ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ನೇಹಾ ಕೊಲೆ ಪ್ರಕರಣ ಸಿಐಡಿ ತನಿಖೆಗೆ : ಸಿಎಂ ಸಿದ್ದರಾಮಯ್ಯ.

ನೇಹಾ ಕೊಲೆ ಪ್ರಕರಣ ಸಿಐಡಿ ತನಿಖೆಗೆ : ಸಿಎಂ ಸಿದ್ದರಾಮಯ್ಯ.

Tue, 23 Apr 2024 01:40:01  Office Staff   SO News

ಶಿವಮೊಗ್ಗ : ಹುಬ್ಬಳ್ಳಿ ನೇಹಾ ಹಿರೇಮಠ್ ಕೊಲೆ ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿ ಸಿ.ಐ.ಡಿ ತನಿಖೆಗೆ ವಹಿಸಲಾಗುವುದು ಹಾಗೂ ವಿಶೇಷ ನ್ಯಾಯಾಲಯ ಸ್ಥಾಪಿಸಿ ಕಾಲಮಿತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ನಮ್ಮ ಸರ್ಕಾರದ ಸಚಿವರು, ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ಕಾನೂನು ಸಚಿವರಾದ ಹೆಚ್. ಕೆ.ಪಾಟೀಲ್ ಅವರು ಭೇಟಿ ನೀಡಿ ಮೃತಳ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಧಾರವಾಡಕ್ಕೆ ಹೋಗುವ ದಿನ ನಾನು ನೇಹಾಳ ಮನೆಗೆ ಭೇಟಿ ನೀಡುತ್ತೇನೆ.

ಜಾತ್ಯಾತೀತ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿಯವರು ಹುಬ್ಬಳ್ಳಿ - ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಅವರ ಉಮೇದುವಾರಿಕೆಯನ್ನು ಹಿಂಪಡೆದು ಜಾತ್ಯಾತೀತ ಪಕ್ಷ ಕಾಂಗ್ರೆಸ್ ನ್ನು ಬೆಂಬಲಿಸಬೇಕೆಂದು ಅವರಲ್ಲಿ ಮನವಿ ಮಾಡಿದ್ದೇನೆ. ಅವರ ಮಠ ಜಾತ್ಯಾತೀತವಾಗಿದೆ, ಅದೇ ಸಿದ್ಧಾಂತದಲ್ಲಿ ನಂಬಿಕೆಯಿಟ್ಟಿರುವ ನಮಗೆ ಅವರ ಬೆಂಬಲ ಅಗತ್ಯವಿದೆ.

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಇಷ್ಟು ಕೆಳಮಟ್ಟದಲ್ಲಿ ಮಾತನಾಡಬಾರದಿತ್ತು. ಹಿಂದೂಗಳ ಮಂಗಳಸೂತ್ರವನ್ನು ತೆಗೆದು ಮುಸ್ಲಿಮರಿಗೆ ನೀಡುತ್ತಾರೆ ಎನ್ನುವುದು ಅವರ ಸ್ಥಾನಕ್ಕೆ ಅಗೌರವ ತರುವಂಥ ಮಾತುಗಳು. ದೇಶದ ಪ್ರಧಾನ ಮಂತ್ರಿಯಾಗಿ ಎಲ್ಲಾ ಜನಾಂಗವನ್ನು ಸಮಾನವಾಗಿ ನೋಡಿಕೊಳ್ಳುವ ಕರ್ತವ್ಯ ಅವರದ್ದು. ಇಂಥ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ.

ಸಮಾನವಾಗಿ ಆಸ್ತಿ ಹಂಚಿಕೆಯಾಗುವುದು ಸಾಮಾಜಿಕ ನ್ಯಾಯ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಅಸಮಾನತೆ ಹೋಗಬೇಕಾದರೆ ಅಧಿಕಾರ ಮತ್ತು ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕೆಂದು ಹೇಳಿದ್ದಾರೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಲ್ಲಿ ನಮಗೆ ನಂಬಿಕೆ ಇದೆ.

ಬಿಜೆಪಿ ಪಕ್ಷ ಇಂದು ಬಿಡುಗಡೆ ಮಾಡಿರುವ ಜಾಹಿರಾತು ಅವರ ಯೋಗ್ಯತೆಗೆ ತಕ್ಕುದ್ದಾಗಿದೆ. ಹೆಣ್ಣುಮಕ್ಕಳಿಗೆ ಉಚಿತ ಬಸ್ ಸೌಲಭ್ಯ, ಉಚಿತ ವಿದ್ಯುತ್, ಅನ್ನಭಾಗ್ಯ ಯೋಜನೆಗಳು ಡೇಂಜರ್ ಆಗುತ್ತವೆಯೇ? ಸಮಾಜವನ್ನು ಒಡೆಯುವಂತಹ ಕಾರ್ಯಗಳು, ಮತಗಳ ಧ್ರುವೀಕರಣ ಮಾಡುವುದು ಅಪಾಯಕಾರಿಯೇ ಹೊರತು, ವಿವಿಧತೆಯಲ್ಲಿ ಏಕತೆಯನ್ನು ತರುವುದು ಡೇಂಜರ್ ಅಲ್ಲ. ದೇಶಕ್ಕೆ ಬಿಜೆಪಿ ಪಕ್ಷವೇ ಡೇಂಜರ್ ಹೊರತು, ಕಾಂಗ್ರೆಸ್ ಪಕ್ಷ ಅಲ್ಲ.

ಕಾನೂನು ಪ್ರಕಾರ ಐಟಿ, ಇಡಿ ಸಂಸ್ಥೆಗಳು ದಾಳಿ ಮಾಡುವುದನ್ನು ನಾವು ಎಂದೂ ವಿರೋಧಿಸುವುದಿಲ್ಲ. ಆದರೆ ಬಿಜೆಪಿಯಲ್ಲಿ ಶ್ರೀಮಂತರಿಲ್ಲವೇ, ಯಡಿಯೂರಪ್ಪ, ವಿಜಯೇಂದ್ರ ಭ್ರಷ್ಟಾಚಾರ ಮಾಡಿಲ್ಲವೇ? ಶೋಭಾ ಕರಂದ್ಲಾಜೆ, ಅಶೋಕ್, ಬಸವರಾಜ್ ಬೊಮ್ಮಾಯಿ ಸೇರಿದಂತೆ ಬಿಜೆಪಿಯವರ ಮೇಲೆ ರೇಡ್ ಗಳು ಏಕೆ ಆಗುತ್ತಿಲ್ಲ? ಆದಾಯ ತೆರಿಗೆಯನ್ನು ಸರಿಯಾಗಿ ಕಟ್ಟದವರ ಮೇಲೆ ಕ್ರಮವಾಗಲಿ, ಆದರೆ ಒಬ್ಬರ ಮೇಲೆ ರೇಡ್ ಮಾಡಿ ಮತ್ತೊಬ್ಬರನ್ನು ಬಿಡುವ ಬದಲು, ಆದಾಯ ಮೀರಿ ಆಸ್ತಿ ಸಂಪಾದಿಸಿದ ಎಲ್ಲರ ಮೇಲೆ ಕಾನೂನು ಕ್ರಮವಾಗಬೇಕು.


Share: