೆರವು ನೀಡಬೇಕು ಎಂದು ಆಗ್ರಹಿಸಿದರು. 

ನೆರೆಗೆ 24 ಬಲಿ

ಬಾಗಲಕೋಟೆ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಇಂದು ಮತ್ತೆ ೮ಮಂದಿ ಸಾವನ್ನಪ್ಪಿದ್ದು, ಐದು ಮಂದಿ ಪ್ರವಾಹದಲ್ಲಿ ಕೊಚ್ಚಿಹೋಗಿದ್ದು, ಜಿಲ್ಲೆಯಲ್ಲಿ ಸತ್ತವರ ಸಂಖ್ಯೆ  ೨೪ಕ್ಕೆ ಏರಿದೆ.

ಜಮಖಂಡಿ ತಾಲೂಕಿನ ಮರೇಗುದ್ದಿಯ ಮೂವರು, ಹುನಗುಂದ ತಾಲೂಕಿನ ಅಮೀನಗಡದಲ್ಲಿ ಒಬ್ಬರು, ಕೆಲೂರಿನಲ್ಲಿ ಓರ್ವ ಮಹಿಳೆ, ಮುಧೋಳದ ಬಂಟನೂರು ಗ್ರಾಮದಲ್ಲಿ ಇಬ್ಬರು ಮೃತಪಟ್ಟಿದ್ದು, ಮುಧೋಳ  ಸಮೀಪದ ಗ್ರಾಮವೊಂದರ ಹಳ್ಳದಲ್ಲಿ ಮಹಿಳೆಯೊಬ್ಬರು ಕೊಚ್ಚಿಹೋಗಿದ್ದಾರೆ. ಜಿಲ್ಲೆಯ ನೂರಾರು ಗ್ರಾಮಗಳಿಗೆ ಪ್ರವಾಹದ ನೀರು ನುಗ್ಗಿದ ಪರಿಣಾಮ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಈ ಮಧ್ಯೆ ಪ್ರವಾಹ ಪೀಡಿತ ಸ್ಥಳಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ, ಶಾಸಕರಾದ ರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ ಭೇಟಿ ನೀಡಿ ಸಮೀಕ್ಷೆ ನಡೆಸಿದರು.

ತುರ್ತು ಅಧಿವೇಶನ ಕರೆಯಲು ಸಿದ್ಧರಾಮಯ್ಯ ಒತ್ತಾಯ

ಬೆಂಗಳೂರು: ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಅಬ್ಬರದ ಮಳೆಯಿಂದ ಉಂಟಾಗಿರುವ ನೆರೆ ಹಾವಳಿ ಪರಿಹಾರ ಕಾರ್ಯಕ್ಕೆ ಸಂಬಂಧಿಸಿದಂತೆ ಚರ್ಚಿಸಲು ತುರ್ತು ಅಧಿವೇಶನ ಕರೆಯಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ರವಿವಾರ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆಗೆ ತೆರಳಲು ಹುಬ್ಬಳಿಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಂದಾಗಿ ಸಾಂಕ್ರಾಮಿಕ ರೋಗ ಹರಡಲಿದೆ. ತಕ್ಷಣವೇ ಇದನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಸರಕಾರ ನೆರೆ ಹಾವಳಿ ಪರಿಹಾರದ ಮೊತ್ತವನ್ನು ಇನ್ನೂ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರಕಾರದ ಬಳಿ ಕೇಂದ್ರ ಸರಕಾರದ ೨೮೦ ಕೋಟಿ ರೂ.ಹಣವಿದೆ. ಆದರೆ, ನೆರೆ ಪರಿಹಾರಕ್ಕೆ ಸರಕಾರ ರಾಜ್ಯದ ಹಣವನ್ನು ಬಳಸಿಕೊಳ್ಳದೆ ಕೇಂದ್ರದ ಹಣವನ್ನು ಬಳಕೆ ಮಾಡುತ್ತಿದೆ ಎಂದು ಟೀಕಿಸಿದ ಸಿದ್ದರಾಮಯ್ಯ, ನೆರೆ ಹಾವಳಿ ರಾಷ್ಟ್ರೀಯ ವಿಪತ್ತಾಗಿದ್ದು, ಶೀಘ್ರದಲ್ಲೆ ಇನ್ನೂ ಹೆಚ್ಚಿನ ಪರಿಹಾರಕ್ಕೆ ಕಾಂಗ್ರೆಸ್ ಪಕ್ಷ ಕೇಂದ್ರಕ್ಕೆ ಮನವಿ ಸಲ್ಲಿಸಲಿದೆ. ಶೀಘ್ರದಲ್ಲೆ ಕೇಂದ್ರಕ್ಕೆ  ಕಾಂಗ್ರೆಸ್ ಪಕ್ಷದ ನಿಯೋಗವನ್ನು ಕೊಂಡೊಯ್ಯ ಲಾಗುವುದು ಎಂದು ಹೇಳಿದರು.

ಕೇಂದ್ರ ಸರಕಾರ ತಕ್ಷಣವೇ ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಿಗೆ ಧಾವಿಸಿ ಸಮೀಕ್ಷೆ ನಡೆಸಬೇಕು. ರಾಜ್ಯಕ್ಕೆ ಅಗತ್ಯ ನೆರವು ನೀಡಬೇಕು ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ದಾವಣಗೆರೆಯಲ್ಲಿ 67 ಕೋಟಿ ರೂ. ನಷ್ಟ: ಅಶೋಕ್

ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಿಂದ ಸುರಿದ ಮಳೆಯ ಪರಿಣಾಮ  ಉಂಟಾಗಿರುವ ಅತಿವೃಷ್ಟಿಯಿಂದ ಸುಮಾರು ೬೭ ಕೋಟಿ ರೂ.ಹಾನಿ ಸಂಭವಿಸಿದೆ. ಪರಿಹಾರ ಕಾರ್ಯಕ್ಕೆ ತಕ್ಷಣವೇ ಮೂರು ಕೋಟಿ ರೂ.ಬಿಡುಗಡೆ ಮಾಡಲಾಗುವುದು. ಪ್ರಸ್ತುತ ಇರುವ ೧.೫ ಕೋಟಿ ರೂ.ಬಳಕೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಸಾರಿಗೆ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಜಿಲ್ಲೆಯ ಹರಿಹರ ಮತ್ತು ಹರಪ್ಪನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಅಬ್ಬರದಿಂದಾಗಿ ರಾಜ್ಯದೆಲ್ಲೆಡೆ ಹಾನಿ ಸಂಭವಿಸಿದೆ.

ಸಚಿವರು ಪ್ರವಾಸ ಕೈಗೊಂಡು ಸಮೀಕ್ಷೆ ನಡೆಸಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆ ಸಮೀಕ್ಷೆಗೆ ತಾನು ಆಗಮಿಸಿರುವುದಾಗಿ ಹೇಳಿದರು.

ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿನ ಸರಕಾರಿ ಶಾಲೆ, ಬಸ್ ನಿಲ್ದಾಣಗಳನ್ನು ಕಟ್ಟಡಗಳನ್ನು ಕೆಡವಲು ಆದೇಶಿಸಿದ ಅಶೋಕ್, ಮಳೆ ಹಾನಿಗೆ ಸಂಬಂಧಿಸಿದಂತೆ ಪ್ರತಿ ಎರಡು ದಿನಗಳಿಗೂಮ್ಮೆ ಸಭೆ ಕರೆದು ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ಗಂಜಿ ಕೇಂದ್ರ ತೆರೆಯಲು ತಾಕೀತು ಮಾಡಿದರು.

ಆರೋಗ್ಯ ಇಲಾಖೆ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು. 

ಉಚಿತವಾಗಿ ಔಷಧಿಗಳನ್ನು ವಿತರಿಸಬೇಕು. ಮನೆ ಕಳೆದುಕೊಂಡವರಿಗೆ ಆಶ್ರಯ ಯೋಜನೆಯಡಿ ತಕ್ಷಣ ಸೂರು ಕಲ್ಪಿಸ ಲಾಗುವುದು ಎಂದು ಸಚಿವ ಆರ್. ಅಶೋಕ್ ಭರವಸೆ ನೀಡಿದರು.

ನೆರೆ ಸಂತ್ರಸ್ತರಿಗೆ ಕಾಂಗ್ರೆಸ್ ದೆಣಿಗೆ

ಬೆಂಗಳೂರು: ನೆರೆ ಸಂತ್ರಸ್ತರಿಗಾಗಿ ನೆರವು ನೀಡಲು ನಗರದ ವಿವಿಧ ಬಡಾವಣೆಗಳಲ್ಲಿನ ಸಾರ್ವಜನಿಕರಿಂದ ಆಹಾರ ಪದಾರ್ಥಗಳು, ಬಟ್ಟೆಗಳು, ಔಷಧಿಗಳನ್ನು ಬೆಂಗಳೂರು ಮಹಾನಗರ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಸಂಗ್ರಹಿಸಲಾಗುವುದು ಎಂದು ಯುವ ಕಾಂಗ್ರೆಸ್ ಮುಖಂಡ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಜನರು ಸಂತ್ರಸ್ತರಾಗಿದ್ದು, ಆಹಾರ, ನೀರು ಇಲ್ಲದೆ ಹಸಿವಿನಿಂದ ಬಳಲುವ ಪರಿಸ್ಥಿತಿ ಎದುರಾಗಿದೆ ಎಂದರು.

ಪಕ್ಷದ ಮುಖಂಡರು ಈಗಾಗಲೆ ವಿವಿಧ ತಂಡಗಳನ್ನು ರಚಿಸಿಕೊಂಡು ಪರಿಹಾರ ಕಾರ್ಯದಲ್ಲಿ ತಮ್ಮನ್ನು ತೊಡಿಗಿಸಿಕೊಂಡಿದ್ದಾರೆ. ಅದರಂತೆಯೆ, ಯುವ ಕಾಂಗ್ರೆಸ್ ಸಮಿತಿಯು ಬಾಗಲಕೋಟೆ ಜಿಲ್ಲೆಯಲ್ಲಿನ ಸಂತ್ರಸ್ತರ ನೆರವಿಗೆ ಮುಂದಾಗಿದೆ. 

ಸಂತ್ರಸ್ತರಿಗೆ ಗರಿಷ್ಠ ಪ್ರಮಾಣದಲ್ಲಿ ನೆರವು ನೀಡುವಸಲುವಾಗಿ ಆಹಾರ, ಬಟ್ಟೆ, ರಗ್ಗು, ಔಷಧಿಗಳನ್ನು  ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. ಸಾರ್ವಜನಿಕರು ಉದಾರ ಮನಸ್ಸಿನಿಂದ ತಮಗೆ ಸಹಕರಿಸಬೇಕೆಂದು ಸೋಮಶೇಖರ್ ಮನವಿ ಮಾಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ರಾಮಚಂದ್ರಪ್ಪ ಸೇರಿದಂತೆ ಬೆಂಗಳೂರು ಮಹಾನಗರ ಯುವ ಕಾಂಗ್ರೆಸ್ ಸಮಿತಿಯ ಹಲವು ಮುಖಂಡರು  ಉಪಸ್ಥಿತರಿದ್ದರು.

ರಾಜ್ಯ ಸರಕಾರ ವಿಫಲ: ಖರ್ಗೆ

ಬೆಂಗಳೂರು: ನೆರೆ ಸಂತ್ರಸ್ತರ ಪರಿಹಾರಕ್ಕೆ ಕೇಂದ್ರ ಸರಕಾರದ ನೆರವು ಬಳಕೆ ಮಾಡಿಕೊಳ್ಳುವಲ್ಲಿ ರಾಜ್ಯ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಕಾರ್ಮಿಕ ಸಚಿವ ಎಂ.ಮಲ್ಲಿಕಾರ್ಜುನ ಖರ್ಗೆ, ತಕ್ಷಣವೇ ರಾಜ್ಯದ ಬೊಕ್ಕಸದಿಂದ ಹಣ ಬಿಡುಗಡೆ ಮಾಡಿ, ಅನಂತರ ಕೇಂದ್ರದ ನೆರವಿಗೆ ಮನವಿ ಮಾಡಲಿ ಎಂದು ಸಲಹೆ ಮಾಡಿದ್ದಾರೆ.

ಗುಲ್ಬರ್ಗಾ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಕೇಂದ್ರ ಸರಕಾರದಿಂದ ನೀಡಲಾಗಿದ್ದ ೨೮೦ ಕೋಟಿ ರೂ.ಗಳನ್ನು ನೆರೆ ಪರಿಹಾರಕ್ಕೆ ಬಿಡುಗಡೆ ಮಾಡಿ ಕೇಂದ್ರ ಸರಕಾರದ ಹಣಕ್ಕಾಗಿ ಕಾದು ಕುಳಿತಿದೆ ಎಂದು ಟೀಕಿಸಿದರು.

ತಕ್ಷಣವೇ ಮಳೆಯಿಂದಾಗಿ ಉಂಟಾಗಿರುವ ನೆರೆ ಸಂತ್ರಸ್ತರ ನೆರವಿಗೆ ರಾಜ್ಯ ಸರಕಾರ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕು. ಜನತೆಗೆ ಅಗತ್ಯವಿರುವ ಆಹಾರ, ವಸತಿ, ಬಟ್ಟೆ-ಬರೆ ಒದಗಿಸಬೇಕು. ಇದನ್ನು ಬಿಟ್ಟು ವಿನಾ ಕಾರಣ ಕಾಲಾಹರಣ ಮಾಡುವುದು ಸರಿಯಲ್ಲ ಎಂದು ಖರ್ಗೆ ಅಸಮಾದಾನ ವ್ಯಕ್ತಪಡಿಸಿದರು 


Share: