ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಪಂಚಾಯತ ಕಾರ್ಯದರ್ಶಿ ನೇಮಕಕ್ಕೆ ಆಗ್ರಹಿಸಿ ಸದಸ್ಯರ ಪ್ರತಿಭಟನೆ

ಭಟ್ಕಳ: ಪಂಚಾಯತ ಕಾರ್ಯದರ್ಶಿ ನೇಮಕಕ್ಕೆ ಆಗ್ರಹಿಸಿ ಸದಸ್ಯರ ಪ್ರತಿಭಟನೆ

Wed, 30 Dec 2009 03:13:00  Office Staff   S.O. News Service
ಭಟ್ಕಳ, ಡಿಸೆಂಬರ್ 29: ಕಳೆದ ಒಂಬತ್ತು ತಿಂಗಳುಗಳಿಂದ ಪಂಚಾಯತ ಕಾರ್ಯದರ್ಶಿಗಳಿಲ್ಲದೇ ಪಂಚಾಯತ ಆಡಳಿತ ವ್ಯವಸ್ಥೆಯೇ ಹದಗೆಟ್ಟು ಹೋಗಿದೆ. ಜನಸಾಮಾನ್ಯರ ಯಾವುದೇ ಕೆಲಸವನ್ನೂ ಮಾಡಲು ಸಾಧ್ಯವಾಗದೇ ಅವರ ಆಕ್ರೋಶಕ್ಕೆ ಜನಪ್ರತಿನಿಧಿಗಳು ತುತ್ತಾಗಬೇಕಾಗಿದೆ ಎಂದು ಆರೋಪಿಸಿರುವ ಮಾವಳ್ಳಿ ಗ್ರಾಮಪಂಚಾಯತ ಸದಸ್ಯರು ಪ್ರತಿಭಟನೆ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ.
 
ಈಗ ಹೆಚ್ಚಿನ ಹೊರೆ ಹೊತ್ತು ಮಾವಳ್ಳಿ ಗ್ರಾಮಪಂಚಾಯತಕ್ಕೆ ಬಂದಿರುವ ಕಾರ್ಯದರ್ಶಿ ಅತ್ತಿಯವರಿಗೆ ಈಗಾಗಲೇ ಮೂರು ಪಂಚಾಯತಗಳ ಜವಾಬ್ದಾರಿಯಿದ್ದು, ಮಾವಳ್ಳಿ ಪಂಚಾಯತದ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಕಳೆದ ಒಂಬತ್ತು ತಿಂಗಳುಗಳಿಂದ ಸಾಮಾನ್ಯ ಸಭೆಯೇ ಜರುಗಿಲ್ಲ. ಇದು ಕಾನೂನು ತೊಡಕಿಗೂ ಆಹ್ವಾನವನ್ನು ನೀಡುತ್ತಿದ್ದು, ಪಂಚಾಯತಕ್ಕೇ ಬಾಗಿಲು ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆಯನ್ನು ಆಲಿಸುವವರೆಗೂ ತಾವು ಕದಲುವುದಿಲ್ಲ ಎಂದು ಪಟ್ಟು ಹಿಡಿದರು. 
 
ಮೂರು ದಿನಗಳಲ್ಲಿ ಪರ್ಯಾಯ ವ್ಯವಸ್ಥೆ: ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ಸೂಚನೆಯನ್ನು ಅರಿತ ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಉದಯ ನಾಯ್ಕ, ಮಾವಳ್ಳಿ ಗ್ರಾಮಪಂಚಾಯತಕ್ಕೆ ಭೇಟಿ ನೀಡಿ ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಲು ಯತ್ನಿಸಿದರು. ಸರಕಾರ ಈಗಾಗಲೇ ಗ್ರೇಡ್ ೧ ಕಾರ್ಯದರ್ಶಿಗಳ ನೇಮಕಕ್ಕೆ ಕ್ರಮ ಕೈಗೊಂಡಿದ್ದು, ಸರಕಾರದ ತೀರ್ಮಾನಕ್ಕೆ ಕಾಯಲಾಗುತ್ತಿದೆ. ಆದರೆ ಇಲ್ಲಿಯ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಎರಡ್ಮೂರು ದಿನಗಳಲ್ಲಿ ಬೇರೊಬ್ಬ ಕಾರ್ಯದರ್ಶಿಯವರನ್ನು ಡೆಪ್ಯೂಟ್ ಮಾಡಲಾಗುವುದು ಎಂಬ ಭರವಸೆ ನೀಡಿದರು. ನಂತರ ಸದಸ್ಯರು ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಪಂಚಾಯತ ಅಧ್ಯಕ್ಷೆ ನಾಗರತ್ನ ಪಡಿಯಾರ, ಉಪಾಧ್ಯಕ್ಷ ದೇವಿದಾಸ ಗುಡಿಗಾರ, ಸದಸ್ಯರಾದ ಈಶ್ವರ ದೊಡ್ಮನೆ, ನಾಗಪ್ಪ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.


ಚಿತ್ರ, ವರದಿ: ವಸಂತ ದೇವಾಡಿಗ, ಭಟ್ಕಳ


Share: