ಭಟ್ಕಳ: ದಾಂಡೇಲಿಯಿಂದ ಭಟ್ಕಳಕ್ಕೆ ಮಾತನಾಡಲೆಂದು ಕರೆಯಿಸಿ ಏಳು ತಿಂಗಳ ಮಗುವನ್ನು ಅಪಹರಣ ಮಾಡಿರುವ ಘಟನೆಯೊಂದು ಭಟ್ಕಳದಲ್ಲಿ ನಡೆದಿದೆ. ಈ ಕುರಿತಂತೆ ಮಗುವಿನ ತಂದೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದಾರೆ.
ಮಗುವಿನ ತಂದೆ ಸಲ್ಲಿಸಿದ ದೂರಿನಲ್ಲಿ ಓರ್ವ ಗಂಡಸು ಹಾಗೂ ಇಬ್ಬರು ಹೆಂಗಸರು ದಾಂಡೇಲಿಯ ನಮ್ಮ ಮನೆಗೆ ಬಂದು ತಮ್ಮ ಪರಿಚಯವನ್ನು ಮಾಡಿಕೊಂಡು ಹೋಗಿದ್ದರು. ಕೆಲವು ದಿನಗಳ ನಂತರದಲ್ಲಿ ಅವರು ನನಗೆ ಕರೆ ಮಾಡಿ ಭಟ್ಕಳಕ್ಕೆ ಒಮ್ಮೆ ಬಂದು ಹೋಗುವಂತೆ ಒತ್ತಾಯ ಮಾಡಿದ್ದರು. ನಾವು ಕೂಡ ಅದರಂತೆ ಜೂನ್ 18 ರಂದು ರಾತ್ರಿ ಭಟ್ಕಳದ ಆಲ್ ಖಲೀಜ್ ಹೋಟೆಲ್ ಬಳಿ ಬಂದು ದೂರವಾಣಿ ಕರೆ ಮಾಡಿದಾಗ ಮೂವರು ಬಂದು ನಮ್ಮನ್ನು ಮಾತನಾಡಿಸಿ ತನ್ನ ಹೆಂಡತಿ ಬಳಿ ಇದ್ದ 7 ತಿಂಗಳ ಮಗುವನ್ನು ಎತ್ತಿಕೊಂಡು ಈಗ ಬರುತ್ತೇವೆ ಎಂದು ಹೋದರು. ನಂತರ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು, ಸ್ವಲ್ಪ ಸಮಯದ ನಂತರ ನಮ್ಮ ಮೊಬೈಲ್‌ಗೆ ವಿಡಿಯೋ ಕರೆ ಮಾಡಿ ಮಗುವನ್ನು ತೊರಿಸಿ ಮಗು ಆರಾಮವಾಗಿ ಇರುವುದಾಗಿ ಹೇಳಿದ್ದಾರೆ. ಆದರೆ ತಮ್ಮ ಮಗುವನ್ನು ಮಾತ್ರ ಮರಳಿ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
ಘಟನೆ ಸಂಬಂಧ ಭಟ್ಕಳ ಪೊಲೀಸ್ ಠಾಣೆಯಲ್ಲಿ ಮಗುವಿನ ಅಪಹರಣ ಮಾಡಿರುವ ಕುರಿತು ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.