ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಕಾರವಾರ: ಪಶುಸಂಗೋಪನೆ ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದೆ - ಕಾಗೇರಿ

ಕಾರವಾರ: ಪಶುಸಂಗೋಪನೆ ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದೆ - ಕಾಗೇರಿ

Mon, 25 Jan 2010 16:54:00  Office Staff   S.O. News Service
ಕಾರವಾರ, ಜನವರಿ 25: ಉ.ಕ. ಜಿಲ್ಲೆಯಲ್ಲಿ ಪಶುಸಂಗೋಪನೆ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದು, ಲಾಭದಾಯಕವಾದ ಪಶುಸಂಗೋಪನೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
 
ಅವರು ಸೋಮವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಜಿಲ್ಲೆಯಲ್ಲಿ ೩೮೦೦ ರೈತರು ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡಿದ್ದು, ಕೆ.ಎಂ.ಎಫ್. ಜಿಲ್ಲೆಯ ರೈತರಿಂದ ೧೪ ಸಾ.ಲೀ. ಹಾಲನ್ನು ಸಂಗ್ರಹಿಸುತ್ತಿದೆ. ಲೀಟರಿಗೆ ೨ ರೂ. ಸಬ್ಸಿಡಿಯಂತೆ ೭೦ ಲಕ್ಷ ರೂ.ಯನ್ನು ಈಗಾಗಲೇ ನೀಡಲಾಗಿದೆ. ಜಿಲ್ಲೆಯಲ್ಲಿ ೧೧೪ ಹಾಲು ಉತ್ಪಾದಕ ಸಂಘಗಳಿದ್ದು, ಬರುವ ೨೦೧೨ರೊಳಗೆ ೨೫೦ಕ್ಕೆ ಈ ಸಂಘಗಳನ್ನು ಏರಿಸಿ, ಪ್ರತಿದಿನ ೩೦ ರಿಂದ ೩೫ ಸಾ.ಲೀ ಹಾಲು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಆದರೆ ಜಿಲ್ಲೆಯ ಮಾರುಕಟ್ಟೆಯಲ್ಲಿ ೬೦ ಸಾ.ಲೀ. ಹಾಲಿನ ಬೇಡಿಕೆಯಿದೆ ಎಂದು ಅವರು ಹೇಳಿದರು.
 
ಭಟ್ಕಳದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಎಚ್ಚರಿಕೆ ಕೈಗೊಳ್ಳುವಂತೆ ಸೂಚಿಸಲಾಗಿದೆ. ಈಗಾಗಲೇ ಶಿಲುಬೆ ಹಾನಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ಅದಿರು ಲಾರಿಗಳ ಹಾವಳಿ ತಡೆಗಟ್ಟಲು ಸರ್ಕಾರದ ಮಟ್ಟದಲ್ಲಿಯೇ ಸಮಾಲೋಚನೆ ನಡೆದಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಗಣಿ ಪ್ರದೇಶದಲ್ಲಿಯೇ ಅದಿರು ಲಾರಿಗಳನ್ನು ನಿಯಂತ್ರಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದರು.
 
ಉತ್ಸವಗಳಿಲ್ಲ
 
ಈ ಬಾರಿ ಭೀಕರ ಪ್ರಕೃತಿ ವಿಕೋಪ ಸಂಭವಿಸಿದ ಹಿನ್ನಲೆಯಲ್ಲಿ ರಾಜ್ಯದೆಲ್ಲಡೆಯಂತೆ ಜಿಲ್ಲೆಯಲ್ಲೂ ಕದಂಬ ಉತ್ಸವ ಮತ್ತು ಕರಾವಳಿ ಉತ್ಸವ ನಡೆಸದಿರಲು ತೀರ್ಮಾನಿಸಲಾಗಿದ್ದು, ಇದು ಸರ್ಕಾರದ ನಿರ್ಧಾರವಾಗಿದೆ ಎಂದ ಸಚಿವರು ಶ್ರೀ ಕೃಷ್ಣದೇವರಾಯರ ಪಟ್ಟಾಭಿಷೇಕದ ೫೦೦ನೇ ವರ್ಷ ಇದಾಗಿರುವುದರಿಂದ ಅದನ್ನು ಮಾತ್ರ ಆಚರಿಸಲು ತೀರ್ಮಾನಿಸಲಾಯಿತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 
ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಉತ್ತಮವಾಗಿ ನಡೆಯುತ್ತಿದ್ದು, ಈಗಾಗಲೇ ಬಿಡುಗಡೆಗೊಂಡಿರುವ ೨೫ ಕೋ.ರೂ.ಯಲ್ಲಿ ೨೩ ಕೋ.ರೂ. ಖರ್ಚಾಗಿದೆ ಎಂದರು.
ಜಿಲ್ಲಾಧಿಕಾರಿ ಎನ್.ಎಸ್. ಚನ್ನಪ್ಪಗೌಡ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ.ಜಿ. ತುರಮರಿ, ಯಲ್ಲಾಪುರ ಶಾಸಕ ವಿ.ಎಸ್. ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.


Share: