ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ನೆರೆಸಂತ್ರಸ್ತರಿಗೆ ನೆರೆವು ನೀಡಲು ಸಹಾಯಹಸ್ತ ಚಾಚಿದ - ಸ್ನೇಹಲೋಕ

ಬೆಂಗಳೂರು: ನೆರೆಸಂತ್ರಸ್ತರಿಗೆ ನೆರೆವು ನೀಡಲು ಸಹಾಯಹಸ್ತ ಚಾಚಿದ - ಸ್ನೇಹಲೋಕ

Mon, 12 Oct 2009 02:52:00  Office Staff   S.O. News Service
ಬೆಂಗಳೂರು, ಅ.11: ನೆರೆ ಸಂತ್ರಸ್ತರಿಗೆ ನೆರವಾಗಲು ಕನ್ನಡದ ಹಿರಿಯ ನಟ ಡಾ.ವಿಷ್ಣುವರ್ಧನ್ ನೇತೃತ್ವದ ‘ಸ್ನೇಹಲೋಕ’ ತಂಡವು, ಜಯನಗರ, ಬಸವನಗುಡಿ, ಗಾಂಧಿನಗರದಲ್ಲಿ ರವಿವಾರ ಪಾದಯಾತ್ರೆ ನಡೆಸಿ ದೇಣಿಗೆ ಸಂಗ್ರಹಿಸಿದರು.

ಜಯನಗರದಲ್ಲಿನ ತಿಮ್ಮೇಗೌಡರ ನಿವಾಸಕ್ಕೆ ಇಂದು ಬೆಳಗ್ಗೆ ತೆರಳಿದ ವಿಷ್ಣುವರ್ಧನ್, ಭಾರತಿ ವಿಷ್ಣುವರ್ಧನ್ ದೇಣಿಗೆ ಸಂಗ್ರಹಿಸುವುದರ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ನಟ ಶಿವರಾಮ್, ರಮೇಶ್ ಭಟ್, ವಿಜಯ್, ಯಶ್ ಸೇರಿದಂತೆ ಹಲವಾರು ಕಲಾವಿದರು ಈ ಸಂದರ್ಭದಲ್ಲಿ ಅವರೊಂದಿಗಿದ್ದರು. 

ತೆರದ ವಾಹನದಲ್ಲಿ ಜಯನಗರ, ಬಸವನಗುಡಿ, ಗಾಂಧಿನಗರದಲ್ಲಿ ಸಂಚರಿಸಿ ನಂತರ, ನಗರದ ಪ್ರಮುಖ ರಸ್ತೆಗಳಲ್ಲಿ, ಶಾಪಿಂಗ್ ಕಾಂಪ್ಲೆಕ್ಸ್,ಮಳಿಗೆಗಳಿಗೆ ತೆರಳಿದ ಕಲಾವಿದರು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ವಿಷ್ಣುವರ್ಧನ್, ಹನಿ-ಹನಿಗೂಡಿದರೆ ಹಳ್ಳ ಎಂಬಂತೆ ನಾಡಿನ ಜನರ ಸಂಕಷ್ಟದ ಪರಿಹಾರಕ್ಕಾಗಿ ತಮ್ಮಿಂದ ಸಾಧ್ಯವಾದ ಸೇವೆ ಮಾಡುವುದಾಗಿ ತಿಳಿಸಿದರು.

ನೆರೆ ಸಂತ್ರಸ್ತರ ನೋವಿನ ಅರಿವಿರುವ ಸಾರ್ವಜನಿಕರು ಮುಕ್ತ ಮನಸ್ಸಿನೊಂದಿಗೆ ಸ್ವಯಂ ಪ್ರೇರಿತರಾಗಿ ದೇಣಿಗೆ ನೀಡಲು ಮುಂದಾಗುತ್ತಿರುವುದಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು.

ನಟ ರಮೇಶ್ ಅರವಿಂದ್ ಮಾತನಾಡಿ, ನೆರೆ ಹಾವಳಿಯಿಂದ ಲಕ್ಷಾಂತರ ಮಂದಿ ಬೀದಿ ಪಾಲಾಗಿದ್ದಾರೆ. ಸುಮಾರು ೧೬ ಸಾವಿರ ಕೋಟಿ ರೂ. ಹಾನಿ ಉಂಟಾಗಿದೆ ಎಂಬುದನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇವೆ. ಆದ್ದರಿಂದ ಸಂತ್ರಸ್ತರ ನೆರವಿಗೆ ನಮ್ಮಿಂದ ಸಾಧ್ಯವಾದ ಸಹಾಯ ಮಾಡಲು ಮುಂದಾಗಿರುವುದಾಗಿ ತಿಳಿಸಿದರು. 

ಸಂಕಷ್ಟದಲ್ಲಿರುವವರ ನೆರವಿಗೆ ರಾಜ್ಯಾದ್ಯಂತ ಜನತೆಯು ಮುಂದಾಗುತ್ತಿರುವ ರೀತಿ ನಿಜಕ್ಕೂ ಅದ್ಭುತವಾದದ್ದು ಎಂದು ಅವರು ತಿಳಿಸಿದರು. ನಟ ಅವಿನಾಶ್ ಮಾತನಾಡಿ, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪಾದಯಾತ್ರೆಯಲ್ಲಿ ಸಂಗ್ರಹವಾಗುವ ದೇಣಿಗೆಯನ್ನು ಸ್ನೇಹಲೋಕ ತಂಡ ಪರವಾಗಿ ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ಅರ್ಪಿಸಲಾಗುವುದು ಎಂದರು.

Share: