ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ರಾಜಕೀಯ ಸ್ಥಿತಿಗೆ ಹೊಂದಿಕೊಳ್ಳಲು ಗೊತ್ತು: ರೆಡ್ಡಿ ಸಹೋದರರ ವಿರುದ್ಧ ಮುಖ್ಯಮಂತ್ರಿ ಪರೋಕ್ಷ ವಾಗ್ದಾಳಿ

ಬೆಂಗಳೂರು: ರಾಜಕೀಯ ಸ್ಥಿತಿಗೆ ಹೊಂದಿಕೊಳ್ಳಲು ಗೊತ್ತು: ರೆಡ್ಡಿ ಸಹೋದರರ ವಿರುದ್ಧ ಮುಖ್ಯಮಂತ್ರಿ ಪರೋಕ್ಷ ವಾಗ್ದಾಳಿ

Sun, 06 Dec 2009 15:09:00  Office Staff   S.O. News Service
ಬೆಂಗಳೂರು, ಡಿ.6: ರಾಜಕೀಯ ಸ್ಥಿತಿ ರಾಜ್ಯದಲ್ಲಿ ಇದೇ ರೀತಿ ಮುಂದುವರಿದರೆ ಹೇಗೆ ನಡೆದುಕೊಳ್ಳಬೇಕು ಎಂದು ನನಗೆ ಗೊತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳುವ ಮೂಲಕ ಸಚಿವರಾದ ರೆಡ್ಡಿ ಸಹೋದರರ ಬಣದ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಪುಟ್ಟೇನಹಳ್ಳಿಯಲ್ಲಿ ಬಾಳೇಹೊನ್ನೂರು ಧರ್ಮಪೀಠ ನೂತನವಾಗಿ ನಿರ್ಮಿಸಿರುವ ಶ್ರೀ ಸೋಮೇಶ್ವರ ಸಭಾ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಸಮಾರಂಭದಲ್ಲಿ ಭಾಗವಹಿಸಿದ್ದ ರೆಡ್ಡಿ ಸಹೋದರರ ಬಣದಲ್ಲಿ ಗುರುತಿಸಿಕೊಂಡಿರುವ ಬಿನ್ನಮತೀಯ ಶಾಸಕ ರೇಣುಕಾಚಾರ್ಯರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

ರಾಜ್ಯದ ಜನತೆ ತಪ್ಪಾಗಿ ಅರ್ಥಮಾಡಿಕೊಳ್ಳಬಾರದೆಂದು ನನ್ನ ಮಾತಿಗೆ ಕಡಿವಾಣ ಹಾಕಿದ್ದೇನೆ. ಹೋರಾಟದಿಂದ ಬಂದಿರುವ ನಾನು ಕುರ್ಚಿ ಆಸೆಯ ಸ್ವಾರ್ಥಕ್ಕಾಗಿ ಯಾರೆ ತಪ್ಪು ಮಾಡಿದರು ಅದನ್ನು ಸಹಿಸಲು ಸಾಧ್ಯವಿಲ್ಲ. ಜನತೆಯ ಆಶೀರ್ವಾದ ಮತ್ತು ಬೆಂಬಲ ಇರುವವರೆಗೆ ಅಧಿಕಾರದಲ್ಲಿ ಮುಂದುವರೆಯುತ್ತೇನೆ ಎಂದು ಅವರು ನುಡಿದರು.

ರಾಜಕೀಯ ಬಿಕ್ಕಟ್ಟಿನಿಂದ ನೊಂದು ಮೃಧುವಾಗಿದ್ದೇನೆ. ಇದನ್ನು ದೌರ್ಬಲ್ಯ ಎಂದು ತಿಳಿದುಕೊಂಡಿರುವ ಕೆಲವರು ಅಭಿವೃದ್ಧಿ ಕಾರ್ಯಕ್ರಮಗಳ ವೇಗಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಜನಬೆಂಬಲ ಇರುವುವರೆಗೂ ಇವ್ಯಾವುದಕ್ಕೂ ನಾನು ಚಿಂತಿಸುವುದಿಲ್ಲ ಎಂದು ಯಡಿಯೂರಪ್ಪ ಕಿಡಿಕಾರಿದರು.

ನಾನು ಮುಖ್ಯಮಂತ್ರಿಯಲ್ಲ. ೬ಕೋಟಿ ಕನ್ನಡಿಗರ ಸೇವಕನಾಗಿದ್ದೇನೆ. ಅವರ ನಿರೀಕ್ಷೆಯಂತೆ ನಡೆದುಕೊಳ್ಳುತ್ತಾ, ಎಲ್ಲರ ಆಶಿರ್ವಾದದಿಂದ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಅವರು ಹೇಳಿದರು.

ನೆರೆ ಹಾವಳಿಯಿಂದ ಜನತೆ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ, ಎಲ್ಲರೂ ಪಕ್ಷ ಬೇದ ಮರೆತು ಅವರ ಸಂಕಷ್ಟಕ್ಕೆ ಸ್ಪಂಧಿಸಬೇಕಾಗಿತ್ತು. ಆದರೆ ಕೆಲವರು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಕೀಳು ರಾಜಕಾರಣ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಸರಕಾರ ನೆರೆಪೀಡಿತ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ. ರಾಜ್ಯದ ಜನತೆ ಕೂಡ ಸಂತ್ರಸ್ತರ ನೆರವಿಗೆ ಸಾವಿರಾರು ಕೋಟಿ ರೂ. ದೇಣಿಗೆ ನೀಡಿದ್ದಾರೆ. ಜನತೆಯ ವಿಶ್ವಾಸ, ನಂಬಿಕೆಗೆ ದ್ರೋಹ ಬಗೆಯದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇದಕ್ಕೆ ಸಹಕಾರ ನೀಡಬೇಕು ಎಂದು ಯಡಿಯೂರಪ್ಪ ಕರೆನೀಡಿದರು.

ಸಮಾರಂಭದಲ್ಲಿ ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್, ರಂಭಾಪುರಿ  ಮಠದ ಶಾಂತಮುನಿ ಶಿವಾಚಾರ್ಯ ಸ್ವಾಮಿ, ಶಾಸಕ ಎಂ.ಕೃಷ್ಣಪ್ಪ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ರೇಣುಕಾಚಾರ್ಯ ಮುಂತಾದವರು ಉಪಸ್ಥಿತರಿದ್ದರು.

Share: