ಭಟ್ಕಳ, ಅಕ್ಟೋಬರ್ 24: ಗೋವಾ ರಾಜ್ಯದ ಮಾರ್ಗೋವಾದಲ್ಲಿ ದೀಪವಾಳಿ ಹಬ್ಬಕ್ಕೆ ಮುನ್ನ ಸನಾತನ ಸಂಸ್ಥೆಗೆ ಸೇರಿದೆ ಎನ್ನಲಾದ ಬಾಂಬ್ ಸ್ಪೋಟಕ್ಕೂ ಭಟ್ಕಳದಲ್ಲಿ ದೊರೆತ ಸ್ಪೋಟಕ ಸಾಮಾಗ್ರಿಗಳಿಗೆ ನಂಟಿರುವ ಬಗ್ಗೆ ರಾಜ್ಯದ ಕೆಲವು ಪತ್ರಿಕೆಗಳು ಬೊಟ್ಟು ಮಾಡಿ ತೋರಿಸಿದ್ದು ಈ ನಿಟ್ಟಿನಲ್ಲಿ ಭಟ್ಕಳದಲ್ಲಿ ಅಶಾಂತಿಯ ವಾತವರಣ ನಿರ್ಮಾಣವಾಗುವ ಸಾಧ್ಯತೆಯಿದ್ದು ಕೂಡಲೆ ಭಟ್ಕಳದಲ್ಲಿ ದೊರೆತ ಭಾರಿ ಪ್ರಮಾಣದ ಸ್ಫೋಟಕ ಸಾಮಾಗ್ರಿಗಳ ಕುರಿತು ಕುಲಂಕಷ ತನಿಖೆಯನ್ನು ಕೈಗೊಳ್ಳಬೇಕೆಂದು ಭಟ್ಕಳದ ಮಜ್ಲಿಸೆ ಇಸ್ಲಾಹ್-ವ- ತಂಝೀಮ್ ಆಗ್ರಹಿಸಿದೆ.

ಈ ಕುರಿತು ಇಂದು ಮಧ್ಯಹ್ನ ತಂಝೀಮ್ ಕಛೇರಿಯಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ತಂಝೀಮ್ ಮುಖಂಡರು ಗೋವಾ ಸ್ಫೋಟಕ್ಕೂ ಮತ್ತು ಭಟ್ಕಳದಲ್ಲಿ ದೊರೆತ ಸ್ಫೋಟಕ ಸಾಮಾಗ್ರಿಗಳಿಗೆ ಯಾವುದೆ ನಂಟಿದಿಯೋ ಎಂಬುದರ ಕುರಿತು ತನಿಖೆಯನ್ನು ನಡೆಸಬೇಕೆಂದು ಆಗ್ರಹಿಸಿದರು.
ಗೋಕರ್ಣದಲ್ಲಿ ಕಳೆದ ಕೆಲುವು ತಿಂಗಳುಗಳ ಹಿಂದೆ ಇಂತಹದ್ದೆ ಕ್ವಾರಿ ಕೆಲಸಗಾರರ ಸ್ಪೋಟಕ ಪ್ರಕರಣ ಪತ್ತೆಯಾದಾಗ ಭಟ್ಕಳದಿಂದ ಅಲ್ಲಿಗೆ ಹೋಗಿ ಗುಲ್ಲೆಬ್ಬಿಸಿದ ಜನರು ಈಗ ಭಟ್ಕಳದಲ್ಲಿ ಸಾವಿರಾರು ಮೌಲ್ಯದ ಸ್ಫೋಟಕಗಳು ದೊರೆತರು ಬಾಯಿಮುಚ್ಚಿಕೊಂಡಿರುವುದು ಸಂಶಯಕ್ಕೆಡೆ ಮಾಡಿದೆ. ಆದ್ದರಿಂದ ಈ ಕುರಿತು ಸರಕಾರವು ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಭಟ್ಕಳದಲ್ಲಿ ದೊರೆತ ಸ್ಫೋಟಕ ಸಾಮಾಗ್ರಿಗಳು ಕ್ವಾರಿ ಕೆಲಸಕ್ಕೆ ಬಳಸವುದಾದರೂ ಇದು ಸೂಕ್ಷ್ಮ ಪ್ರದೇಶವಾದ್ದರಿಂದ ಈ ಕುರಿತ ಸರಕಾರವು ಯಾವುದೆ ವಿಳಂಬವನ್ನು ಮಾಡದೆ ತನಿಖೆಗೆ ಮುಂದಾಗಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ತಂಝೀಮ್ ಅಧ್ಯಕ್ಷ ಡಾ.ಬದ್ರುಲ್ ಹಸನ್ ಮುಅಲ್ಲಿಮ್, ಪ್ರ.ಕಾ. ಎಸ್.ಜೆ. ಸೈಯ್ಯದ್ ಖಾಲಿದ್, ಅಬ್ದುಲ್ಲಾ ದಾಮೂದಿ, ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.