೧೭ ವರ್ಷಗಳ ಬಳಿಕ ಲಿಬಾರ್ಹನ್ ಆಯೋಗ ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದದ ಕುರಿತ ವರದಿಯನ್ನು ಮಂಡಿಸಿದೆ. ಈ ಆಯೋಗದ ವರದಿ ಪ್ರಕಟಗೊಂಡಾಗ ಸೋರಿಕೆ ಎಂಬ ಹಣೆಪಟ್ಟಿ ಕಟ್ಟುವ ಮೂಲಕ ಸಂಘಪರಿವಾರ ಅಟಲ್‌ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಆಡ್ವಾಣಿ, ಮುರಳಿ ಮನೋಹರ ಜೋಶಿಯನ್ನು ಕಾಪಾಡುವ ಕಸರತ್ತು ಮಾಡಿತು ಎನ್ನಬಹುದು. ಯಾಕೆಂದರೆ ಲಿಬಾರ್ಹನ್ ಆಯೋಗದ ವರದಿಯಲ್ಲಿ ಇವರು ಆರೋಪಿ ಸ್ಥಾನದಲ್ಲಿರುವುದ್ದರಿಂದ ಬಿಜೆಪಿ ನೇತೃತ್ವದ ಸಂಘಪರಿವಾರಕ್ಕೆ ಇವರನ್ನು ಕಾಪಾಡುವುದು, ಆರೋಪ ಸ್ಥಾನದಿಂದ ಮುಕ್ತಗೊಳಿಸುವುದು ಕರ್ತವ್ಯವಲ್ಲವೇ? ಹಾಗಾಗಿ ತಮ್ಮ ಮುಖವಾಣಿಯ ಪತ್ರಿಕೆಯಲ್ಲಿ ಮುಖಪುಟದಲ್ಲಿ ಲಿಬಾರ್ಹನ್ ಸೋರಿಕೆ ಕೈವಾಡ ಎಂಬ ತಲೆಬರೆಹದ ಮೂಲಕ ಅಯೋಧ್ಯಾ ಕಾಂಡವನ್ನು ಬಿಂಬಿಸಲು ಪ್ರಯತ್ನಿಸಿತು. ಹಲವಾರು ವರ್ಷಗಳ ಬಳಿಕ ಪ್ರಕಟಗೊಂಡದ್ದರಿಂದ ಈ ವರದಿಯು ಲೋಕಸಭೆಯಲ್ಲಿ ಮಂಡನೆಯಾದಾಗ ಭಾರಿ ಕೋಲಾಹಲವನ್ನುಂಟು ಮಾಡಿತೆಂಬುದು, ನಿಜ. ಆದರೆ ಈ ವರದಿ ಅಷ್ಟೇ ಕೋಲಾಹಲದ ರೀತಿಯಲ್ಲಿದೆಯೆಂಬುದು ಯಾರಿಗೆ ಗೊತ್ತು?

ಬರಡು ಭೂಮಿಯಲ್ಲಿ ನೀರಿನ ಸೆಳೆತವನ್ನು ಹುಡುಕಾಡಿದಂತೆ ಪದೇ ಪದೇ ಬಾಬರಿ-ರಾಮಜನ್ಮಭೂಮಿ ಬಗ್ಗೆ ವಿವಾದ ಎತ್ತಿ ಎರಡು ಧರ್ಮಗಳ ನಡುವೆ ದ್ವೇಷದ ಹರಿವನ್ನು ಹರಿಸಿದೆಯೇ ಹೊರತು ಸಮರ್ಪಕವಾದ ಅಂಶಗಳು ಇವರೆಗೆ ಪ್ರಕಟಗೊಂಡಿಲ್ಲ ಎನ್ನಬಹುದು. ಈ ಎರಡು ಧಾರ್ಮಿಕ ಕೇಂದ್ರಗಳನ್ನು ಮುಂದಿಟ್ಟುಕೊಂಡು ನಡೆಸಲಾಗುತ್ತಿರುವ ದ್ವೇಷದ ಹೋರಾಟಕ್ಕೆ ನಾಂದಿ ಹಾಡಬೇಕೆಂದರೆ, ವರದಿಯಲ್ಲಿ ತಿಳಿಸಿರುವ ಅನುಮಾನಸ್ಪಾದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಬೇಕು. ಇವರು ರಾಜಕಾರಣಿಗಳಲ್ಲಿ ಪ್ರಭಾವಿ ಅಂದುಕೊಂಡು ನೈಜ ಆರೋಪಿಗಳಿಗೆ ಆರೋಪ ಸ್ಥಾನ ನೀಡಲು ಹಿಂಜರಿಯಬಾರದು. ಯಾಕೆಂದರೆ ಇದೊಂದು ಮುಂದೆ ದೊಡ್ಡ ದುರಂತವನ್ನೇ ಎದುರು ಸೃಷ್ಟಿಸಬಹುದು. ೯ ಕೋಟಿ ಜನತೆಯ ತೆರಿಗೆ ಹಣದ ಮೂಲಕ ೧೭ ವರ್ಷಗಳನ್ನು ಸವೆಸಿ ಇದೀಗ ಹೊಸ ಮಗುವಿನ ರೂಪದಲ್ಲಿ ಮಂಡನೆಯಾಗಿರುವ ಲಿಬಾರ್ಹನ್ ಆಯೋಗದ ವರದಿ ಎಷ್ಟರ ಮಟ್ಟಿಗೆ ಸತ್ಯತೆಯನ್ನು ಒಳಗೊಂಡಿದೆ ಎಂಬುದನ್ನು ಮನಗಾಣಬೇಕಾಗಿದೆ. ಬಾಬರಿ ಮಸೀದಿ ಮುಸ್ಲಿಮರ ಹಾಗೂ ರಾಮಜನ್ಮಭೂಮಿ ಹಿಂದೂಗಳೆಂದು ಹೇಳಿ ಯಾರ ಪರ ನಿಲುವು ನೀಡಲು ಸಾಧ್ಯವಾಗದೇ, ಸದ್ದಿಲ್ಲದೇ ಈ ವಿವಾದಕ್ಕೆ ಅಂತ್ಯ ಕಾಣಿಸುವ ಯೋಚನೆ ಕೇಂದ್ರ ಸರಕಾರದ್ದಾದರೆ ಅದು ಹೇಡಿತನವಾಗುತ್ತದೆ.

