ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಅಂತರಾಷ್ಟ್ರೀಯ ಪ್ರಶಸ್ತಿ ಪಟ್ಟಿಯಲ್ಲಿ ‘ಭಟ್ಕಳ ಪುರಸಭೆ’

ಭಟ್ಕಳ: ಅಂತರಾಷ್ಟ್ರೀಯ ಪ್ರಶಸ್ತಿ ಪಟ್ಟಿಯಲ್ಲಿ ‘ಭಟ್ಕಳ ಪುರಸಭೆ’

Mon, 02 Nov 2009 19:36:00  Office Staff   S.O. News Service
ಭಟ್ಕಳ, ನವೆಂಬರ್ 2:ಅತ್ಯುತ್ತಮ ‘ಘನ ತ್ಯಾಜ್ಯ ವಸ್ತು ನಿರ್ವಹಣೆ’ಗಾಗಿ ನೀಡಲಾಗುವ ಐಕಾನ್ ಇಂಟರ್‌ನ್ಯಾಷನಲ್ ಪ್ರಶಸ್ತಿ ಪಟ್ಟಿಯಲ್ಲಿ ಭಟ್ಕಳ ಪುರಸಭೆಗೆ ಸ್ಥಾನ ಲಭಿಸಿದೆ.
 
ಈ ಪ್ರಶಸ್ತಿಗಾಗಿ ರಾಜ್ಯದ ಎರಡು ಪುರಸಭೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಬಳ್ಳಾರಿ ಜಿಲ್ಲೆಯ ಶಿರಗುಪ್ಪ ತಾಲೂಕು ಈ ಪಟ್ಟಿಯಲ್ಲಿರುವ ಇನ್ನೊಂದು ಹೆಸರಾಗಿದೆ. ಮಹಾನಗರ ಪಾಲಿಕೆಗಳಿಗಾಗಿ ನೀಡಲಾಗುವ ಪ್ರಶಸ್ತಿ ಪಟ್ಟಿಯಲ್ಲಿ ರಾಜ್ಯದ ಮಂಗಳೂರು ಹಾಗೂ ಮೈಸೂರು ಮಹಾನಗರ ಪಾಲಿಕೆಗಳು ಸೇರಿಕೊಂಡಿವೆ. ಈಗಾಗಲೇ ಪಶ್ಚಿಮ ಬಂಗಾಲದಿಂದ ಇಂಜಿನೀಯರುಗಳು ಭಟ್ಕಳಕ್ಕೆ ಆಗಮಿಸಿ ತ್ಯಾಜ್ಯ ನಿರ್ವಹಣೆ ಕುರಿತಂತೆ ಪರಿಶೀಲನೆ ನಡೆಸಿದ್ದು, ಆಯ್ಕೆ ಸಮಿತಿಗೆ ವರದಿ ನೀಡಲಿದ್ದಾರೆ. ದೇಶದ ವಿವಿಧ ಭಾಗಗಳ ಪುರಸಭೆಗಳು ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿದ್ದು, ಅಂತಿಮವಾಗಿ ಒಂದು ಪುರಸಭೆಯನ್ನು ಪ್ರಶಸ್ತಿ ವಿಜೇತರನ್ನಾಗಿ ಘೋಷಿಸಲಾಗುತ್ತದೆ. ನವೆಂಬರ್ ೪ರಿಂದ ೬ರವೆರಗೆ ಕೋಲ್ಕತ್ತಾದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಧ್ಯಕ್ಷ ಫರ್ವೇಜ್ ಕಾಶೀಮ್‌ಜಿ, ಮುಖ್ಯಾಧಿಕಾರಿ ಕೃಷ್ಣಪ್ಪ, ಆರೋಗ್ಯಾಧಿಕಾರಿ ಅನಿಲ್ ಪ್ರಭು ಇಲ್ಲಿಂದ ತೆರಳಲಿದ್ದಾರೆ. ಈ ಕುರಿತು ಪತ್ರಿಕಾ ಗೋಷ್ಠಿ ನಡೆಸಿದ ಭಟ್ಕಳ ಪುರಸಭಾ ಅಧ್ಯಕ್ಷ ಕಾಶೀಮ್‌ಜಿ, ಅಂತರಾಷ್ಟ್ರೀಯ ಪ್ರಶಸ್ತಿ ಪಟ್ಟಿಯಲ್ಲಿ ಭಟ್ಕಳದ ಹೆಸರು ಕಾಣಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಭಟ್ಕಳದ ಎಲ್ಲ ನಾಗರಿಕರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

Share: