ಬೆಂಗಳೂರು, ಡಿ.5: ಅಕ್ರಮ ಗಣಿಗಾರಿಕೆಯನ್ನು ಪೋಷಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರದಿಂದ ತೊಗಲಬೇಕು ಆವರೆಗೆ ಪಕ್ಷ ತನ್ನ ಹೋರಾಟವನ್ನು ನಿರಂತರವಾಗಿ ಮುಂದುವರಿಸಲಿದೆ ಕಾಂಗ್ರೆಸ್ ಮುಖಂಡರು ಘೋಷಿಸಿದ್ದಾರೆ. ಸಂಜೆ ರಾಜ್ಯಪಾಲರಿಗೆ ರಾಜ್ಯ ಸರಕಾರದ ವಿರುದ್ಧ ದೂರು ನೀಡಿದ್ದಾರೆ.
ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ವಹಿಸಬೇಕು, ಬಳ್ಳಾರಿಯ ಗಣಿಧಣಿಗಳನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು, ಬಿಬಿಎಂಪಿ ಅವ್ಯವಹಾರಗಳನ್ನು ಸಿಬಿಐ ತನಿಖೆ ನಡೆಸಬೇಕು, ವಿದ್ಯುತ್‌ದರ ಏರಿಕೆಯನ್ನು ಕೈಬಿಡಬೇಕು, ಸಮರ್ಪಕ ವಿದ್ಯುತ್ ಪೂರೈಕೆ, ಪಡಿತರ ಚೀಟಿ ಅವ್ಯವಸ್ಥೆ ಸರಿಪಡಿಸಬೇಕು ಎಂಬವು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಬನ್ನಪ್ಪ ಪಾರ್ಕ್‌ನಲ್ಲಿ ಕೆಪಿಸಿಸಿ ಮುಖಂಡರು ಒಂದು ದಿನದ ಸಾಂಕೇತಿಕ ಧರಣಿ ನಡೆಸಿತು.
ಬೆಳಗ್ಗೆ ೧೧ ಗಂಟೆಯಿಂದ ಆರಂಭವಾದ ಧರಣಿ ಸಂಜೆ ನಾಲ್ಕು ಗಂಟೆಯವರೆಗೂ ನಿರಂತರವಾಗಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಳ್ಳಾರಿಯ ಗಣಿಧಣಿಗಳ ವಿರುದ್ಧ ಕಿಡಿಕಾರಿದರು.
ಉತ್ತರ ಕರ್ನಾಟಕ ಭಾಗದ 15 ಜಿಲ್ಲೆಗಳ ಜನ ನೆರೆಯಿಂದ ಸಂತ್ರಸ್ಥರಾಗಿದ್ದಾಗ ಬಿಜೆಪಿ ಮುಖಂಡರು ಅಧಿಕಾರ ಉಳಿಸಿಕೊಳ್ಳಲು ರಾಜಕೀಯ ಕಸರತ್ತಿನಲ್ಲಿ ತೊಡಗಿದ್ದರು.
ಇಂತಹವರಿಂದ ಜನಪರ ಆಡಳಿತ ನೀಡಲು ಸಾಧ್ಯವಾಗುವುದಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೂಗೆಯುವವರೆಗೂ ವಿರಮಿಸುವುದಿಲ್ಲ, ಕಾಂಗ್ರೆಸ್ ಹಂತ ಹಂತವಾಗಿ ಹೋರಾಟವನ್ನು ಮುಂದುವರಿಸಲಿದೆ ಎಂದು ಮುಖಂಡರು ಘೋಷಿಸಿದರು.
ಅಕ್ಟೋಬರ್ 6 ರಂದು ವಿಧಾನಸೌಧ ಮುತ್ತಿಗೆ ನಡೆಸಲಾಯಿತು. ಇಂದು ಧರಣಿ ನಡೆದಿದೆ. ಇದೇ ತಿಂಗಳ 6 ರಿಂದ 8 ನೆ ತಾರೀಖಿನವರೆಗೆ ಮೂರು ದಿನಗಳ ವರೆಗೆ ತಾಲೂಕು ಮಟ್ಟದಲ್ಲಿ ಧರಣಿ ನಡೆಸಲಾಗುವುದು ಕಾಂಗ್ರೆಸ್ ಘೋಷಿಸಿತ್ತು.
