ಭಟ್ಕಳ, ಡಿಸೆಂಬರ್ 20:ತಾಲೂಕಿನ ಶಿರಾಲಿ ಗ್ರಾಮಪಂಚಾಯತ ವ್ಯಾಪ್ತಿಯ ಶ್ರೀ ಮಹಾಮಾಯಾ ದೇವಸ್ಥಾನದ ಅರ್ಚಕರು ಹಾಗೂ ಸದರಿ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರ ನಡುವೆ ಪೂಜಾ ವಿವಾದಕ್ಕೆ ಸಂಬಂಧಿಸಿದಂತೆ ಹುಟ್ಟಿಕೊಂಡಿದ್ದ ವಿವಾದಕ್ಕೆ ಸ್ಥಳೀಯ ನ್ಯಾಯಾಲಯ ತಾತ್ಕಾಲಿಕವಾಗಿ ತೆರೆ ಎಳೆದಿದೆ.
ತಮ್ಮನ್ನು ವಜಾಗೊಳಿಸಿ ದೇವಸ್ಥಾನದ ಆಡಳಿತ ಸಮಿತಿ ನೋಟಿಸ್ ಜಾರಿ ಮಾಡಿದ್ದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟಿಲನ್ನೇರಿದ್ದ ಅರ್ಚಕರ ಅಹವಾಲನ್ನು ನ್ಯಾಯಾಲಯ ಪುರಸ್ಕರಿಸಿದೆ. ಪೂಜಾ ಕಾರ್ಯ ತಮ್ಮ ಅನುವಂಶೀಯ ಹಕ್ಕಾಗಿದ್ದು, ಆಡಳಿತ ಮಂಡಳಿಯ ಕ್ರಮ ಕಾನೂನು ಬಾಹೀರವಾಗಿದೆ. ಪ್ರತಿದಿನದ ತಮ್ಮ ಪೂಜಾ ವಿಧಿವಿಧಾನದಲ್ಲಿ ಹಸ್ತಕ್ಷೇಪ ನಡೆಸದಂತೆ ಅರ್ಚಕರು ಭಟ್ಕಳ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಚಕರ ಹೇಳಿಕೆಗಳು ಮೇಲ್ನೋಟಕ್ಕೆ ಸತ್ಯ ಎಂದು ಕಂಡುಬಂದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಡಿ.ಆರ್.ಮಂಜುನಾಥ ದೇವಸ್ಥಾನದ ಆಡಳಿತ ಸಮಿತಿಗೆ ಮಧ್ಯ ಪ್ರವೇಶದ ಯಾವುದೇ ಹಕ್ಕು ಇಲ್ಲ ಎಂದು ತೀರ್ಪಿತ್ತಿದ್ದಾರೆ. ಅರ್ಚಕರ ಪರ ನ್ಯಾಯವಾದಿಗಳಾದ ಎಮ್.ಪಿ.ಶೆಣೈ, ಎಸ್.ಆರ್.ಹೆಗಡೆ, ವಿಕ್ಟರ್ ಗೋಮ್ಸ ವಾದ ಮಂಡಿಸಿದ್ದರು. ಕಳೆದ ಪರ್ಯಾಯ ಹಸ್ತಾಂತರ ಸಂದರ್ಭದಲ್ಲಿಯೂ ಇದೇ ವಿವಾದ ಟಿಸಿಲೊಡೆದು, ಪರ್ಯಾಯ ಸ್ವೀಕಾರಕ್ಕೆ ಮುಂದಾಗಿದ್ದ ವೆಂಕಟ ಭಟ್‌ರಿಗೆ ದೇವಸ್ಥಾನ ಆಡಳಿತ ಮಂಡಳಿ ತಡೆಯೊಡ್ಡಿತ್ತು. ಪೊಲೀಸರು ಹಾಗೂ ಊರ ಪ್ರಮುಖರ ಮಧ್ಯಸ್ಥಿಕೆಯಲ್ಲಿ ಸಂಧಾನ ನಡೆದು, ನ್ಯಾಯಾಲಯದ ತೀರ್ಪು ಬರುವವರೆಗೆ ಅವರ ಪುತ್ರ ವಿದ್ಯಾಧರ ಭಟ್‌ರಿಗೆ ಪರ್ಯಾಯ ಹಸ್ತಾಂತರವಾಗಿದ್ದನ್ನಿಲ್ಲಿ ಸ್ಮರಿಸಿಕೊಳ್ಳಬಹುದು.
ವರದಿ: ವಸಂತ ದೇವಾಡಿಗ