ಬೆಂಗಳೂರು,ಜನವರಿ 15:ಸುಗ್ರೀವಾಜ್ಞೆಯ ಮೂಲಕ ಆಕ್ರಮ ಸಕ್ರಮ ಯೋಜನೆಯನ್ನು ಜಾರಿಗೊಳಿಸುವ ಸರ್ಕಾರದ ಪ್ರಯತ್ನಕ್ಕೆ ರಾಜ್ಯಪಾಲರ ಬೆಂಬಲ ದೊರೆಯದ ಹಿನ್ನೆಲೆಯಲ್ಲಿ ರಾಜ್ಯದ ೧೭ ಲಕ್ಷ ಕುಟುಂಬಗಳಿಗೆ ನೋವಾಗಿದೆ ಎಂದು ಸಾರಿಗೆ ಸಚಿವ ಆರ್.ಅಶೋಕ್ ಇಂದಿಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು, ಆಕ್ರಮ ಸಕ್ರಮ ಯೋಜನೆ ಜಾರಿಗೆ ಬಂದಿದ್ದರೆ ಬೆಂಗಳೂರಿನ ಏಳು ಲಕ್ಷ ಕುಟುಂಬಗಳು ಹಾಗೂ ಬೇರೆ ಕಡೆಗಳ ಹತ್ತು ಲಕ್ಷ ಕುಟುಂಬಗಳ ಜನರ ಆತಂಕ ನಿವಾರಣೆಯಾಗುತ್ತಿತ್ತು ಎಂದಿದ್ದಾರೆ.
ಬ್ಯಾಂಕುಗಳಿಂದ ಸಾಲ ಪಡೆಯುವುದರಿಂದ ಹಿಡಿದು ಹಲವು ವಿಷಯಗಳಲ್ಲಿ ತೊಂದರೆ ಅನುಭವಿಸುತ್ತಿರುವ ಈ ಕುಟುಂಬಗಳು ಆಕ್ರಮ ಸಕ್ರಮ ಯೋಜನೆ ಜಾರಿಗೆ ಬಂದಿದ್ದರೆ ಆತಂಕದಿಂದ ಹೊರಬರುತ್ತಿದ್ದವು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ವಿಷಾದಿಸಿದರು.
ನಾವೇನೂ ಹೊಸತಾಗಿ ಕಾಯ್ದೆ ಮಾಡಿರಲಿಲ್ಲ.ಈ ಹಿಂದೆ ಎಸ್.ಎಂ.ಕೃಷ್ಣ ಸರ್ಕಾರ ಜಾರಿಗೊಳಿಸಿದ ಕಾನೂನಿಗೆ ಹೊಸತಾಗಿ ಕೆಲವು ಅಂಶಗಳನ್ನು ಸೇರಿಸಿ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದೆವು.
ಅಂದ ಹಾಗೆ ಈ ಮಸೂದೆಯ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚಿಸುವ ಇಚ್ಚೆ ಸರ್ಕಾರಕ್ಕಿತ್ತು.ಆದರೆ ಪ್ರತಿಪಕ್ಷಗಳು ಇಂತಹ ಚರ್ಚೆಗೆ ಅವಕಾಶವನ್ನೇ ನೀಡಲಿಲ್ಲ.ಹೀಗಾಗಿ ಸುಗ್ರೀವಾಜ್ಞೆಯ ಮೂಲಕ ಇದನ್ನು ಜಾರಿಗೊಳಿಸಲು ಸರ್ಕಾರ ಮುಂದಾಯಿತು ಎಂದು ಸಮರ್ಥಿಸಿಕೊಂಡರು.
ಸುಗ್ರೀವಾಜ್ಞೆ ಮೂಲಕ ಒಂದು ಕಾನೂನನ್ನು ಜಾರಿಗೊಳಿಸಲು ಸಂವಿಧಾನಬದ್ಧವಾಗಿ ನಮಗೆ ಹಕ್ಕಿದೆ. ಹಿಂದೆ ಕಾಂಗ್ರೆಸ್, ದಳ ಸರ್ಕಾರಗಳಿದ್ದಾಗ ಇಂತಹ ನೂರಾರು ಕಾನೂನುಗಳನ್ನು ಜಾರಿಗೆ ತರಲಾಗಿದೆ.
ಆದರೆ ಈಗ ನಾವು ತರಾತುರಿಯಲ್ಲಿ ಆಕ್ರಮ ಸಕ್ರಮ ಯೋಜನೆಯನ್ನು ಜಾರಿಗೊಳಿಸಲು ಹೊರಟಿದ್ದೇವೆ ಎಂದು ಪ್ರತಿಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಇದು ಸರಿಯಲ್ಲ. ಇದಕ್ಕಾಗಿ ಸತತ ಆರು ತಿಂಗಳುಗಳಿಂದ ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ.
ರಾಜ್ಯಪಾಲರು ಈಗ ಸದರಿ ಮಸೂದೆಯನ್ನು ಹಿಂದಕ್ಕೆ ಕಳುಹಿಸಿರುವುದರಿಂದ ಮುಂದೇನು ಮಾಡಬೇಕು? ಎಂಬ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದರು.
ಗ್ರಾಮಾಂತರ ಸಾರಿಗೆಯನ್ನು ಉತ್ತಮ ಪಡಿಸಲು ನಗರ ಪ್ರದೇಶಗಳಿಗೆ ನರ್ಮ್ ಯೋಜನೆಯಡಿ ಒದಗಿಸಿದಂತೆ ಗ್ರಾಮೀಣ ಪ್ರದೇಶಗಳಿಗೂ ಹೆಚ್ಚಿನ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಇದೇ ಸಂಧರ್ಭದಲ್ಲಿ ಅವರು ಪಶ್ನೆಯೊಂದಕ್ಕೆ ಉತ್ತರ ನೀಡಿದರು.
ಹಾಸನದಲ್ಲಿ ಚಾಲನಾ ತರಬೇತಿ ನೀಡುವ ಶಾಲೆಯನ್ನು ಇದೇ ತಿಂಗಳ ಹತ್ತೊಂಭತ್ತರಂದು ಉದ್ಘಾಟಿಸುವುದಾಗಿ ನುಡಿದ ಅವರು,ಸರ್ಕಾರೀ ಹಾಗೂ ಖಾಸಗಿ ಚಾಲಕರು ಇಲ್ಲಿ ವಸತಿ ನಿಲಯದ ಸೌಲಭ್ಯ ಪಡೆದು ತರಬೇತಿ ಪಡೆಯಬಹುದು. ಇಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಲೈಲ್ಯಾಂಡ್, ಟಾಟಾ ಕಂಪನಿ ಸೇರಿದಂತೆ ಹಲವು ಸಂಸ್ಥೆಗಳು ಮುಂದೆ ಬಂದಿವೆ ಎಂದು ಅವರು ಸ್ಪಷ್ಟ ಪಡಿಸಿದರು.
ಖಾಸಗಿಯವರಿಗೆ ಒದಗಿಸಿದ ಮಾರ್ಗಗಳಲ್ಲಿ ಇದೀಗ ಸರ್ಕಾರ ಕೂಡಾ ಬಸ್ಸುಗಳನ್ನು ಬಿಡುತ್ತಿದ್ದು ಸ್ಪರ್ಧಾತ್ಮಕ ದರದಲ್ಲಿ ಪೈಪೋಟಿ ನಡೆಯಲಿ ಎಂದು ಬಯಸಿದೆಯೆಂದೂ ಅವರು ಹೇಳಿದರು.