ಬಾಬರಿ ಎಂಬುದು ಮುಸ್ಲಿಮರಿಗೆ ಸಿಗಬೇಕೆಂದರೆ ಅದು ಮುಸ್ಲಿಮರಿಗೆ ಸಿಗಬೇಕಾಗಿರುವುದು ನ್ಯಾಯಯುತ. ಅದಕ್ಕಾಗಿ ವಿವಾದವನ್ನು ಮತ್ತೆ ಮತ್ತೆ ಉದ್ದುದ್ದ ಎಳೆಯುತ್ತಾ ಹೋಗಿ ಧರ್ಮಗಳ ನಡುವೆ ವಿವಾದಗಳನ್ನು ಸೃಷ್ಟಿಸುವ ಮೂಲಕ ಸಮಾಜದಲ್ಲಿ ಅತಂತ್ರತೆಯನ್ನು ಸೃಷ್ಟಿಸುವುದು ಎಷ್ಟು ಸರಿ? ಈ ವರದಿಯ ನೆಪದಲ್ಲಿ ಹಲವಾರು ತೆರಿಗೆ ಹಣ ಪೋಲಾಗಿರುವುದು ಒಂದೆಡೆಯಾದರೆ, ಎರಡು ಧರ್ಮಿಯರ ನಡುವೆ ಅಷ್ಟೇ ವೈಮನಸ್ಸು ತಲೆದೋರಿದೆ ಎಂಬುದು ನಿಜ. ನ್ಯಾಯಮೂರ್ತಿ ಎಂ.ಎಸ್.ಲಿಬರ್ಹಾನ್ ನೇತೃತ್ವದ ಆಯೋಗ ಈ ವಿವಾದದ ಕುರಿತಾದ ವರದಿಯ ರಚನೆಯಲ್ಲಿ ಎಡವಿದೆಯೇ ಎಂಬುದು ಮುಖ್ಯವಾಗುವುದಕ್ಕಿಂತ ಇದು ನೀಡಿರುವ ವರದಿಯಲ್ಲಿನ ಆರೋಪಿಗಳು ಇವತ್ತು ಆರೋಪದಿಂದ ಮುಕ್ತವಾಗಿದ್ದರೆ ಎಂದರೆ ಏನೆನ್ನಬೇಕು? ಬೆಟ್ಟವನ್ನು ಅಗೆದು ಇಲಿಯನ್ನು ಹಿಡಿಯುವ ಕೆಲಸ ಆಗಿದೆಯೇ? ನಾವೇ ತೀರ್ಮಾನಿಸಬೇಕು. ಅದೇನೆ ಇರಲಿ, ಕಾಂಗ್ರೆಸ್ಸ್‌ಗೆ ಈ ವಿವಾದದ ಆರೋಪಿಗಳನ್ನು ಗುರುತಿಸಿ ಮತ್ತೆ ವಿವಾದಕ್ಕೆ ಕ್ರಾಂತಿಕಾರ ಜೀವ ನೀಡುವುದು ಇಷ್ಟವಿಲ್ಲವೆನಿಸದ ಅಂಶವೆನಿಸುತ್ತದೆ.

ಯಾರಿಗೂ ನೋವಾಗದ, ಗೊತ್ತಾಗದ ರೀತಿಯಲ್ಲಿದೆ ಈ ವರದಿ. ನಿಜವಾಗಿಯೂ ಜೋಶಿ, ವಾಜಪೇಯಿ, ಆಡ್ವಾಣಿಯ ಜೊತೆಗೆ ಉಮಾಭಾರತಿ ಕೈ ಜೋಡಿಸಿದ್ದಾಳೆಯೇ? ಇದೊಂದು ಪ್ರಶ್ನೆ ಈ ವಿವಾದದ ಹಾದಿಯಲ್ಲಿದ್ದು, ಆರೋಪಿಗಳ ನಡುವೆ ಯಾರು ನೈಜ ಆರೋಪಿಗಳೆಂದು ಸಂಶಯಿಸುವಂತಾಗಿದೆ. ಹೀಗಾಗಿ ಕಾಣಿಕೆ ಸಲ್ಲಿಸಿದಂತಿರುವ ಈ ವರದಿಯ ಅಂಶದಲ್ಲಿ ಸತ್ಯ ಸಂಗತಿ ಇದೆಯೆಂಬುದು ನಿಜ. ಆದರೆ ಕೇಂದ್ರ ಸರಕಾರ ಅರ್ಥ ಮಾಡುತ್ತಿಲ್ಲ. ರಾಮ ನಾಮ ಜಪಿಸುವ ವ್ಯಕ್ತಿಗಳು ,ರಾಮನ ಮೇಲೆ ರಾಮನಿರ್ಮಾಣ ಮಾಡುವ ಪ್ರತಿಜ್ಞೆ ಮಾಡಿದವರು ಮಾಡಿದ್ದೇನು ಗೊತ್ತೇ? ೬ ವರ್ಷಗಳ ಕಾಲ ಆಡಳಿತ ನಡೆಸಿದ್ದು. ಇದರೆಡೆಯಲ್ಲಿ ಮಂದಿರದ ನಿರ್ಮಾಣ ಮಾಡಲು ಮುಸ್ಲಿಮರೊಂದಿಗೆ ನಡೆಸಿದ ಕಾಳಗವನ್ನು ನೋಡಿ ಬೇಸತ್ತ ಜನರು ಬಿಜೆಪಿಯ ಆತ್ಮವಂಚನೆಯ ವ್ಯಕ್ತಿತ್ವವನ್ನು ನೋಡಿದ್ದಾರೆ. ಹೀಗಾಗಿ ಇವತ್ತು ರಾಮಜನ್ಮಭೂಮಿ ಹೋರಾಟಕ್ಕೆ ಕಾವು ನೀಡಲು ಸ್ವತಹ ಹಿಂದೂಗಳೇ ಮುಂದೆ ಬರುತ್ತಿಲ್ಲ. ಹೀಗಾಗಿ ಯಾರ ಸಹಾಯದಲ್ಲಿ ರಾಮಜನ್ಮಭೂಮಿ ಬಗ್ಗೆ ಹೋರಾಟ ಮಾಡಲು ಸಾಧ್ಯವಿಲ್ಲವೆಂಬ ನಿಜ ಗೊತ್ತಾದ ಮೇಲೆ ಸುಮ್ಮನಿರುವ ಬಿಜೆಪಿ ನೇತೃತ್ವ ಪಡೆ ಈಗ ಲಿಬಾರ್ಹನ್ ತನ್ನ ವರದಿಯಲ್ಲಿ ತಿಳಿಸಿರುವ ತಮ್ಮ ಮಹಾನ್ ನಾಯಕರನ್ನು ಆರೋಪಿ ಸ್ಥಾನದಿಂದ ಮುಕ್ತಗೊಳಿಸುವ ಪ್ರಯತ್ನ ಮಾಡುವ ಪ್ರಯತ್ನದಲ್ಲಿದ್ದಾರೆ. ಈ ನಡುವೆ ಯಾರ ಚಡ್ಡಿ ಜಾರಿ ಬೀಳುತ್ತದೆಯೋ ಗೊತ್ತಿಲ್ಲ. ಆರ್‌ಎಸ್ಸೆಸ್ಸ್‌ನ ಚಡ್ಡಿಯಂತೂ ಬೀಳುವುದು ಗ್ಯಾರಂಟಿ.

ಬಾಬರಿ ಮಸೀದಿ ಹಾಗೂ ರಾಮಜನ್ಮಭೂಮಿ ಕುರಿತಾದ ವಿವಾದದಲ್ಲಿ ಮುಖ್ಯವಾಗಿ ಗುರುತಿಸಲ್ಪಡುವ ರಾಜೀವ್ ಗಾಂಧಿ ಮತ್ತು ಪಿ.ವಿ.ನರಸಿಂಹರಾವ್‌ರವರು ಸಮರ್ಪಕವಾಗಿ ತಮ್ಮ ಕಾರ್ಯವನ್ನು ನಿಭಾಯಿಸಿದ್ದರೆ ಇವತ್ತು ಬಾಬರಿ ಮಸೀದಿ ಧ್ವಂಸವಾಗುತ್ತಿರಲಿಲ್ಲ. ಹಾಗೆಯೇ ಮುಸ್ಲಿಮರಿಂದ ವಿರೋಧಕ್ಕೊಳಪಟ್ಟ ನರಸಿಂಹರಾವ್ ರವರು ಉತ್ತರ ಪ್ರದೇಶವನ್ನು ಹಾಗೂ ತನ್ನ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು. ಹೀಗಾಗಿ ಕರ್ತವ್ಯ ಲೋಪದಿಂದ ಧ್ವಂಸಗೊಂಡಂತಹ ಈ ಕಟ್ಟಡವು ಇವತ್ತು ಪುನರ್ ಸ್ಥಾಪಿಸಲು