ಬೆಂಗಳೂರು, ಫೆಬ್ರವರಿ 24:ಮದ್ಯಪಾನ ದುಶ್ಚಟದಿಂದ ನಾಗರೀಕರನ್ನು ಹೊರತರುವ ಸಲುವಾಗಿ ಹೃದಯ ಪರಿವರ್ತನೆ ಆಂದೋಲನವನ್ನು ನಡೆಸುವುದಾಗಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಅವರು ತಿಳಿಸಿದರು.
ಮದ್ಯಪಾನ ಸಂಯಮ ಮಂಡಳಿಯ ಕಚೇರಿಯಲ್ಲಿ ಇಂದು ಮಧ್ಯಾಹ್ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರ ಆದರ್ಶದಲ್ಲಿ ನಂಬಿಕೆ ಇಟ್ಟಿರುವ ತಾವು ಮದ್ಯವ್ಯಸನಿಗಳಿಂದ ಮದ್ಯಪಾನ ಚಟ ವಿಮುಕ್ತಿಗೆ ಕಾನೂನು ಜಾರಿಗಿಂತಲೂ ಹೃದಯ ಪರಿವರ್ತನೆ ಆಂದೋಲನವನ್ನು ಸಾಮಾಜಿಕ ಕಳಕಳಿಯುಳ್ಳ ಧರ್ಮಾಧಿಕಾರಿಗಳ ಸಹಕಾರದಲ್ಲಿ ಹಮ್ಮಿಕೊಳ್ಳುವ ಮೂಲಕ ಮದ್ಯಪಾನ ಮುಕ್ತ ಸಮಾಜ ಸ್ಥಾಪಿಸಲು ಪ್ರಯತ್ನಿಸುವುದಾಗಿ ಅವರು ಆಶ್ವಾಸನೆ ನೀಡಿದರು.
ಮದ್ಯಪಾನಕ್ಕೆ ಸಮಾಜ ಅಧಿಕೃತ ಮಾನ್ಯತೆ ನೀಡಿರುವ ಜೊತೆಗೆ ನಾಗರೀಕರು ಮದ್ಯಪಾನ ಮಾಡುವುದು ಘನತೆಯ ವಿಷಯವೆಂದು ಭಾವಿಸಿರುವುದರಿಂದ ಈ ಮಂಡಳಿಯ ಕೆಲಸವು ಪ್ರವಾಹಕ್ಕೆ ವಿರುದ್ಧವಾಗಿ ಈಜುವಂತಹ ಸಾಹಸವಾಗಿದೆ. ಆದ್ದರಿಂದ ಜನರಿಗೆ ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳ ಬಗೆ ಮಾಹಿತಿಯನ್ನು ನೀಡುವ ಸಲುವಾಗಿ ವಿವಿಧ ಇಲಾಖೆಗಳೊಡನೆ ಮುಖ್ಯವಾಗಿ ಶಿಕ್ಷಣ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾವುದೆಂದರು. ಪತ್ರಕರ್ತರು ಸಮಾಜಕ್ಕೆ ಸಲಹೆ ನೀಡುವವರಾಗಿರುವುದರಿಂದ ಅವರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವ ಮೂಲಕ ಪ್ರಚಾರಕ್ಕೆ ಆದ್ಯತೆ ನೀಡದೆ ಮದ್ಯಪಾನ ನಿರ್ಮೂಲನಕ್ಕಾಗಿ ಆಂದೋಲನವನ್ನು ನಡೆಸಲಾಗುವುದು ಎಂದು ತಿಳಿಸಿದರು.