ಭಟ್ಕಳ, ಫೆಬ್ರವರಿ ೦೯: ಭಟ್ಕಳ ತಾಲೂಕಿನಲ್ಲಿ ಕಳೆದ ನಲವತ್ತು ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಮಾಡುತ್ತಿದ್ದು ಅವರು ಈಗಾಗಲೆ ಮನೆಗೆ ಸಂಬಂಧಸಿದಂತೆ ನೀರಿನ ಕರ, ಮನೆ ತೆರಿಗೆ ಎಲ್ಲವನ್ನು ಭರಣ ಮಾಡುತ್ತ ಬಂದಿದ್ದು ಈಗ ದಿಡೀರನೆ ಅರಣ್ಯ ಅಧಿಕಾರಿಗಳು ಅವರನ್ನು ಒಕ್ಕಲೆಬ್ಬಿಸುವಂತೆ ನೋಟಿಸು ಜಾರಿ ಮಾಡಿದ್ದರ ವಿರುದ್ದ ಇಂದು ಅರಣ್ಯ ಅತಿಕ್ರಮಣ ಹೋರಾಟ ವೇದಿಕೆ ಹಾಗೂ ಇಲ್ಲಿನ ವಿವಿಧ ಸಂಘ ಸಂಸ್ಥೆಗಳೊಂದಿಗೆ ಸೇರಿ ಬೃಹತ್ ಪ್ರತಿಭಟನೆಯನ್ನು ನಡೆಸಿ ಶಮ್ಸುದ್ದೀನ್ ವೃತ್ತದಲ್ಲಿರುವ ವಲಯ ಅರಣ್ಯ ಅಧಿಕಾರಿಗಳ ಕಛೇರಿಗೆ ಮುತ್ತಿಗೆಯನ್ನು ಹಾಕಿತು. ಸಾವಿರಾರು ಸಂಖ್ಯೆಯಲ್ಲಿ ನೆರೆದ ನಾಗರೀಕರು ಅರಣ್ಯ ಅಧಿಕಾರಿಗಳ ವಿರುದ್ಧ ಘೋಷಣೆಯನ್ನು ಕೂಗಿ ಅತಿಕ್ರಮಣ ತೆರವುಗೊಳಿಸುವಂತೆ ನೋಟಿಸು ನೀಡುತ್ತಿರುವುದನ್ನು ತೀವ್ರವಾಗಿ ವಿರೋಧಿಸಿದರು.
ಅತಿಕ್ರಮಣದಾರರ ಹೋರಾಟ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ ಅವರ ನೇತೃತ್ವದಲ್ಲಿ ಇಂದು ಸಾವಿರಾರು ಜನರು ಭೃಹತ್ ಮೆರವಣಿಗೆಯಲ್ಲಿ ಬಂದು ಮುತ್ತಿಗೆ ಹಾಕಿ ತೀವ್ರ ಪ್ರತಿಭmನೆಯನ್ನು ನಡೆಸಿದರು. ಈ ಪ್ರತಿಭಟನಾ ಮೆರವಣಿಗೆ ಮತ್ತು ಅರಣ್ಯ ಅಧಿಕಾರಿ ಕಛೇರಿ ಮುತ್ತಿಗೆ ಕಾರ್ಯಕ್ರಮಕ್ಕೆ ಇಲ್ಲಿನ ಪ್ರತಿಷ್ಟಿತ ಸಮಾಜ ಸೇವೆ ಹಾಗೂ ರಾಜಕೀಯ ಸಂಘಟನೆಯಾದ ಮಜ್ಲಸೆ ಇಸ್ಲಾಹ್-ವ-ತಂಝೀಮ್ ಸೇರಿದಂತೆ ನಗರದ ವಿವಿಧ ಸಂಘಸಂಸ್ಥೆಗಳು ಸಂಪೂರ್ಣ ಬೆಂಬಲವನ್ನು ಸೂಚಿಸಿ ಅದರಲ್ಲಿ ಭಾಗವಹಿಸಿದ್ದವು.







ಬೆಳಿಗ್ಗೆ ಇಲ್ಲಿನ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢ ಶಾಲೆಯ ಆವರಣದಲ್ಲಿ ಮಹೀಳೆಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಬಂದು ಸೇರಿದ ಜನರು ಮೆರವಣಿಗೆಯ ಮೂಲಕ ರಾ.ಹೆ.೧೭ರ ಸಮ್ಸುದ್ದೀನ್ ವೃತ್ತದಲ್ಲಿರುವ ವಲಯ ಅರಣ್ಯ ಇಲಾಖೆಯ ಕಚೇರಿಯನ್ನು ಹಾಕಿದರು.


ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಮಾ ಮೊಗೇರ ಅವರು ಕಳೆದ ೪೦ ವರ್ಷಗಳಿಂದ ಅತಿಕ್ರಮಣ ಮಾಡಿ ಮನೆಗಳನ್ನು ನಿರ್ಮಿಸಿಕೊಂಡು ಬದುಕು ಸಾಗಿಸುತ್ತಿರುವ ಬಡಜನತೆಯನ್ನು ಅಲ್ಲಿಂದ ಒಕ್ಕಲೆಬ್ಬಿಸುಂತೆ ಇದೀಗ ಭಟ್ಕಳಕ್ಕೆ ಬಂದ ಎ.ಸಿ.ಎಫ್ ಎಲ್ಲಾ ಬಡ ಅತಿಕ್ರಮಣದಾರರಿಗೆ ನೋಟಿಸನ್ನು ಜಾರಿ ಮಾಡಿ ಅವರಿಗೆ ಕಿರುಕುಳವನ್ನು ನೀಡುತ್ತಿರು ಸರಿಯಾದ ಕ್ರಮವಲ್ಲ, ಯಾವುದೇ ಕಾರಣಕ್ಕೂ ಅರಣ್ಯ ಪ್ರದೇಶಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡಿಕೊಂಡು ಬಂದಿರುವ ಅತಿಕ್ರಮಣದಾರರಿಗೆ ಒಕ್ಕಲೆಬ್ಬಿಸುವ ಅಧಿಕಾರ ಯಾರು ನೀಡಿದರು ಎಂದು ಸವಾಲೆಸೆದರು. ಬಡ ಜನತೆಯನ್ನು ಹೀಗೆ ಏಕಾಎಕಿ ನೋಟಿಸು ಜಾರಿ ಮಾಡಿ ಅವರನ್ನು ಖುಲ್ಲಾ ಪಡಿಸಬೇಕೆಂಬ ಇಲಾಖೆಯ ಈ ಕ್ರಮ ತೀರಾ ಖಂಡನೀಯವಾಗಿದ್ದು ಯಾವುದೇ ಕಾರಣಕ್ಕೂ ಮನೆಯನ್ನು ಕಟ್ಟಿ ವಾಸ್ತವ್ಯ ಮಾಡುವವರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದರು.

ಕೇವಲ ಜನರನ್ನು ಹೆದರಿಸುವುದಕ್ಕಾಗಿ ಸುಪ್ರೀಂ ಕೋರ್ಟ ಆದೇಶವಾಗಿದೆ ಎನ್ನುತ್ತಿರುವ ಅಧಿಕಾರಿಗಳು, ಅದೇ ಸುಪ್ರೀಂ ಕೋರ್ಟ್ ಯಾವೊಬ್ಬನನ್ನು ಅತಿಕ್ರಮಣದಿಂದ ಹೊರ ಹಾಕುವುದಿದ್ದಲ್ಲಿ ಆತನಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದೂ ಹೇಳಿದೆ ಎನ್ನುವುದನ್ನು ಯಾಕೆ ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು. ಭಟ್ಕಳದಲ್ಲಿ ಅತಿಕ್ರಮಣ ಮಾಡಿ ಮನೆಕಟ್ಟಿದವರನ್ನು ಯಾರನ್ನೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಯಾರೇ ಆದರೂ ಹೊಸದಾಗಿ ಅತಿಕ್ರಮಣ ಮಾಡುತ್ತಿರುವುದು ಕಂಡು ಬಂದಲ್ಲಿ ಇಲಾಖೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ನಮ್ಮ ಅಭ್ಯಂತರವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ಜಿಲ್ಲಾ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ದೇವರಾಜ ಮರಾಠಿ ಮಾತನಾಡಿ ಬಡ ಜನರು ಗುಂಟೆ, ಎರಡು ಗುಂಟೆ ಅತಿಕ್ರಮಣ ಮಾಡಿ ಮನೆಕಟ್ಟಿಕೊಂಡಿದ್ದಾರೆ. ಅವರ ಕುರಿತು ನಮ್ಮ ಜನಪ್ರತಿನಿಧಿಗಳಿಗೆ ಕಾಳಜಿಯಿಲ್ಲ. ವಿಧಾನ ಸೌಧದಲ್ಲಿ ಈ ಕುರಿತು ಚರ್ಚಿಸುವ ಕುರಿತೂ ಚಿಂತಿಸದ ಇಂತಹ ಜನ ಪ್ರತಿನಿಧಿಗಳು ನಮಗೆ ಬೇಕೇ ಎಂದರು.
ಮುಂಡಗೋಡದ ಟಿಬೇಟಿಯನ್ ಕಾಲೋನಿಯಲ್ಲಿ ಟಿಬೇಟಿಯನ್ನರು ಅತಿಕ್ರಮಣ ಮಾಡಿದ್ದನ್ನು ಅಧಿಕಾರಿಗಳು ನೋಡುತ್ತಿರುತ್ತಾರೆ. ಆದರೆ ಇಲ್ಲಿ ನಮ್ಮವರ ಮೇಲೆ ದೌರ್ಜನ್ಯವಾಗುತ್ತಿದೆ. ಯಾರು ಅತಿಕ್ರಮಣದಾರರ ಮೇಲೆ ದೌರ್ಜನ್ಯವನ್ನು ಮಾಡುವರೋ ಅಂತಹ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕೆಂದು ಅವರು ಆಗ್ರಹಿಸಿದರು.
ತಂಝೀಮ್ ಕಾರ್ಯದರ್ಶಿ ಇನಾಯತುಲ್ಲಾ ಶಾಬಂದ್ರಿ, ಸಮಾಜ ಸೇವಕ ಸೈಯದ್ ಹಸನ್ ಬರ್ಮಾವರ್, ಸಿ.ಪಿ.ಐ.(ಎಂ) ಜಿಲ್ಲಾ ಸಮಿತಿ ಮುಖಂಡ ಸುಭಾಷ್ ಕೊಪ್ಪಿಕರ್, ಶಮೀಮ್ ಬಾನು ಮುಂತಾದವರು ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದರು.
ಈ ಪ್ರತಿಭಟನಾ ಮೆರವಣಿಗೆಯಲ್ಲಿ ತಂಝೀಮ್ ಸಂಸ್ಥೆಯ ಅಧ್ಯಕ್ಷ ಡಾ. ಬದ್ರುಲ್ ಹಸನ್ ಮುಅಲ್ಲಿಮ್, ಪ್ರಧಾನ ಕಾರ್ಯದರ್ಶಿ ಎಸ್.ಜೆ.ಖಾಲೀದ್, ಜೆ.ಡಿ.ಎಸ್. ಮುಖಂಡ ಎಂ.ಡಿ.ನಾಯ್ಕ ಪ್ರಮುಖರಾದ ಜೈನುಲ್ಲಾಬಿದೀನ್ ಫಾರೂಕಿ, ಅಬ್ದುಲ್ ರಹೀಂ ಸಾಹೇಬ್, ಅಬ್ದುಲ್ ಮಾಜೀದ್ ಕೋಲಾ, ಪುರಸಭಾ ಸದಸ್ಯರುಗಳಾದ ಕೆ.ಎಂ.ಅಷ್ಪಾಕ್, ಕೆ.ಪಿ.ಪೈ ಮುಂತಾದವರು ಭಾಗವಹಿಸಿದ್ದರು.
.