ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಿಸಿಲಿನ ತಾಪಮಾನ ಏರಿಕೆಯ ನಡುವೆಯೂ ಹಕ್ಕು ಚಲಾಯಿಸಿದ ಮೆತದಾರರು

ಬಿಸಿಲಿನ ತಾಪಮಾನ ಏರಿಕೆಯ ನಡುವೆಯೂ ಹಕ್ಕು ಚಲಾಯಿಸಿದ ಮೆತದಾರರು

Sat, 27 Apr 2024 07:21:23  Office Staff   Vb

ಬೆಂಗಳೂರು: ತಾಪಮಾನ ಏರಿಕೆಯ ನಡುವೆಯೂ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮತದಾನ ಬಿರುಸಿನಿಂದ ಸಾಗಿದೆ. ಶುಕ್ರವಾರ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಬಿಸಿಲು ಹೆಚ್ಚಾಗುವ ಕಾರಣ ಮತದಾರರು ಬೆಳಗ್ಗೆ ಮತಗಟ್ಟೆಗಳಿಗೆ ಬಂದು ಮತದಾನ ಮಾಡಿದರು.

ರಾಜ್ಯದಲ್ಲಿ ಇನ್ನು ಐದು ದಿನಗಳ ಕಾಲ ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿ ಗಾಳಿ ಬೀಸಲಿದೆ. ಜನರು ಮಧ್ಯಾಹ್ನ 12ರಿಂದ 3 ಗಂಟೆಯ ವರೆಗೆ ಮನೆಗಳಿಂದ ಹೊರಗಡೆ ಹೋಗದಂತೆ ಹವಾಮಾನ ಇಲಾಖೆಯು ಗುರುವಾರದಂದು(ಎ.25) ಎಚ್ಚರಿಕೆ ನೀಡಿತ್ತು. ಇದರ ನಡುವೆಯೂ ಮತದಾರರು ತಮ್ಮ ಮತಗಳನ್ನು ಉತ್ಸಾಹದಿಂದ ಚಲಾಯಿಸಿದ್ದಾರೆ. 

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ. ಒಂದು ವಾರದಿಂದ ಬಿಸಿಲಿನ ಪ್ರಮಾಣ ಕಡಿಮೆಯಾಗಿಲ್ಲ. ಹೀಗಾಗಿ ತಾಪಮಾನ ಏರಿಕೆ ನಡುವೆ ಚುನಾವಣೆಯಲ್ಲಿ ಮತದಾನವನ್ನು ಹೆಚ್ಚಿಸಲು ಚುನಾವಣಾ ಆಯೋಗ ಹಲವು ಕ್ರಮಕ್ಕೆ ಮುಂದಾಗಿತ್ತು.

ಬೇಸಿಗೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಎಲ್ಲ ಮತಗಟ್ಟೆಗಳಲ್ಲೂ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿ ಸಲಾಗಿತ್ತು. ಕೆಲ ಲೋಕಸಭಾ ಕ್ಷೇತ್ರಗಳಲ್ಲಿ ಸಖಿ ಮತಗಟ್ಟೆ, ಯುವ ಮತಗಟ್ಟೆ, ವಿಶೇಷ ಚೇತನ ಮತಗಟ್ಟೆ ಸೇರಿದಂತೆ ಇತ್ಯಾದಿ ವಿಷಯಾಧಾರಿತ ಮತಗಟ್ಟೆಗಳನ್ನೂ ಸ್ಥಾಪಿಸಲಾಗಿತ್ತು.


Share: