ಭಟ್ಕಳ:೭, ಇತ್ತಿಚೆಗೆ ಸಿದ್ದಾಪುರದಲ್ಲಿ ಹಿಂದು ಜಾಗರಣ ವೇದಿಕೆಯ ಉತ್ತರ ಪ್ರಾಂತದ ಸಂಚಾಲಕ ಭಟ್ಕಳದ ಗೋವಿಂದ ಜಟ್ಟಪ್ಪ ನಾಯ್ಕರ ಲೈಂಗೀಕ ಹಗರಣ ಕುರಿತಂತೆ ಪ್ರಕಟವಾದ ಪತ್ರಿಕೆಯನ್ನು ಹಂಚಿದ್ದಾನೆಂದು ಆರೋಪಿಸಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ಹತ್ತು ಜನರ ತಂಡವೊಂದು ತಮ್ಮ ಮೇಲೆ ಹಲ್ಲೆ ನಡೆಸಿದೆ ಎಂದು ಬಿ.ಜೆ.ಪಿ. ಪ್ರಮುಖ ಮೋಹನ್ ನಾಯ್ಕ ಎಂಬುವವರು ನಗರಠಾಣೆಯಲ್ಲಿ ದೂರನ್ನು ದಾಖಲಿಸಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಭಟ್ಕಳ ನಗರ ಠಾಣೆಯ ಪೋಲಿಸರು ಇಬ್ಬರು ಹಿಂಜಾವೇ ಕಾರ್ಯಕರ್ತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಮಾದೇವ ನಾಯ್ಕ ಹಾಗೂ ಈತನ ಸಹೋದರ ಈಶ್ವರ ನಾಯ್ಕ ಎಂದು ಗುರುತಿಸಲಾಗಿದೆ. ಹಿಂಜಾವೆಯ ಉತ್ತರಪ್ರಾಂತ ಷಂಚಾಲಕ ಗೋವಿಂದ ನಾಯ್ಕ ಸೇರಿದ ಇತರರು ನಾಪತ್ತೆಯಾಗಿದ್ದು ಅವರ ಬಂಧನಕ್ಕಾಗಿ ಪೋಲಿಸರು ವ್ಯಾಪಕ ಬಲೆಯನ್ನು ಬೀಸಿದ್ದಾರೆ ಎನ್ನಲಾಗಿದೆ.
ಮೋಹನ್ ನಾಯ್ಕ ಎಂಬುವವರು ತಾನು ನಗರದ ಗಣೇಶ ಮಂಟಪದ ಬಳಿ ಬೈಕಿನಲ್ಲಿ ಬರುತ್ತಿರಬೇಕಾದರೆ ಹನುಮಾನ ನಗರದ ಗೋವಿಂದ ಜಟ್ಟಪ್ಪ ನಾಯ್ಕ, ಈಶ್ವರ ದುರ್ಗಪ್ಪ ನಾಯ್ಕ, ಈಶ್ವರ ಬರ್ಮಪ್ಪ ನಾಯ್ಕ ಮತ್ತಿರರು ಸೇರಿದಂತೆ ರಿಕ್ಷಾದಲ್ಲಿ ಗುಂಪುಕಟ್ಟಿಕೊಂಡು ಬಂದು ತಮ್ಮ ಮೇಲೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿದ್ದಲ್ಲದೆ ಜೀವ ಬೆದರಿಕೆಯನ್ನು ಹಾಕಿದ್ದು ಅಲ್ಲದೆ ತಮ್ಮಲ್ಲಿ ೭ಸಾವಿರಾ ನಗದು ಹಣ ಹಾಗೂ ಬಂಗಾರದ ಚೈನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ನಗರ ಠಾಣೆಯಲ್ಲಿ ರವಿವಾರ ರಾತ್ರಿ ದೂರನ್ನು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕಾರ್ಯಪ್ರವೃತ್ತಗೊಂಡ ನಗರಠಾಣೆಯ ಪೋಲಿಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಇನ್ನೂಳಿದವರ ಬಂಧನಕ್ಕಾಗಿ ವ್ಯಾಪಕ ಬಲೆಯನ್ನು ಬೀಸಿದ್ದಾರೆ.
ವರದಿ: ಎಮ್ಮಾರ್ ಮಾನ್ವಿ, ಭಟ್ಕಳ