ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಪ್ರತಷ್ಠಿತ ಕಾರ್ಯಕ್ರಮಗಳಲ್ಲಿ ಒಂದಾದ ಕರ್ನಾಟಕ ಕಲಾಶ್ರೀ ಪ್ರಶಸ್ತಿಗೆ ಸಂಗೀತ ಮತ್ತು ನೃತ್ಯ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಹಿರಿಯ ಕಲಾವಿದರನ್ನು ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಶುಭ ಧನಂಜಯ ಅವರ ಅಧ್ಯಕ್ಷತೆಯ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನು ಮತದಿಂದ ಆಯ್ಕೆ ಮಾಡಲಾಗಿದೆ.
2023-24 ನೇ ಸಾಲಿನ ಹಿಂದೂಸ್ಥಾನಿ ಮತ್ತು ಗಾಯನದಲ್ಲಿ ಬಳ್ಳಾರಿಯ ಡಿ.ಕುಮಾರ್ ದಾಸ್ ಮತ್ತು ಸುಗಮ ಸಂಗೀತದಲ್ಲಿ ರಾಯಚೂರಿನ ಅಂಬಯ್ಯ ನುಲಿ ಇವರುಗಳು ಗೌರವ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ವಾರ್ಷಿಕ ಪ್ರಶಸ್ತಿ ವಿಭಾಗದಲ್ಲಿ ಕರ್ನಾಟಕ ಸಂಗೀತದಲ್ಲಿ ಬೆಂಗಳೂರಿನ ಶ್ರೀಮತಿ ಪದ್ಮ ಗುರುದತ್ - ಹಾಡುಗಾರಿಕೆ, ಮೈಸೂರಿನ ಶ್ರೀಮತಿ ರೇವತಿ ಕಾಮತ್ – ವೀಣೆ, ಕೋಲಾರದ ವಿ.ರಮೇಶ್ - ನಾದಸ್ವರ ಮತ್ತು ಮಂಗಳೂರಿನ ಕದ್ರಿ ರಮೇಶ್ ನಾಥ್ - ಸ್ಯಾಕ್ಸೋಪೋನ್ ವಿಭಾಗದ ಪ್ರಶಸ್ತಿ ಪುರಸ್ಕೃತರು.
ಕೊಪ್ಪಳದ ವಿರೂಪಾಕ್ಷ ರೆಡ್ಡಿ ಓಣಿಮನಿ-ಗಾಯನ, ಧಾರವಾಡದ ಶಫಿಖಾನ್ - ಸಿತಾರಾ ಮತ್ತು ಹುಬ್ಬಳ್ಳಿಯ ಸತೀಶ್ ಹಂಪಿಹೋಳಿ - ತಬಲದ ಹಿಂದೂಸ್ಥಾನಿ ಸಂಗೀತ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಶ್ರೀಮತಿ ಸವಿತಾ ಅರುಣ, ಮಾಲಾ ಶಶಿಕಾಂತ್, ಶರ್ಮಿಳಾ ಮುಖರ್ಜಿ ಮತ್ತು ಆನೇಕಲ್ನ ಸಯ್ಯದ್ ಸಲಾವುದ್ದೀನ್ ಪಾಷ ಇವರುಗಳು ನೃತ್ಯ ವಿಭಾಗದಲ್ಲಿ ಬೆಂಗಳೂರಿನ ಆನಂದ ಮಾದಲಗೆರೆ - ಸುಗಮ ಸಂಗೀತ ವಿಭಾಗದಲ್ಲಿ, ಮಂಡ್ಯದ ಎಂ. ಎಸ್. ನಾಗರಾಜಾಚಾರ್ – ಕತಾ ಕೀರ್ತನೆ ವಿಭಾಗದಲ್ಲಿ, ಬೆಂಗಳೂರಿನ ಜಿ. ಎಸ್. ನಾರಾಯಣ ಅವರು ಗಮಕ – ವಾಚನ ವಿಭಾಗದಲ್ಲಿ ಹೊರದೇಶ ಕನ್ನಡ ಕಲಾವಿದರ ವಿಭಾಗದಿಂದ ಅಮೇರಿಕಾದ ಕೆಆರ್ಎಸ್. ಪ್ರಸನ್ನ ಅವರು ಭರತನಾಟ್ಯ ವಿಭಾಗದಿಂದ ಮತ್ತು ಬೆಂಗಳೂರಿನ ಶ್ರೀವಾಣಿ ಸ್ಕೂಲ್ ಎಜುಕೇಶನ್ ಟ್ರಸ್ಟ್ ನ್ನು ಸಂಘ ಸಂಸ್ಥೆ ವಿಭಾಗದಿಂದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು 2024 ನೇ ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಗೌರವ ಪ್ರಶಸ್ತಿ ಪುರಸ್ಕøತರಿಗೆ ರೂ. 50 ಸಾವಿರಗಳ ಗೌರವಧನ, ವಾರ್ಷಿಕ ಪ್ರಶಸ್ತಿ ಪುರಸ್ಕøತರಿಗೆ ರೂ. 25 ಸಾವಿರ ಗೌರವ ಧನ ಶಾಲು, ನೆನಪಿನ ಕಾಣಿಕೆ, ಪ್ರಶಸ್ತಿಪತ್ರ, ಹಾರ, ಫಲತಾಂಬೂಲಗಳನ್ನು ಕರ್ನಾಟಕ ಕಲಾ ಪ್ರಶಸ್ತಿಯೊಂದಿಗೆ ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.