ವಿವಾದದ ನಡುವೆ ಆಟವಾಡಲು ಕಾರಣರಾರು? ಇವರೇ ಎಂದು ದೇಶದ ಪ್ರಜ್ಞಾವಂತ ನಾಗರಿಕರು ಒಪ್ಪಿಕೊಳ್ಳುತ್ತಾರೆ. ಹೀಗಾಗಿ ೧೯೮೩ರಲ್ಲಿ ವಿಶ್ವ ಹಿಂದೂ ಪರಿಷತ್ತ್ ಆರಂಭಿಸಿದ ರಾಮಮಂದಿರ ನಿರ್ಮಾಣ ಚಳವಳಿಯ ಜೊತೆಗೆ ಬಿಜೆಪಿಯು ೧೯೮೪ ರಲ್ಲಿ ಜೊತೆಗೂಡಿತು. ಆ ಹೊತ್ತಿನಲ್ಲಿ ಬಾಬರಿ ಮಸೀದಿಯ ಗೇಟ್ ಹೊರತೆಗೆದು ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ನೀಡಬೇಕೆಂದು ಫೈಜಾಬಾದ್ ನ್ಯಾಯಾಲಯ ಆದೇಶ ನೀಡಿತು.ಈ ಆದೇಶವನ್ನ ವಿರೋಧಿಸಿದ ಮುಸ್ಲಿಮರು ಬಾಬರಿ ಮಸೀದಿ ಕ್ರಿಯಾ ಸಮಿತಿ ರಚಿಸಿಕೊಂಡರು. ಆವಾಗ ಅಧಿಕಾರದಲ್ಲಿದ್ದದ್ದು, ಕಾಂಗ್ರೆಸ್ಸ್ ನೇತೃತ್ವದ ಸರಕಾರ. ಉತ್ತರಪ್ರದೇಶದಲ್ಲಿ ಈ ಆದೇಶದ ವಿರುದ್ಧ ಕೆಲ ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಮತ್ತು ಯುಪಿಯ ಮುಖ್ಯಮಂತ್ರಿ ರ್‌ಬಹದ್ದೂರ್ ಸಿಂಗ್‌ರ ಮೇಲೆ ಈ ಕುರಿತು ಆರೋಪ ಹೊರಿಸಲಾಗಿತ್ತು.

ಮಾತ್ರವಲ್ಲ, ಈ ಹೊತ್ತಿಗೆ ಬಾಬರಿ ಮಸೀದಿ ಬಳಿ ದೇವಸ್ಥಾನ ನಿರ್ಮಾಣಕ್ಕೆ ರಾಜೀವ್ ಗಾಂಧಿಯವರು ಅನುಮತಿ ನೀಡಿದ್ದನ್ನು , ಈ ಸಮಾರಂಭಕ್ಕೆ ಬೂಟಾ ಸಿಂಗ್‌ರನ್ನ ಕಳುಹಿಸಿದ್ದು, ೧೯೮೯ರ ಲೋಕಸಭಾ ಚುನಾವಣೆ ಪ್ರಚಾರವನ್ನು ಅಯೋಧ್ಯೆಯಿಂದಲೇ ಪ್ರಾರಂಭಿಸಿದ್ದು, ಇವೆಲ್ಲ ಮುಸ್ಲಿಮರಿಗೆ ಕಾಂಗ್ರೆಸ್ಸ್ ವಿರುದ್ಧ ಕೋಪಗೊಳ್ಳುವಂತೆ ಮಾಡಿತು. ಹಾಗೆಯೇ ಇದನ್ನು ನಾವು ಈಗ ಚರ್ಚೆಮಾಡುವುದು ವಿವಾದಕ್ಕೆ ಮತ್ತೆ ಜೀವ ಕೊಟ್ಟಂತಾಗುತ್ತದೆ. ಲಿಬಾರ್ಹನ್ ಆಯೋಗವು ತನ್ನ ವರದಿಯಲ್ಲಿ ರಾಜೀವ್ ಗಾಂಧಿಗಿಂತ ಮಾಜಿ ಪ್ರಧಾನಿ ಗುಲ್ಜರಿಲಾಲ್ ನಂದಾರವರನ್ನು ಕರೆ ತಂದು ಹಿಂದೂತ್ವವಾದಿ ಇವರ ಮೂಲಕ ಸಹ ಹರಿದಾಡಿತು ಎಂಬ ಹೊಸ ಅಂಶವನ್ನು ಸೇರಿಸಿ ರಾಜೀವ್ ಗಾಂಧಿಯನ್ನು ಆರೋಪ ಸ್ಥಾನದಿಂದ ಮುಕ್ತಗೊಳಿಸಲು ಪ್ರಯತ್ನಿಸುತ್ತಿದೆಯೇ ಎಂಬುದು ಚರ್ಚಾರ್ಹ ಪ್ರಶ್ನೆ. ಯಾಕೆಂದರೆ ಇವರಿಗೆ ಈ ವಿವಾದಕ್ಕೆ ಸಂಬಂಧವಿಲ್ಲದ ಕಾರಣ ರಾಜೀವರ ಕೊಡುಗೆಯನ್ನು ಮರೆಸಿಬಿಟ್ಟಿದ್ದಾರೆ. ಇಲ್ಲಿ ಕಾಂಗ್ರೆಸ್ಸ್‌ಗೆ ಮುಸ್ಲಿಮರ ಓಟ್ ಬ್ಯಾಂಕ್ ಮುಖ್ಯವಾಗುತ್ತದೆ ಎಂಬ ಮಾತು ತಲೆದೂರಿದೆ.