ಬಿಬಿಎಂಪಿಯಲ್ಲಿ ವರ್ಕ್ ಕೋಡ್ ಯೋಜನೆಯಡಿ ಸುಮಾರು ೧೦ ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಕೇಂದ್ರ ಸರಕಾರದಿಂದ ಬಂದಿರುವ ಹಣವನ್ನು ರಾಜ್ಯ ಸರಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ವರ್ಕ್‌ಕೋಡ್ ಹಗರಣದಲ್ಲಿ ಬಿಬಿಎಂಪಿ ಅಧಿಕಾರಿಗಳು ಮುಖ್ಯಮಂತ್ರಿಯೊಂದಿಗೆ ನೇರ ಸಂಪರ್ಕದಲ್ಲಿದ್ದುಕೊಂಡು ಅವ್ಯವಹಾರ ನಡೆಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಆರೋಪಿಸಿದರು. ಬಿಬಿಎಂಪಿ ಹಗರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ನೆರೆ ಸಂತ್ರಸ್ಥರಿಗೆ ಕೇಂದ್ರ ಸರಕಾರ ನೀಡಿರುವ ಅನುದಾನ ಮತು ದಾನಿಗಳು ನೀಡಿರುವ ಹಣ ಹೊರತು ಪಡಿಸಿ ರಾಜ್ಯ ಸರಕಾರದ ಬೋಕ್ಕಸದಿಂದ ಹಣ ಖರ್ಚು ಮಾಡಲಾಗಿಲ್ಲ ಎಂದು ಅವರು ಆರೋಪಿಸಿದರು.
ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ವಿ.ಎಸ್.ಉಗ್ರಪ್ಪ ಅಕ್ರಮ ಗಣಿಗಾರಿಕೆಯ ಕುರಿತು ವಿವರಿಸಿದರು. ಸಮುದ್ರ ಮಟ್ಟದಿಂದ ೯೪೫ ಮೀಟರ್ ಎತ್ತರದಲ್ಲಿ ೩೨ ಕಿಲೋ ಮೀಟರ್ ಉದ್ದ ಸುಮಾರು ಅರ್ಧ ಕಿ.ಮೀ. ಅಗಲ ಅದಿರು ತೆಗೆಯಲಾಗಿದೆ.
ಲೋಕಾಯುಕ್ತರ ವರದಿ, ಅರಣ್ಯ ಇಲಾಖೆಯ ಉನ್ನತಾಧಿಕಾರಿ ಯು.ವಿ.ಸಿಂಗ್, ಹೈಕೋರ್ಟ್ ವಿಚಾರಣೆ, ಸುಪ್ರೀಂ ಕೋರ್ಟ್‌ಗಳು ವಿಚಾರಣೆ ನಡೆಸಿದ ನಂತರ ನೀಡಿರುವ ಅಭಿಪ್ರಾಯಗಳು, ಕೇಂದ್ರ ಸರಕಾರದ ಉನ್ನಾಧಿಕಾರ ಸಮಿತಿ ಮತ್ತು ತಾವು ನಡೆಸಿರುವ ತನಿಖಾ ವರದಿಗಳೇಲ್ಲಾ ಗಡಿ ಒತ್ತುವರಿ ನಡೆದಿರುವುದು ಹಾಗೂ ಅಕ್ರಮ ಗಣಿಗಾರಿಕೆ ನಡೆದಿರುವುದು ಖಚಿತ ಪಟ್ಟಿದೆ ಆದರೂ, ಯಾವುದೇ ಅಕ್ರಮಗಣಿಗಾರಿಕೆ ನಡೆಯುತ್ತಿಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಿರುವುದು ನಾಚಿಕೆಗೇಡು ಎಂದು ಉಗ್ರಪ್ಪ ಕಿಡಿಕಾರಿದರು.