ಹೊಸದಿಲ್ಲಿ, ಎ. 29: ಅಲ್ಪ ಸಂಖ್ಯಾತರ ಏಳಿಗೆಗಾಗಿ ರಚಿಸಿದ ರಂಗನಾಥ್ ಮಿಶ್ರ ಮತ್ತು ಸಾಚಾರ್ ಸಮಿತಿ ವರದಿಗಳು ಲೋಕಸಭೆಯಲ್ಲಿ ಗುರುವಾರ ಬಿಸಿ ಚರ್ಚೆಗೆ ಕಾರಣವಾಯಿತು. ಸರಕಾರವು ಮುಸ್ಲಿಂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಸಮಾಜವಾದಿ ಪಕ್ಷದ ಸೋದೋಗ್ಯಿ ಮುಲಾಯಂ ಸಿಂಗ್ ಯಾದವ್ ತಮ್ಮ ಪಕ್ಷದ ಸಂಸದರೊಂದಿಗೆ ಸಂಸತ್ತು ಕಲಾಪದಿಂದ ಹೊರ ನಡೆದರು.
ಈ ಅವಕಾಶವನ್ನು ಬಳಸಿಕೊಂಡ ಬಿಜೆಪಿ ಸದಸ್ಯರು, ಮುಸ್ಲಿಂ ಪ್ರಾಬಲ್ಯದ ಪ್ರದೇಶ, ಅದರಲ್ಲೂ ಕೊಳೆಗೇರಿಯಲ್ಲಿ ನೀರು ಮತ್ತು ವಿದ್ಯುತ್ ಸೇರಿದಂತೆ ಸಾಮಾಜಿಕ ಸೌಲಭ್ಯ ಒದಗಿಸಲು ಅನುದಾನವನ್ನು ಉಪಯೋಗಿಸಿಲ್ಲ ಎಂದು ಅಸಮಾಧಾನವನ್ನು ಪ್ರದರ್ಶಿಸಿದರು. ಸಾಚಾರ್ ಸಮಿತಿ ಶಿಫಾರಸುನ್ನು ಅನುಷ್ಠಾನಗೊಳಿಸುವ ಕುರಿತು ಕೇಳಲಾದ ಪ್ರಶ್ನೆಯೊಂದಕ್ಕೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸಲ್ಮಾನ್ ಖರ್ಷಿದ್ ಪ್ರತಿಕ್ರಿಸುವ ಸಂದರ್ಭ ವಿಷಯವು ಚರ್ಚೆಗೆ ಬಂತು.
‘‘ಮಹಿಳೆಯರಿಗಾಗಿ ಸರಕಾರಿ ಉದ್ಯೋಗದಲ್ಲಿ ಮಿಸಲಾತಿ ನೀಡಿರುವಂತೆ ಮುಸ್ಲಿಮರಿಗೆ ಮಿಸಲಾತಿ ನೀಡಲು ಸವಿಂಧಾನ ತಿದ್ದುಪಡಿ ಮಾಡಲು ಸರಕಾರ ಸಿದ್ಧವಾಗಿದೆಯೇ ಎಂದು ಲಾಲೂ ಪ್ರಸಾದ್ ಯಾದವ್ ಪ್ರಶ್ನಿಸಿದಾಗ ಸಲ್ಮಾನ್ ಖುರ್ಷಿದ್, ‘‘ ನಿಮ್ಮ ಸಲಹೆಗೆ ಆಭಾರಿಯಾಗಿದ್ದೇನೆ. ಆದರೆ ನೀವು ಏನು ಪ್ರಶ್ನೆ ಕೇಳಿದ್ದಿರಿ ಎಂಬುದು ಗೊತ್ತಿಲ್ಲ’’ ಎಂದು ಹೇಳಿದರು. ಲಾಲೂ ಮತ್ತು ಮುಲಾಯಂ ಸಿಂಗ್ ಸಮರ್ಪಕ ಉತ್ತರ ನೀಡುವಂತೆ ಅಗ್ರಹಿದರು. ನಂತರ ಇವರ ನೇತೃತ್ವದಲ್ಲಿ ಪಕ್ಷದ ಸದಸ್ಯರು ಸಭಾ ತ್ಯಾಗ ನಡೆಸಿದರು.
ಪರಿಸ್ಥಿತಿಯ ನಿಯಂತ್ರಣಕ್ಕೆ ಪ್ರಯತ್ನಿಸಿದ ಸ್ಪೀಕರ್ ಮೀರಾ ಕುಮಾರ್ ‘‘ನೀವು ಈ ಕುರಿತು ನೋಟಿಸು ನೀಡಿದರೆ, ಆ ವಿಷಯದ ಕುರಿತು ಪ್ರತ್ಯೇಕ ಚರ್ಚೆ ಮಾಡಬಹುದು’’ ಎಂದರು. ಇದಕ್ಕೂ ಮುಂಚೆ ಬಿಜೆಪಿ ಸದಸ್ಯರೊರ್ವರು, ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ಸಾಮಾಜಿಕ ಸೌಲಭ್ಯಗಳ ಅಭಿವೃದ್ಧಿಗೆ ಅನುದಾನ ಬಳಕೆಯಾಗಿಲ್ಲ ಎಂದು ಆರೋಪಿಸಿದರು. ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಸಂಸದರು ಪ್ರತಿನಿಧಿಸುವ ಎಲ್ಲ ಕ್ಷೇತ್ರಗಳಿಗೆ 2 ಕೋಟಿ ರೂ. ಹಂಚಿಕೆ ಮಾಡಲಾಗಿದೆ.
ಈ ಅನುದಾನದ ಮೂಲಕ ಅಭಿವೃದ್ಧಿ ಕಾರ್ಯ ನಡೆಸಬಹುದು ಎಂದು ಸಚಿವ ಸಲ್ಮಾನ್ ಖುರ್ಷಿದ್ ಸಲಹೆ ನೀಡಿದರು. ಬಿಜೆಪಿ ನಾಯಕ ಶಾಹನವಾಝ್ ಹುಸೈನ್ ಸರಕಾರವು ಜವಾಬ್ದಾರಿಯಿಂದ ನುಣುಚಿಕೊಂಡಿದೆ ಎಂದು ಆರೋಪ ಮಾಡುವ ಮೂಲಕ ಸದನವು ಇನ್ನಷ್ಟು ಕೆರಳಿತು. ಸರಕಾರ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯನ್ನು ವಜಾ ಮಾಡುವಂತೆ ಮನವಿ ಮಾಡಿದರು. ಅವರಿಗೆ ಆರ್‌ಜೆಡಿ, ಸಮಾಜವಾದಿ ಪಕ್ಷ, ಬಿಜೆಡಿ ಮತ್ತು ಇತರ ವಿರೋಧ ಪಕ್ಷದ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ‘‘ನಿಮ್ಮ ಯೋಜನೆ ನಿಮ್ಮಲ್ಲೇ ಇರಲಿ. ಆದರೆ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯನ್ನು ವಜಾ ಮಾಡಿ’’ ಎಂದು ಲಾಲೂ ಪ್ರಸಾದ್ ಸಚಿವರಿಗೆ ಹೇಳಿದರು.