ಲಿಬಾರ್ಹನ್ ಹೊಸತಾದ ಪತ್ತೇದಾರಿಕೆ ಅಂಶಗಳನ್ನು ಕಂಡು ಹಿಡಿದಿಲ್ಲ. ನೀಡಿರುವಂತಹ ಅಂಶಗಳಲ್ಲಿ ಇದೊಂದು ಪೂರ್ವಯೋಜಿತ, ಆರ್‌ಎಸ್ಸೆಸ್ಸ್‌ನ ಕೈವಾಡವಿದೆ ಎಂಬ ಅಂಶಗಳು ಜನರಿಗೆ ಗೊತ್ತಿರುವಂತಹದ್ದು. ಹಾಗಾಗಿ ಇದು ಕೇವಲ, ೧೦೨೯ ಪುಟಗಳನ್ನು ಮತ್ತೆ ಹೊಸ ಪುಟದಲ್ಲಿ ಮುದ್ರಿಸಿವೆ. ಆದರೆ ಸೂಚಿಸಿರುವ ಆರೋಪಿಗಳನ್ನು ಬಂಧಿಸುವ , ಶಿಕ್ಷೆ ಕೊಡಿಸುವ ಯಾವ ಪ್ರಯತ್ನ ನಡೆಯುತ್ತಿಲ್ಲ. ಇದರೆಡೆಯಲ್ಲಿ ಬಿಜೆಪಿ ಇದೊಂದು ಅನೀರಿಕ್ಷಿತ ಘಟನೆಯೆಂದು, ಆಗಾಗ ಭಾಷಣ ಬಿಗಿದು, ಆ ವಿವಾದದ ಬೆನ್ನು ತಿರುಗುವಂತೆ ಮಾಡುತ್ತಿದ್ದಾರೆ. ೧೯೯೨ರ ಡಿಸೆಂಬರ್ ೨ ರ ಈ ಘಟನೆಗೆ ಇವತ್ತಿಗೆ ಸಮರ್ಪಕವಾದ ನಿರ್ಣಯೊಂದನ್ನು ಕೈಗೊಳ್ಳಲು ಸಾಧ್ಯವಾಗಿಲ್ಲವೆಂಬುದಕ್ಕೆ ಯಾರು ಹೊಣೆ? ಕಾಂಗ್ರೆಸ್ಸ್ ಮತ್ತು ಬಿಜೆಪಿಯೊಳಗಿನ ಸಹಮತ ಕಾರಣವೇ? ಲಿಬಾರ್ಹಾನ್ ಆಯೋಗ ಇವರೆಗೆ ೬೮ ಆರೋಪಿಗಳನ್ನು ಗುರುತಿಸಿದೆ. ೧೭ ವರ್ಷಗಳ ಬಳಿಕ ಗುರುತಿಸಿದ್ದು ಅಷ್ಟೇ. ಹಾಗಾಗಿ ಮೊನ್ನೆಯವರೆಗೂ ತನಿಖೆಯ ಹಾದಿ ನಿಧಾನವಾಗಿತ್ತು ಎಂಬುದು ತಿಳಿಯುತ್ತದೆ. ಕೆಲ ಸಾಮಾನ್ಯವೆನಿಸುವ ಸಬೂಬುಗಳನ್ನು ನೀಡುವ ಮೂಲಕ ಲಿಬರ್ಹಾನ್ ತನ್ನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿದೆ.ನರಸಿಂಹರ ಕರ್ತವ್ಯ ಭ್ರಷ್ಟತೆಯನ್ನು ಹಗಲು ಕನಸಿಗೆ ಹಾಗೂ ಇವರು ಸಂಘಪರಿವಾರದ ಆಶ್ವಾಸನೆಯನ್ನು ನಂಬಿ ಕೆಟ್ಟರು ಎಂಬ ಸಬೂಬುಗಳು ತೆರೆದುಕೊಳ್ಳುತ್ತವೆ. ಇದಕ್ಕೆ ನ್ಯಾಯಮೂರ್ತಿಗಳನ್ನು ಏನೆನ್ನಬೇಕು?
ವಾಜಪೇಯಿಯನ್ನು ಯಾವ ವಿಚಾರಣೆಗೊಳಪಡಿಸದೇ ಒಂಥರಾ ಬೇಜವಾಬ್ಧಾರಿಯ ಹೇಳಿಕೆ ನೀಡಿವೆ. ವಿಚಾರಣೆಗೊಳಪಡಿಸಿದ್ರೆ ಸ್ಛೋಟಕ ಸಂಗತಿಯನ್ನು ಇವರ ಬಾಯಿಯ ಮೂಲಕ ಹೇಳಿಸುವ ಮೂಲಕ ಹೊಸ ಸತ್ಯ ಸಂಗತಿಯನ್ನು ಸ್ಛೋಟಿಸಬಹುದಿತ್ತು.ಆದರೆ ಇದನ್ನು ಮಾಡುವಂತಹ ಸೌಜನ್ಯ ಲಿಬರ್ಹಾನ್‌ಗೆ ಇರಲಿಲ್ಲ .ಇದಕ್ಕೆ ೧೭ವರ್ಷಗಳನ್ನ ತೆಗೆದದ್ದಾರೂ ಯಾಕೆ ಎಂದು ಪ್ರಶ್ನಿಸಬೇಕಾಗುತ್ತದೆ. ೧೯೮೩ರಲ್ಲಿ ವಿಶ್ವಹಿಂದೂ ಪರಿಷತ್ತ್ ಬಾಬರಿ ಮಸೀದಿಗೆ ಹಾಕಿದ್ದ ಬೀಗವನ್ನು ತೆಗೆಯಲು ಮಾಡಿದ ಹೋರಾಟದಿಂದಿನಿಂದ ೧೯೯೨ರಲ್ಲಿ ಮಸೀದಿಯ ಗೋಪುರ ಹತ್ತುವವರೆಗಿನ ಸಂಗತಿ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದರೂ ಇದರೆಡೆಯಲ್ಲಿ ಗೂಢವಾಗಿರುವ ಗೋಪುರ ಹತ್ತಿದ ನಂತರ ಏನಾಯಿತೆಂಬ ಸಂಗತಿಯನ್ನ ಬಹಿರಂಗಗೊಳಿಸಿಲ್ಲ. ಸಂಘಪರಿವಾರದವರು ಎಷ್ಟೊಂದು ಸಿದ್ಧರಾಗುತ್ತಾರೆಂಬುದಕ್ಕೆ ಇದೇ ಸಾಕ್ಷಿ. ಅದೇನೆಂದರೆ, ಮಸೀದಿಯ ಗೋಪುರ ಹತ್ತಿ ಧ್ವಂಸಕ್ಕೆ ಕೈ ಹಾಕುವಾಗ ಅಲ್ಲಿದ್ದ ಮಾಧ್ಯಮ ಪತ್ರಕರ್ತರನ್ನು ಹುಡುಕಾಡಿ ಓಡಿಸಿದ್ದರು.ಕಾರಣ ಧ್ವಂಸಗೈಯ್ಯುವ ಫೊಟೋ ಮಾಧ್ಯಮದವರಿಗೆ ಸಿಕ್ಕಿದರೆ ಇದಕಿಂತ ದೊಡ್ಡ ಸಾಕ್ಷಿ ಸಿಗಲಾರದೆಂಬ ಕ್ರೂರ ಆಲೋಚನೆಯೊಂದಿಗೆ ಈ ಕೆಲಸವನ್ನೇ ಪೂರ್ವಯೋಜಿತವಾಗಿ ಮಾಡಿ ಮುಗಿಸಿ ಬಾಬರಿಯನ್ನು ಧ್ವಂಸ ಮಾಡಿದ್ದರು. ಇದೊಂದು ಪೂರ್ವಯೋಜಿತವಾಗಿತ್ತೆಂಬುದಕ್ಕೆ ಅನೇಕ ಸಾಕ್ಷಿಗಳಿವೆ. ಕೆಲವೇ ಗಂಟೆಗಳಲ್ಲಿ ಮೂರು ಗುಮ್ಮಟಗೊಳಗೊಂಡ ಬೃಹತ್ ಕಟ್ಟಡವನ್ನು ಹೊಡೆದೊಡೆಸಲು ಪೂರ್ವಯೋಜಿತ ತೀರ್ಮಾನ ಬೇಕಲ್ಲದೇ ಮತ್ತೇನು? ಹಾಗಾಗಿ ಈ ಕೃತ್ಯವನ್ನು ನಡೆಸಿರುವ ನಿಗೂಢ ವ್ಯಕ್ತಿಗಳು, ಹೇಗೆ ನಡೆಸಿದರು, ಇದಕ್ಕಾಗಿ ಯಾವ ರೀತಿಯ ತರಬೇತಿ ನೀಡಲಾಗಿದೆ ಎಂಬುದರ ಬಗ್ಗೆ , ಬಳಸಿದ ಸಲಕರಣೆಗಳ ಬಗ್ಗೆ ಮುಂತಾದ ಸಾಮಾನ್ಯ ಪ್ರಶ್ನೆಗಳಿಗೆ ಲಿಬಾರ್ಹಾನ್ ಉತ್ತರ ಕೊಟ್ಟಿಲ್ಲ. ಇದು ೧೭ ವರ್ಷದ ಸಾಧನೆ!

