ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬೆಂಗಳೂರು: ನೆರೆಪೀಡಿತ ಪ್ರದೇಶಗಳಲ್ಲಿ 500 ಹೊಸ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ನಿರ್ಮಿಸಲು

ಬೆಂಗಳೂರು: ನೆರೆಪೀಡಿತ ಪ್ರದೇಶಗಳಲ್ಲಿ 500 ಹೊಸ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ನಿರ್ಮಿಸಲು

Sat, 17 Oct 2009 03:21:00  Office Staff   S.O. News Service
ಬೆಂಗಳೂರು, ಅ.16: ನೆರೆಪೀಡಿತ ಪ್ರದೇಶಗಳಲ್ಲಿ 500 ಹೊಸ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಶುಕ್ರವಾರ ರಾಜ್ಯ ವಿಪತ್ತು ನಿರ್ವಹಣಾ ಸಮಿತಿ ಸಭೆ ನಡೆಸಿದ ನಂತರ ಏರ್ಪಡಿಸಿದ್ಧ ಅವರು ಮಾತನಾಡಿದರು.

ನರೆ ಪೀಡಿತ ೧೫ ಜಿಲ್ಲೆಗಳಲ್ಲಿ ಒಟ್ಟು ೪೧೩ ಪ್ರಾಥಮಿಕ ಶಾಲೆಗಳು ಸಂಪೂರ್ಣ ನಾಶವಾಗಿದೆ. ಅಲ್ಲದೆ ೬,೮೩೫ ಶಾಲೆಗಳು ಭಾಗಶಃ ಹಾನಿಗೊಳಗಾಗಿದೆ. ಈ ಶಾಲೆಗಳನ್ನು ಸುಮಾರು ೫೯ಕೋಟಿ ರೂ. ವೆಚ್ಚದಲ್ಲಿ ದುರಸ್ತಿಗೊಳಿಸಲಾಗುವುದು. ಅಲ್ಲದೆ ಪರಿಹಾರ ಕಾರ್ಯಕ್ಕಾಗಿ ಸಂಗ್ರಹವಾಗಿರುವ ದೇಣಿಗೆಯಲ್ಲಿ ೪೦ಕೋಟಿ ರೂ. ವೆಚ್ಚದಲ್ಲಿ ೫೦೦ ಹೊಸ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ನೆರೆ ಹಾವಳಿಯಿಂದ ಬೀದರ್, ಗುಲಬರ್ಗಾ, ರಾಯಚೂರು ಹಾಗೂ ಗದಗ್ ಜಿಲ್ಲೆಗಳಲ್ಲಿನ ನೂರಾರು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಆ ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಗುಲಬರ್ಗಾ ಜಿಲ್ಲೆಯ ೫೦೦ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಈಗಾಗಲೆ ೪೦೯ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ರಾಯಚೂರು ಜಿಲ್ಲೆಯ ೨೦೬ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ೨೦೪ ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ  ಕೊಪ್ಪಳ ಜಿಲ್ಲೆಯ ೧೩೯ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಹೀಗೆ ನೆರೆಪೀಡಿತ ಪ್ರದೇಶಗಳಲ್ಲಿ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಮರೋಪಾದಿಯಲ್ಲಿ ಸರಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಯಡಿಯೂರಪ್ಪ ತಿಳಿಸಿದರು.

ನೆರೆಪೀಡಿತ ಪ್ರದೇಶಗಳಲ್ಲಿನ ಸಂತ್ರಸ್ತರಿಗೆ ಪುನರ್‌ವಸತಿ ಸೌಲಭ್ಯ ಒದಗಿಸಿವುದರ ಜೊತೆಗೆ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ವಿವಿಧ ಸೌಲಭ್ಯಗಳನ್ನು ಕೂಡಲೆ ಒದಗಿಸಲು ಮೊದಲ ಆದ್ಯತೆ ನೀಡಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ವಿಪತ್ತು ನಿರ್ವಹಣಾ ನೀತಿ ಜಾರಿ: ‘ರಾಜ್ಯ ವಿಪತ್ತು ನಿರ್ವಹಣಾ ನೀತಿ’ ಜಾರಿಗೊಳಿಸಲು ರಾಜ್ಯ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ನೀತಿಯ ಕುರಿತು ಶೀಘ್ರದಲ್ಲೆ ಕರಡು ಪ್ರತಿಯನ್ನು ಸಿದ್ಧಪಡಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು. 

ರಾಜ್ಯದಲ್ಲಿ ಸಂಭವಿಸುವ ವಿಪತ್ತುಗಳನ್ನು ಎದುರಿಸುವ ಸಲುವಾಗಿ ವಿಪತ್ತು ನೀತಿಯನ್ನು ಜಾರಿಗೊಳಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು ಎಂದು ಅವರು ತಿಳಿಸಿದರು.

ನೆರೆಪೀಡಿತ ಜಿಲ್ಲೆಗಳಲ್ಲಿನ ಸಂತ್ರಸ್ತರಿಗೆ ಪರಿಹಾರ ವಿತರಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈ ಪರಿಹಾರ ಕಾರ್ಯವನ್ನು ಕ್ಷಿಸಲು ಶನಿವಾರ ಹಾಗೂ ಭಾನುವಾರ ರಾಯಚೂರು, ಕೊಪ್ಪಳ, ಗದಗ ಜಿಲ್ಲೆಗಳಿಗೆ ಪ್ರವಾಸ ಮಾಡಲು ನಿರ್ಧರಿಸಿರುವುದಾಗಿ ಯಡಿಯೂರಪ್ಪ ಹೇಳಿದರು.

ಸರಕಾರಿ ನೌಕರರ ಸಂಘಕ್ಕೆ ಕೃತಜ್ಞತೆ: ಕಳೆದ ಜುಲೈ ತಿಂಗಳಿಂದ ಅಕ್ಟೋಬರ್‌ವರೆಗಿನ ರಾಜ್ಯ ಸರಕಾರಿ ನೌಕರರ ಬಾಕಿ ತುಟ್ಟಿ ಭತ್ಯೆಯ ಸುಮಾರು ೧೯೫ ಕೋಟಿ ರೂ. ದೇಣಿಗೆಯನ್ನು ನೆರೆಪೀಡಿತ ಪ್ರದೇಶಗಳಲ್ಲಿನ ಸಂತ್ರಸ್ತರ ಪರಿಹಾರ ಕಾರ್ಯಕ್ಕಾಗಿ  ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಲ್.ಭೈರಪ್ಪ ಹಾಗೂ ಪದಾಧಿಕಾರಿಗಳು ಯಡಿಯೂರಪ್ಪರಿಗೆ ಇದೆ ಸಂದರ್ಭದಲ್ಲಿ ನೀಡಿದರು.

ಸರಕಾರಿ ನೌಕರರ ತುಟ್ಟಿಭತ್ಯೆ ದೇಣಿಗೆಯನ್ನು ಸ್ವೀಕರಿಸಿ ಮಾತನಾಡಿದ ಯಡಿಯೂರಪ್ಪ ರಾಜ್ಯದ ಇತಿಹಾದಲ್ಲೆ ಇದೆ ಮೊದಲ ಬಾರಿಗೆ ಸರಕಾರಿ ನೌಕರರು ಉದಾರವಾಗಿ ದೇಣಿಗೆ ನೀಡಿದ್ದು, ಸರಕಾರ ಹಾಗೂ ಸಂತ್ರಸ್ತರ ಪರವಾಗಿ ಕೃತಜ್ಞತೆ ಸಲಿಸುತ್ತೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಾಸಕ ಹೇಮಚಂದ್ರ ಸಾಗರ ತಮ್ಮ ಶೈಕ್ಷಣಿಕ ಸಂಸ್ಥೆಗಳಿಂದ ೧ಕೋಟಿ ರೂ. ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಸಂತ್ರಸ್ತರ ಪರಿಹಾರಕ್ಕೆ ಯಡಿಯುರಪ್ಪರಿಗೆ ದೇಣಿಗೆಯನ್ನು ನೀಡಿದರು.

ಸಚಿವರಾದ ವಿ.ಎಸ್.ಆಚಾರ್ಯ, ಸುರೇಶ್‌ಕುಮಾರ್, ಬಸವರಾಜ ಬೊಮ್ಮಾಯಿ, ಕರುಣಾಕರ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು

Share: