ಭಟ್ಕಳ:೪ ನಗರದ ನವಾಯತ್ ಕಾಲೋನಿಯ ರಾಷ್ಟ್ರೀಯ ಹೆದ್ದಾರಿ೧೭ ರ ಸನಿಹದಲ್ಲಿರುವ ಜನರಹಿತ ಮನೆಯೊಂದು ಕಳ್ಳತನವಾಗಿದ್ದು ಇದು ಜನವರಿ ೨೮ ರಿಂದ ಫೆ.೩ ರ ಬೆಳಗಿನಜಾವದ ಅವಧಿಯಲ್ಲಿ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಈ ಮನೆಯ ಮಾಲಿಕರು ದುಬೈಯಲ್ಲಿ ವಾಸವಾಗಿದ್ದು ಸದ್ಯ ಇಲ್ಲಿ ಯಾರೂ ಉಳಿಯುತ್ತಿರಲಿಲ್ಲಎನ್ನಲಗಿದೆ. ಯಾರೂ ಇಲ್ಲದೆ ಮಾಹಿತಿಯನ್ನು ಅರಿತ ಕಳ್ಳರು ಶೌಚಾಲಯದ ಕಿಟಕಿಯಿಂದ ಒಳಕ್ಕೆ ನುಗ್ಗಿ ನಗದು ಹಣ,ಚಿನ್ನ ಹಾಗೂ ಬೆಲೆಬಾಳುವ ಸಾಮಗ್ರಿಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ಘಟನೆ ಬುಧವಾರದಂದು ಬೆಳಕಿಗೆ ಬಂದಿದೆ ಪಕ್ಕದ ಮನೆಯವರು ನೀರು ತರಲು ಬಾವಿಯ ಹತ್ತಿರ ಬಂದಾಗ ಮನೆಯ ಕಿಟಕಿ ಬಾಗಿಲು ತೆಗೆದಿರುವುದನ್ನು ಕಂಡು ಸಂಬಂಧಿಕರಿಗೆ ತಿಳಿಸಿದ್ದಾರೆ. ಸಂಬಂಧಿಕರು ಸ್ಥಳಕ್ಕೆ ಬಂದು ನೋಡಿದಾಗ ಬಾಗಿಲು ಚಿಲಕ ಒಡೆದಿರುವುದು, ಬಟ್ಟೆ ಬರೆ, ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದು, ಕಪಾಟು ಒಡೆದಿರುವುದು ಕಂಡು ಬಂದಿದೆ.
ಗಾಬರಿಗೊಂಡ ಇವರು ತಕ್ಷಣ ನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ನಗರ ಠಾಣೆಯ ಕ್ರೈಂ ಎಸೈ ಉಮೇಶ ಕಾಂಬಳೆ ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ. ಕಳ್ಳರು ಮನೆಯಲ್ಲಿನ ಮೂರು ಕೊಟಡಿಯಲ್ಲಿದ್ದ ನಾಲ್ಕು ಕಪಾಟುಗಳನ್ನು ಒಡೆದು ೪೦ ಸಾವಿರ ರೂಪಾಯಿ ನಗದು ಹಾಗೂ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ. ಮಾಲಕರು ದುಬೈನಲ್ಲಿರುವುದರಿಂದ ಚಿನ್ನಾಭರಣಗಳು ಎಷ್ಟಿತ್ತು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಕಪಾಟಿನಲ್ಲಿದ್ದ ವಸ್ತುಗಳು,ಬಟ್ಟೆ ಬರೆ, ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿಯಾಗಿಸಿದ್ದ ಕಳ್ಳರು ಸಹಿ ಮಾಡಿ ಇಡಲಾದ ಚೆಕ್ ಬುಕ್ನ್ನು ಸಹ ಕಳುವು ಮಾಡಿದ್ದಾರೆ. ಮನೆಯಲ್ಲಿನ ಬೆಳ್ಳಿ ವಸ್ತುಗಳನ್ನೂ ಲೂಟಿ ಮಾಡಿದ್ದು ಕಂಡು ಬಂದಿದೆ. ಕಪಾಟು ಒಡೆಯಲು ಮನೆಯಲ್ಲಿನ ಕಬ್ಬಿಣದ ಸಲಾಕೆಗಳನ್ನೇ ಕಳ್ಳರು ಬಳಕೆ ಮಾಡಿದ್ದಾರೆ. ಸಲಾಕೆಯ ಮೇಲೆ ಪಿಂಗರ್ ಪ್ರಿಂಟ್ ಬೀಳುವುದನ್ನು ತಪ್ಪಿಸಲು ವಸ್ತ್ರದಿಂದ ಅದನ್ನು ಹಿಡಿದು ಕೃತ್ಯ ನಡೆಸಿದ್ದಾರೆ. ಮನೆಯೊಳಗಡೆ ಕಳ್ಳರು ಕೈಗೆ ಬಳಿಸಿದ ಗ್ಲೌಸ್ ಸಹ ಪತ್ತೆಯಾಗಿದೆ. ಒಟ್ಟಾರೆಯಾಗಿ ಕಳ್ಳರು ಚಾಣಾಕ್ಷತನದಿಂದ ಕಳ್ಳತನ ನಡೆಸಿದ್ದಾರೆ. ನಿನ್ನೆ ಮಧ್ಯಾಹ್ನ ಸಿ ಪಿ ಐ ಗುರು ಮತ್ತೂರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.