ಈ ಲಿಬಾರ್ಹಾನ್ ೧೭ ವರ್ಷಗಳ ಹಿಂದೆ ಆಯೋಗವನ್ನು ನೇಮಿಸಿದ್ದೇ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್. ಜನರ ಆಕ್ರೋಶದಿಂದ ತಪ್ಪಿಸಲು ಬಳಸಿದ ಮಾರ್ಗ ಲಿಬರ್ಹಾನ್ ಆಗಿದೆ. ಸಮುದ್ರದಲ್ಲಿ ಮೀನನ್ನು ಹುಡುಕಾಡಿದಂತಾಗಿದೆ. ಬಾಬರಿ ಮಸೀದಿ ಧ್ವಂಸ ಮಾಡಿದ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಲಿಬರ್ಹಾನ್ ಮಾಡುವುದೆಂದು? ಹದಗೆಟ್ಟಿರುವ ನಮ್ಮ ರಾಜಕೀಯ ವ್ಯವಸ್ಥೆಗಳ ನಡುವೆ ಇರುವ ರಾಜಕಾರಣಿಗಳ ನಡುವೆ ಆರೋಪಿಗಳಿಗೆ ಶಿಕ್ಷೆ ಆಗುವುದು ಕಷ್ಟ. ಅದೇನಿದ್ದರೂ ಈ ಆಯೋಗದ ವರದಿ ವರದಿಯಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಿಲ್ಲ. ಗುರುತಿಸಿರುವ ಆರೋಪಿ ಸ್ಥಾನದಲ್ಲಿರುವವರನ್ನು ಮತ್ತೊಮ್ಮೆ ವಿಚಾರಿಸಿ ತನಿಖೆಗೊಳಪಡಿಸಿದರೆ ಬಹಿರಂಗ ಮಾಹಿತಿಯನ್ನು ಕಂಡು ಹಿಡಿಯಬಹುದು. ಈ ಪ್ರಯತ್ನವನ್ನು ಲಿಬರ್ಹಾನ್ ಆಯೋಗ ಮಾಡಬೇಕಾಗಿದೆ. ಅಯೋಧ್ಯೆಯ ಕಟ್ಟಡ ಧ್ವಂಸ ನನ್ನ ಜೀವನದ ದು:ಖಕರ ಸಂಗತಿಯೆನ್ನುವ ಆಡ್ವಾಣಿ ಆಯೋಧ್ಯೆ ಚಳವಳಿಯಲ್ಲಿ ಭಾಗವಹಿಸಿದ್ದರು. ಬಿಜೆಪಿಯ ಹಿರಿಯ ನಾಯಕರುಗಳು ಲಿಬರ್ಹಾನ್ ಆಯೋಗದ ವರದಿಯಲ್ಲಿ ಆರೋಪಿ ಸ್ಥಾನದಲ್ಲಿರುವುದರಿಂದ್ದ ಇದನ್ನು ಆಯೋಗದ ವರದಿ ಸೋರಿಕೆಯಾಗಿತ್ತೆಂದು ಬಿಜೆಪಿ ಆರೋಪಿಸಿತು. ಇದೊಂದು ಆರೋಪವೆಂದು ಆರೋಪಿಸುವ ಬಿಜೆಪಿಗೆ ಈಗ ತನ್ನ ಇದ್ದ ಮಾನ ಮಾರ್ಯಾದೆ ಕಳೆದುಕೊಳ್ಳುವ ಭೀತಿಯಿಂದ ಇಂತಹ ಹೇಳಿಕೆ ನೀಡುವ ಮೂಲಕ ಕಳ್ಳ ಮುಚ್ಚಾಳೆಯಾಟವಾಡುತ್ತಿದೆ. ಒಟ್ಟಾರೆ ವರ್ಷದ ಆದಿಭಾಗದಲ್ಲಿ ಲಿಬರ್ಹಾನ್ ಅಬ್ಬರಿಸಿದೆ. ಜೊತೆಗೆ ಅನರ್ಹ ವರದಿ ಎಂದು ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ. ಆದರೆ ಜನ ಮೋಸ ಹೋಗಲಾರರು ಅಲ್ಲವೇ? ಮಾತ್ರವಲ್ಲ ಪುರಾತತ್ವ ಇಲಾಖೆಯು ಇಲ್ಲಿ ಬಾಬರೀ ಮಸೀದಿ ಇದ್ದ ಜಾಗದಲ್ಲಿ ಮೊದಲು ಶ್ರೀರಾಮಮಂದಿರ ಇತ್ತೆಂದು ಹೇಳಿಕೆ ನೀಡುವ ಬಿಜೆಪಿ ಬಾಬರಿ ಮಸೀದಿ ಇತ್ತೆಂಬುದನ್ನು ಪರೋಕ್ಷವಾಗಿ ಸ್ಪಷ್ಟ ಹೇಳಿಕೆ ನೀಡಿದೆ. ಅಂದರೆ ಮೊದಲಿದ್ದ ಧಾರ್ಮಿಕ ಕೇಂದ್ರ ಬಾಬರಿ ಮಸೀದಿ. ಇದು ವಾಸ್ತವ. ಆದರೆ ಈಗ ಬಿಜೆಪಿ ಆಟವಾಡುತ್ತಿರುವ ಆಟ ಕೇವಲ ದ್ವೇಷದಾಟ. ಆಗುವುದಾಗಲಿ ಎಂಬ ನೆಲೆಯಲ್ಲಿ ಈ ವಿವಾದವನ್ನು ಮತ್ತೆ ಮತ್ತೆ ರಾಮ ಜನ್ಮಭೂಮಿ ಅಂತ ಹೇಳಿಕೆ ನೀಡುತ್ತಿವೆ.
