ಇಂದು ರಾಜ್ಯೋತ್ಸವ ಸಮಾರಂಭದಲ್ಲಿ ಬೆಂಗಳೂರಿನ ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಬಿಡುಗಡೆ
ಬೆಂಗಳೂರು, ನವೆಂಬರ್ 1: ಜನಮನದಲ್ಲಿ ಹಸಿರಾಗಿರುವ ಡಾ. ರಾಜ್ ನೆನಪನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಡಾ. ರಾಜ್ ಕುಮಾರ್ ರವರ ಭಾವಚಿತ್ರವಿರುವ ಅಂಚೆಚೀಟಿಯೊಂದನ್ನು ಇಂದು ಬಿಡುಗಡೆ ಮಾಡಲಾಗುವುದು.
ವಿಧಾನ ಸೌಧದ ಬಾಂಕ್ವೆಟ್ ಹಾಲ್ ಸಭಾಂಗಣದಲ್ಲಿ ಬೆಳಿಗ್ಗೆ ಹನ್ನೊಂದು ಘಂಟೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅಂಚೆಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ.
ಐದು ರೂಪಾಯಿ ಮುಖಬೆಲೆಯ ಈ ಅಂಚೆಚೀಟಿ ನವೆಂಬರ್ ೩ ರಿಂದ ಎಲ್ಲಾ ಅಂಚೆಕಛೇರಿಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಅಂತೆಯೇ ಈ ಅಂಚೆಚೀಟಿಯ ಬಿಡುಗಡೆ ಸಮಾರಂಭವನ್ನು ಸ್ಮರಣೀಯವನ್ನಾಗಿಸಲು ಬೆಂಗಳೂರು, ಧಾರವಾಡ, ಮಂಗಳೂರು ಮತ್ತು ಮೈಸೂರುಗಳಲಿ ಕರ್ನಾಟಕದ ಕಲೆ ಮತ್ತು ಸಂಸ್ಕೃತಿ ಹೆಸರಿನಲ್ಲಿ ವಸ್ತುಪ್ರದರ್ಶನ ಏರ್ಪಡಿಸಲಗಿದೆ. ಬೆಂಗಳೂರಿನ ಪ್ರಧಾನ ಅಂಚೆಕಛೇರಿಯಲ್ಲಿ ನವೆಂಬರ್ ೩ ರಿಂದ ೧೦ ರವರೆಗೆ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ.
ಅಂಚೆಚೀಟಿಯ ಹೊರತಾಗಿ ಇದೇ ಚಿತ್ರವಿರುವ ಟೀಶರ್ಟುಗಳು, ಕೀಚೈನುಗಳು, ಟೊಪ್ಪಿಗಳೂ ಡಾ. ರಾಜ್ ಅಭಿಮಾನಿಗಳ ಪಾಲಿಗೆ ಲಭ್ಯವಾಗಲಿವೆ.