ಬಾಬರಿಯನ್ನು ಮುರುಕಲು ಕಟ್ಟಡವೆಂದು ಹೇಳುವ ಸಂಘಪರಿವಾರ ಇದು ಕರಸೇವಕರ ಶತಮಾನಗಳ ಆಕ್ರೋಶಕ್ಕೆ ಧರಾಶಾಯಿಯಾಗಿ ಉರುಳಿತು ಎಂಬ ಬೇಜವಾಬ್ದಾರಿ ಹೇಳಿಕೆ ನೀಡುವ ಸಂಘಪರಿವಾರ ನಿಜಕ್ಕೂ ಮುಸ್ಲಿಂ ದ್ವೇಷಿಯಲ್ಲವೇ? ಒಂದು ಮಸೀದಿಯನ್ನು ಮುರುಕಲು ಕಟ್ಟಡಕ್ಕೆ ಹೋಲಿಸಿದ ಸಂಘಪರಿವಾರ ರಾಮ ಮಂದಿರ ಅಂತ ಹೇಳಿ ಶ್ರೀರಾಮನ ವ್ಯಕ್ತಿತ್ವಕ್ಕೆ ಕಳಂಕ ತರುವ ಜೊತೆಗೆ ದೇಶವನ್ನು ಒಡೆಯುವ ಪ್ರಯತ್ನ ಮಾಡುತ್ತಿದೆಯೇ ಬದಲು ದೇಶ ಸೇವೆಯನ್ನಲ್ಲ. ರಾಮ ಮಂದಿರ ನಿರ್ಮಾಣ ಸರ್ವ ಹಿಂದೂಗಳ ಬೇಡಿಕೆ ಎಂದಾದರೆ ದಲಿತರು,ಪರಿಶಿಷ್ಟ ಪಂಗಡದವರು ಸಂಘಪರಿವಾರವನ್ನು ವಿರೋಧಿಸುವುದೇಕೆ? ಸಂಘಪರಿವಾರದ ಚಟುವಟಿಕೆಯನ್ನು ವಿರೋಧಿಸುವುದೇಕೆ? ಇಂತಹ ಕಪಟ ಸುಳ್ಳುಗಳ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವ ಸಂಘಪರಿವಾರಕ್ಕೆ ಕೇಂದ್ರ ಸರಕಾರದ ಹಾಗೂ ಉತ್ತರ ಪ್ರದೇಶದಲ್ಲಿ ಮಾಯವತಿ ಸರಕಾರ ಇರುವುದರಿಂದ್ದ ರಾಮ ಮಂದಿರ ನಿರ್ಮಾಣ ಕಾರ್ಯ ಕಷ್ಟವೆಂಬ ಸತ್ಯ ಗೊತ್ತಾಗಿದೆ. ಹಾಗಾಗಿ ಇವು ಮಂದಿರ ನಿರ್ಮಾಣದ ಬಗ್ಗೆ ಮನಸ್ಸು ಮಾಡಬೇಕೆಂದು ಹೇಳುತ್ತಿದೆ.
ವರದಿಯಲ್ಲಿ ತಿಳಿಸಿರುವ ಶಿವಸೇನೆ, ಬಿಜೆಪಿ, ಆರ್‌ಎಸ್ಸೆಸ್ಸ್‌ನ ಆರೋಪಿ ನಾಯಕರನ್ನು ಜಾಸ್ತಿ ದಿನ ಬದುಕಲು ಬಿಡಬಾರದು.ಹಾಗೆಯೇ ಆಯೋಧ್ಯಾ ಆಂದೋಲನವನ್ನು ಅತ್ಯಂತ ಯೋಜಿತವಾಗಿ ಕೈಗೊಳ್ಳಲಾಗಿತ್ತು ಎಂಬುದನ್ನು ಸ್ವತಹ ಬಿಜೆಪಿಯೇ ಒಪ್ಪುತ್ತದೆ. ಬಾಬರಿ ಮಸೀದಿ ಧ್ವಂಸದ ಬಳಿಕ ಹತ್ತು ದಿನಗಳ ಬಳಿಕ ಇದರ ತನಿಖೆಗಾಗಿ ರಚಿಸಲ್ಪಟ್ಟ ಲಿಬಾರ್ಹಾನ್ ಆಯೋಗ ೧೭ ವರ್ಷಗಳಲ್ಲಿ ೪೮ ಬಾರಿ ವಿಸ್ತರಣೆ ಪಡೆದಿದೆ. ಇದರಲ್ಲಿ ಜೊತೆಗೆ ಉಮಾಭಾರತಿ, ವಿನಯ ಕಟಿಯಾರ್, ಅಶೋಕ್ ಸಿಂಘಾಲ್‌ರನ್ನು ಸಹ ಆರೋಪಿಯೆಂದು ಗುರುತಿಸಿದೆ. ಇವರಿಗೆಲ್ಲಾ ಮೋಕ್ಷವನ್ನು ಕೊಡುವ ಬದಲು ಕಾನೂನಿನ ಅಡಿಯಲ್ಲಿ ಎಲ್ಲರಿಗೂ ಶಿಕ್ಷೆ ಸಮಾನ ಅಂತ ನಿರೂಪಿಸುವ ಸಂದರ್ಭ ಬಂದಿದೆ. ಹಾಗಾಗಿ ಕೇಂದ್ರ ಸರಕಾರ ಬಾಬರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳಿಗೆ ಆತಿಥ್ಯ ನೀಡಬೇಕಾಗಿದೆ.
- ಶಂಶೀರ್, ಬುಡೋಳಿ